Menu

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಪಂದ್ಯ: ಇನ್ನೂ ಕ್ಲಿಯರೆನ್ಸ್‌ ನೀಡಿಲ್ಲವೆಂದ ಪರಮೇಶ್ವರ್‌

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಪಂದ್ಯ ನಡೆಯುವುದಕ್ಕೆ ನಮ್ಮ ಕಡೆಯಿಂದ ಇನ್ನೂ ಕ್ಲಿಯರೆನ್ಸ್ ನೀಡಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಜಸ್ಟೀಸ್ ಕುನ್ಹಾ ಅವರ ವರದಿಯ ಶಿಫಾರಸು ಪಾಲಿಸಬೇಕು ಅಂತ ಹೇಳಿದ್ದೇವೆ, ಸರ್ಕಾರದಿಂದ ಜಿಬಿಎ ಹಾಗೂ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಮಿತಿ ಕೂಡ ರಚಿಸಲಾಗಿತ್ತು. ಸಮಿತಿಯು ಒಂದಷ್ಟು ಶಿಫಾರಸು ಮಾಡಿದೆ. ನಮ್ಮ ಕಡೆಯಿಂದ ಕ್ಲಿಯರೆನ್ಸ್ ಸಿಗಬೇಕಿದೆ. ಬುಧವಾರ ಸಭೆ ಕರೆಯಾಗಿದೆ, ಸರ್ಕಾರದ ಹಂತದಲ್ಲಿ ಏನು ಮಾಡಬೇಕು, ಅವರಿಗೆ ಏನು ಸೂಚನೆ ಕೊಡಬೇಕು ಎಂದು ಚರ್ಚಿಸುವುದಾಗಿ ಹೇಳಿದ್ದಾರೆ.

ಸಿಎಂ ಜತೆಗೂ ಚರ್ಚೆ ಮಾಡಬೇಕಾಗಿದೆ. ನಮ್ಮ ಶಿಫಾರಸನ್ನು ಅವರು ಎಷ್ಟರ ಮಟ್ಟಿಗೆ ಪಾಲಿಸಿದ್ದಾರೆ ಎಂದು ನೋಡಿ ತೀರ್ಮಾನ ಕೈಗೊಳ್ಳಲಾಗುವುದು. ಬೆಂಗಳೂರಿನಲ್ಲಿ ಮ್ಯಾಚ್ ನಡೆಯಬೇಕೆಂದು ಅಭಿಮಾನಿಗಳು ಬಯಸ್ತಿದ್ದಾರೆ. ಸುರಕ್ಷತೆಯನ್ನೂ ನೋಡಬೇಕು, ಕಾಲ್ತುಳಿತದಂಥ ಘಟನೆಗಳು ಮರುಕಳಿಸಬಾರದು, ಹೀಗಾಗಿ ಎಲ್ಲವನ್ನೂ ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ ಎಂದು ಗೃಹಚಿವರು ಹೇಳಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮ್ಯಾಚ್ ಆಡಿಸುವ ವಿಚಾರವಾಗಿ ಕೆಎಸ್‌ಸಿಎ ಮತ್ತು ಆರ್‌ಸಿಬಿ ನಿಯೋಗ ಗೃಹ ಸಚಿವರನ್ನು ಭೇಟಿ ಮಾಡಿದೆ. ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಆರ್‌ಸಿಬಿಯ ರಾಜೇಶ್ ಮೆನನ್ ನೇತೃತ್ವದ ನಿಯೋಗ ಭೇಟಿಯಾಗಿ ಸಮಾಲೋಚನೆ ನಡೆಸಿದೆ. ಫೆ.12 ರಂದು ಮತ್ತೊಂದು ಸಭೆ ನಡೆಸಿ ಪಂದ್ಯಾವಳಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಬಗ್ಗೆ ಗೃಹ ಸಚಿವರು ಭರವಸೆ ನೀಡಿದ್ದಾರೆ.

ತೇಜಸ್ವಿ ಸೂರ್ಯ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ತೇಜಸ್ವಿ ಸೂರ್ಯ ಖಾಲಿ ಟ್ರಂಕ್ ಹಿಡಿದು ರಾಜ್ಯ ಸರ್ಕಾರದಲ್ಲಿ ಹಣ ಖಾಲಿ ಆಗಿದೆಎನ್ನುವ ಬದಲು ಕೇಂದ್ರದಿಂದ ಅವರು ಹಣ ಕೊಡಿಸಲಿ. ಕೇಂದ್ರದಿಂದ ನಮಗೆ ಬಹಳ ಅನುದಾನ ಬರುವುದು ಬಾಕಿ ಇದೆ. ಮೊದಲು ಕೇಂದ್ರದ ಜತೆ ಮಾತಾಡಿ ಅನುದಾನ ಕೊಡಿಸಲಿ. ಅವರು ಹಣ ಕೊಡಿಸಿದರೆ ಹಣ ರಾಜ್ಯದ ಬಳಿಯೂ ಹಣ ಇರುತ್ತದೆ ಎಂದು ಟಾಂಗ್ ನೀಡಿದರು.

Related Posts

Leave a Reply

Your email address will not be published. Required fields are marked *