ಸಂಘಟಿತ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ರನ್ ಗಳ ಭಾರೀ ಅಂತರದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ.
ಚೆಪಾಕ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 196 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 146 ರನ್ ಗಳಿಸಲಷ್ಟೇ ಶಕ್ತವಾಯಿತು.
2008ರಲ್ಲಿ 14 ರನ್ ಗಳಿಂದ ಗೆದ್ದಿದ್ದ ಆರ್ ಸಿಬಿಗೆ ಇದು ಚೆನ್ನೈ ವಿರುದ್ಧ ಐಪಿಎಲ್ ಇತಿಹಾಸದಲ್ಲೇ ಅತೀ ದೊಡ್ಡ ಗೆಲುವಾಗಿದೆ. ಅಲ್ಲದೇ ಚೆನ್ನೈ ತಂಡವನ್ನು ಸತತ 2ನೇ ಬಾರಿ ತವರಿನಲ್ಲಿ ಸೋಲಿಸಿದೆ.
ಆರ್ ಸಿಬಿ ಶಿಸ್ತಿನ ದಾಳಿಗೆ ತತ್ತರಿಸಿದ ಚೆನ್ನೈ ತಂಡ ಆರಂಭದಿಂದಲೇ ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಯಾವುದೇ ಹಂತದಲ್ಲೂ ಚೇತರಿಸಿಕೊಳ್ಳುವ ಸೂಚನೆ ನೀಡದ ಚೆನ್ನೈ ಮುಗ್ಗರಿಸಿತು.
ಚೆನ್ನೈ ಪರ ರಚಿನ್ ರವೀಂದ್ರ (41) ಮಾತ್ರ ತಕ್ಕಮಟ್ಟಿಗೆ ಪ್ರದರ್ಶನ ನೀಡಿದರೆ, ಕೊನೆಯ ಓವರ್ ನಲ್ಲಿ ಸತತ 2 ಸಿಕ್ಸರ್ ಸೇರಿದಂತೆ 16 ಎಸೆತದಲ್ಲಿ ಅಜೇಯ 30 ರನ್ ಬಾರಿಸಿ ಧೋನಿ ಗಮನ ಸೆಳೆದರು. ರವೀಂದ್ರ ಜಡೇಜಾ (25), ಶಿವಂ ದುಬೆ (19) ಎರಡಂಕಿಯ ಮೊತ್ತ ದಾಟಿದರು.
ಆರ್ ಸಿಬಿ ಪರ ಜೋಸ್ ಹಾಜೆಲ್ ವುಡ್ 3 ವಿಕೆಟ್ ಪಡೆದು ಮತ್ತೊಮ್ಮೆ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರೆ, ಲಿಯಾಮ್ ಲಿವಿಂಗ್ ಸ್ಟೋನ್, ಯಶ್ ದಯಾಲ್ ತಲಾ 2 ಮತ್ತು ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು.