ಮಧ್ಯಮ ಕ್ರಮಾಂಕದಲ್ಲಿ ರೀಚಾ ಘೋಷ್ ಮತ್ತು ಎಲ್ಸಿ ಪೆರ್ರಿ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಗಳಿಂದ ರಾಜಸ್ಥಾನ್ ಜೈಂಟ್ಸ್ ವಿರುದ್ಧ ಐತಿಹಾಸಿಕ ಗೆಲುವಿನೊಂದಿಗೆ ಡಬ್ಲ್ಯೂಪಿಎಲ್ ಟಿ-20 ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ.
ವಡೋದರಾದಲ್ಲಿ ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಗುಜರಾತ್ ಜೈಂಟ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಆರ್ ಸಿಬಿ ತಂಡ 9 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಬೆಂಬತ್ತಿದ ದಾಖಲೆ ಬರೆಯಿತು.
ನಾಯಕಿ ಸ್ಮೃತಿ ಮಂದಾನ ಮತ್ತು ಡ್ಯಾನಿ ವೇಟ್ ಹಾಡ್ಜ್ ಎರಡನೇ ಓವರ್ ನಲ್ಲೇ ಓಟಾಗಿದ್ದರಿಂದ ಆರ್ ಸಿಬಿ ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ ಎಲ್ಸಿ ಪೆರ್ರಿ ಮತ್ತು ರಾಘವಿ ಬಿಸ್ಟ್ ಮೂರನೇ ವಿಕೆಟ್ ಗೆ 86 ರನ್ ಜೊತೆಯಾಟದಿಂದ ತಂಡವನ್ನು ಕುಸಿತದಿಂದ ಪಾರು ಮಾಡಿದರು.
ಮೂರು ಜೀವದಾನ ಪಡೆದ ಪೆರ್ರಿ 34 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 57 ರನ್ ಬಾರಿಸಿ ಅರ್ಧಶತಕ ಪೂರೈಸಿ ಔಟಾದರೆ, ರಾಘವಿ 27 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 25 ರನ್ ಗಳಿಸಿ ನಿರ್ಗಮಿಸಿದರು.
ಇವರಿಬ್ಬರು ಔಟಾದ ನಂತರ ಜೊತೆಯಾದ ರಿಚಾ ಘೋಷ್ ಮತ್ತು ಕನಿಕಾ ಅಹುಜಾ ಪಂದ್ಯದ ದಿಕ್ಕನ್ನೇ ಬದಲಿಸಿದರು. ಇವರಿಬ್ಬರು ಮುರಿಯದ 5ನೇ ವಿಕೆಟ್ ಗೆ 93 ರನ್ ಜೊತೆಯಾಟ ನಿಭಾಯಿಸಿದರು. ರಿಚಾ ಘೋಷ್ 27 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 64 ರನ್ ಸಿಡಿಸಿ ಅಜೇಯರಾಗಿ ಉಳಿದರೆ, ಕನಿಕಾ 13 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ 30 ರನ್ ಗಳಿಸಿ ಔಟಾಗದೇ ಉಳಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ರಾಜಸ್ಥಾನ್ ಜೈಂಟ್ಸ್ ನಾಯಕಿ ಅಶ್ಲೇ ಗಾರ್ಡ್ನರ್ ಮತ್ತು ಬೆಥ್ ಮೂನಿ ಅವರ ಅರ್ಧಶತಕಗಳ ನೆರವಿನಿಂದ 200ಕ್ಕೂ ಹೆಚ್ಚು ಮೊತ್ತ ದಾಖಲಿಸಿ ದೊಡ್ಡ ಸವಾಲೊಡ್ಡಿದರು.
ಆಶ್ಲೇ ಗಾರ್ಡ್ನರ್ 37 ಎಸೆತಗಳಲ್ಲಿ 3 ಬೌಂಡರಿ ಮತ್ತು 8 ಸಿಕ್ಸರ್ ಸಹಾಯದಿಂದ 79 ರನ್ ಚಚ್ಚಿದರೆ, ಬೆಥ್ ಮೂನಿ 42 ಎಸೆತಗಳಲ್ಲಿ 8 ಬೌಂಡರಿ ಸಹಾಯದಿಂದ 56 ರನ್ ಸಿಡಿಸಿದರು.ಡಾಟಿನ್ 25 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು.