ಮಧ್ಯಮ ವೇಗಿ ಜೋಸ್ ಹಾಜೆಲ್ ವುಡ್ ಮಾರಕ ದಾಳಿ ಹಾಗೂ ಬ್ಯಾಟ್ಸ್ ಮನ್ ಗಳ ಜವಾಬ್ದಾರಿಯುತ ಪ್ರದರ್ಶನದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 11 ರನ್ ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಐಪಿಎಲ್ 2025 ಟೂರ್ನಿಯಲ್ಲಿ ತವರಿನಲ್ಲಿ ಮೊದಲ ಗೆಲುವಿನ ನಗೆ ಬೀರಿತು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆರ್ ಸಿಬಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 194 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಗೆಲುವಿನೊಂದಿಗೆ ಆರ್ ಸಿಬಿ 12 ಆಂಕದೊಂದಿಗೆ 3ನೇ ಸ್ಥಾನಕ್ಕೆ ಜಿಗಿತ ಕಂಡರೆ, ರಾಜಸ್ಥಾನ್ ರಾಯಲ್ಸ್ 9 ಪಂದ್ಯಗಳಲ್ಲಿ 4 ಅಂಕದೊಂದಿಗೆ 8ನೇ ಸ್ಥಾನದಲ್ಲಿ ಉಳಿದುಕೊಂಡಿತು.
ಕಠಿಣ ಗುರಿ ಬೆಂಬತ್ತಿದ ರಾಜಸ್ಥಾನ್ ಗೆ ಯಶಸ್ವಿ ಜೈಸ್ವಾಲ್ (49 ರನ್, 19 ಎಸೆತ, 7 ಬೌಂಡರಿ, 3 ಸಿಕ್ಸರ್) ಮತ್ತು ಮಧ್ಯಮ ಕ್ರಮಾಂಕದಲ್ಲಿ ಧ್ರುವ ಜುರೆಲ್ (47 ರನ್, 34 ಎಸೆತ, 3 ಬೌಂಡರಿ, 3 ಸಿಕ್ಸರ್) ದೊಡ್ಡ ಮೊತ್ತದ ಕೊಡುಗೆ ನೀಡಿದರೂ ಯಾವೊಬ್ಬ ಬ್ಯಾಟ್ಸ್ ಮನ್ ಅರ್ಧಶತಕ ದಾಖಲಿಸಲಿಲ್ಲ.
ಕೊನೆಯ 2 ಓವರ್ ನಲ್ಲಿ 22 ರನ್ ಗಳಿಸಬೇಕಿದ್ದ ರಾಜಸ್ಥಾನ್ ಹಾಜ್ಲೆವುಡ್ ಓವರ್ ನಲ್ಲಿ 2 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಹಾಜ್ಲೆವುಡ್ 4 ವಿಕೆಟ್ ಪಡೆದರೆ, ಕೃನಾಲ್ ಪಾಂಡ್ಯ 2 ವಿಕೆಟ್ ಗಳಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆರ್ ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕಲ್ ಅವರ ಅರ್ಧಶತಕಗಳ ನೆರವಿನಿಂದ ಬೃಹತ್ ಮೊತ್ತ ದಾಖಲಿಸಿತು.
ವಿರಾಟ್ ಕೊಹ್ಲಿ ಇದೇ ಮೊದಲ ಬಾರಿ ಅರ್ಧಶತಕ ದಾಖಲಿಸಿದ್ದೂ ಅಲ್ಲದೇ ಎರಡು ಮಹತ್ವದ ಅರ್ಧಶತಕಗಳ ಜೊತೆಯಾಟ ನಿಭಾಯಿಸಿ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು. ಈ ಮೂಲಕ ಆರ್ ಸಿಬಿ 32 ಬಾರಿ 200ಕ್ಕಿಂತ ಅಧಿಕ ಮೊತ್ತ ದಾಖಲಿಸಿದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿಎಸ್ ಕೆ 33 ಬಾರಿ ಈ ಸಾಧನೆ ಮಾಡಿ ಮೊದಲ ಸ್ಥಾನದಲ್ಲಿದೆ.
ಕೊಹ್ಲಿ ಮತ್ತು ಸಾಲ್ಟ್ ಮೊದಲ ವಿಕೆಟ್ ಗೆ 61 ರನ್ ಜೊತೆಯಾಟದಿಂದ ಪವರ್ ಪ್ಲೇನಲ್ಲಿ ರನ್ ಹೊಳೆ ಹರಿಸಿದರು. ಸಾಲ್ಟ್ (26) ಬೇಗನೇ ನಿರ್ಗಮಿಸಿದರೆ, ನಂತರ ದೇವದತ್ ಪಡಿಕಲ್ ಮತ್ತು ಕೊಹ್ಲಿ ಎರಡನೇ ವಿಕೆಟ್ ಗೆ 95 ರನ್ ಜೊತೆಯಾಟದಿಂದ ತಂಡ ಬೃಹತ್ ಮೊತ್ತ ದಾಖಲಿಸಲು ನೆರವಾದರು.
ಕೊಹ್ಲಿ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದೂ ಅಲ್ಲದೇ 42 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 70 ರನ್ ಬಾರಿಸಿ ಔಟಾದರು. ಪಡಿಕಲ್ 27 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 50 ರನ್ ಬಾರಿಸಿ ಔಟಾದರು.
ಕೊನೆಯ ಹಂತದಲ್ಲಿ ಟಿಮ್ ಡೇವಿಡ್ ಮತ್ತು ಜಿತೇಶ್ ಕುಮಾರ್ 42 ರನ್ ಜೊತೆಯಾಟ ನಿಭಾಯಿಸಿದರು. ಟಿಮ್ ಡೇವಿಡ್ 15 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ 23 ರನ್ ಗಳಿಸಿದರೆ, ಜಿತೇಶ್ 10 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 20 ರನ್ ಬಾರಿಸಿ ತಂಡದ ಮೊತ್ತ 200ರ ಗಡಿ ದಾಟುವಂತೆ ನೋಡಿಕೊಂಡರು.
ರಾಜಸ್ಥಾನ್ ಪರ ಜೋಫ್ರಾ ಆರ್ಚರ್ ಪರಿಣಾಮಕಾರಿ ದಾಳಿ ನಡೆಸಿ 1 ವಿಕೆಟ್ ಪಡೆದರೆ, ಸಂದೀಪ್ ಶರ್ಮ ದುಬಾರಿ ಆದರೂ 2 ವಿಕೆಟ್ ಗಳಿಸಿದರು.