ಯಾದಗಿರಿ ಕಾಟನ್ ಮಿಲ್‌ನಲ್ಲಿ ಪಡಿತರದ ಅನ್ನಭಾಗ್ಯ ಅಕ್ಕಿ, ಜೋಳ ಆಯ್ತು, ಈಗ ಕ್ಷೀರ ಯೋಜನೆಯಡಿ ಶಾಲೆಗಳಿಗೆ ಪೂರೈಕೆಯಾಗುವ ಶಾಲಾ ಮಕ್ಕಳ ಹಾಲಿನ ಪೌಡರ್ ಪತ್ತೆಯಾಗಿದೆ. ಗುರುಮಠಕಲ್ ಪಟ್ಟಣದ ಹೊರಭಾಗದ ನಾರಾಯಣಪುರ ಗ್ರಾಮದ ಶ್ರೀ ಲಕ್ಷ್ಮಿ ತಿಮ್ಮಪ್ಪ ವೇರ್ ಹೌಸ್ ಹಾಗೂ ಶ್ರೀ ಲಕ್ಷ್ಮೀ ತಿಮ್ಮಪ್ಪ ಕಾಟನ್ ಮಿಲ್ ನಲ್ಲಿ ಪಡಿತರ ಅಕ್ಕಿ ಪರಿಶೀಲನೆ ವೇಳೆ ಹಾಲಿನ ಪೌಡರ್ ಪತ್ತೆಯಾಗಿದೆ.
ಅಯ್ಯಪ್ಪ ರಾಠೋಡಗೆ ಸೇರಿದ ವೇರ್ ಹೌಸ್ ಹಾಗೂ ಕಾಟನ್ ಮಿಲ್‌ನಲ್ಲಿ ಹಾಲಿನ ಪೌಡರ್ ಕಾಳಸಂತೆಯಲ್ಲಿ ಖರೀದಿ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಕ್ಷೀರ ಭಾಗ್ಯ ಯೋಜನೆಯಡಿಶಾಲಾ ಮಕ್ಕಳಿಗೆ ಕೆನೆ ಭರಿತ ಹಾಲು ಪೂರೈಕೆ ಮಾಡುವ ಯೋಜನೆಯ ಪೌಡರ್ ಇಲ್ಲಿ ಬಿಕರಿಯಾಗುತ್ತಿತ್ತು. ಶಾಲಾ ಮಕ್ಕಳ ಹೊಟ್ಟೆ ಸೇರಬೇಕಾದ ಹಾಲಿನ ಪೌಡರ್ ಕಾಳಸಂತೆಯಲ್ಲಿ ಖರೀದಿಯಾಗಿ ಅಕ್ರಮ ದಂಧೆಯಾಗಿ ಮಾರ್ಪಟ್ಟಿತ್ತು.
222 ಕೆಜಿಯ 75 ಸಾವಿರ ರೂಪಾಯಿ ಮೌಲ್ಯದ ಮಿಲ್ಕ್ ಪೌಡರ್ ಪತ್ತೆಯಾಗಿದ್ದು, ಅಧಿಕಾರಿಗಳು ಈಗಾಗಲೇ ಹಾಲಿನ ಪೌಡರ್ ಜಪ್ತಿ ಮಾಡಿದ್ದಾರೆ. ತಾಲೂಕು ಪಂಚಾಯತ್ ಪಿಎಂ ಪೋಷಣ್ ಶಕ್ತಿ ನಿರ್ಮಾಣ ಸಹಾಯಕ ನಿರ್ದೇಶಕ ಚೆನ್ನಪ್ಪ ಕಲಮನಿ ಗುರುಮಠಕಲ್ ಠಾಣೆಯಲ್ಲಿ ಅಯ್ಯಪ್ಪ ರಾಠೋಡ ವಿರುದ್ಧ ದೂರು ದಾಖಲಿಸಿದ್ದಾರೆ.