ಮನೆ ಕೆಲಸದವರ ವೇತನ ನಿರ್ಧರಿಸಲು ಶೀಘ್ರವೇ ದರ ಕಾರ್ಡ್ ಯೋಜನೆ ಜಾರಿಗೆ ಬರುವ ನಿರೀಕ್ಷೆಯಿದೆ. ಮನೆ ಕೆಲಸ ಮಾಡಿದ ಸಮಯ ಮತ್ತು ನಿರ್ದಿಷ್ಟ ಕೆಲಸದ ಮೇಲೆ ಈ ದರ ಕಾರ್ಡ್ ಅನ್ವಯಿಸಲಿದೆ.
ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಹಿತದೃಷ್ಟಿಯಿಂದ ಈ ಯೋಜನೆ ತರಲು ಪ್ಲಾನ್ ಮಾಡಲಾಗಿದ್ದು, ವೇತನ, ವೈದ್ಯಕೀಯ ಸೌಲಭ್ಯಗಳು ಮತ್ತು ಪಿಂಚಣಿ ನಿಗದಿಯಾಗಲಿದೆ.
ಕರ್ನಾಟಕದಲ್ಲಿ ಮನೆಕೆಲಸದವರಿಗೆ ಪ್ರಸ್ತುತ ಒಂದೇ ಸ್ಥಿರ “ದರ ಕಾರ್ಡ್” ಇಲ್ಲ. ನಗರಗಳು ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ವೇತನಗಳು ಸಾಕಷ್ಟು ವ್ಯತ್ಯಾಸಗಳಿವೆ. ಯಾವುದೇ ಕಾರ್ಮಿಕರಿಗೂ ತೊಂದರೆಯಾಗದಂತೆ ಈ ಕಾರ್ಡ್ ದರ ನಿಗದಿಪಡಿಸಲಾಗುತ್ತದೆ. ಎಲ್ಲರಿಗೂ ಒಂದೇ ರೀತಿಯಾದ ವೇತನವನ್ನು ಕೆಲಸ ಮಾಡಿದ ಸಮಯದ ಅನುಸಾರ ನಿಗದಿ ಮಾಡಲಾಗುತ್ತದೆ.
ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆಯ ಪ್ರಮುಖ ಅಂಶವಾಗಿ ವೇತನ ದರ ಪಟ್ಟಿ ಜಾರಿಗೊಳ್ಳಲಿದೆ. ಸಂಬಂಧಿಸಿದ ಕರಡು ಶಾಸನದಲ್ಲಿ ಸೇವಕಿಯರು, ಅಡುಗೆಯವರು, ಚಾಲಕರು ಮತ್ತು ದಾದಿಯರು ಸೇರಿದಂತೆ ಎಲ್ಲಾ ಗೃಹ ಕಾರ್ಮಿಕರು, ಅವರ ಉದ್ಯೋಗದಾತರು ಮತ್ತು ಸೇವಾ ಪೂರೈಕೆದಾರರು ನೋಂದಾಯಿಸಿಕೊಳ್ಳಬೇಕಾಗುತ್ತದೆ.
ಕಾನೂನನ್ನು ಜಾರಿಗೆ ತರಲು, ಯೋಜನೆಗಳನ್ನು ರೂಪಿಸಲು ಮತ್ತು ಕುಂದುಕೊರತೆಗಳನ್ನು ಪರಿಹರಿಸಲು ಮೀಸಲಾದ ಕರ್ನಾಟಕ ರಾಜ್ಯ ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಂಡಳಿಯನ್ನು ಸ್ಥಾಪಿಸಲಾಗುವುದು.
ಮಂಡಳಿಯಲ್ಲಿ ಸರ್ಕಾರಿ ಅಧಿಕಾರಿಗಳು, ಗೃಹ ಕಾರ್ಮಿಕರು ಮತ್ತು ಅವರ ಒಕ್ಕೂಟಗಳು, ಉದ್ಯೋಗದಾತರು, ಕಾರ್ಮಿಕರ ಕಲ್ಯಾಣ ಸಂಘಗಳ ಪ್ರತಿನಿಧಿಗಳ ಸಮಾನ ಪ್ರಾತಿನಿಧ್ಯವಿರುತ್ತದೆ.