ಕಚೇರಿಯಲ್ಲಿ ಸಮವಸ್ತ್ರದಲ್ಲಿ ಇರುವಾಗಲೇ ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಂಡ ವೀಡಿಯೊ ವೈರಲ್ ಬಳಿಕ ಅಮಾನತುಗೊಂಡಿರುವ ಡಿಜಿಪಿ ರಾಮಚಂದ್ರರಾವ್ಗೆ ನಟಿ ರನ್ಯಾರಾವ್ ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಈ ಹಿಂದೆ ಇದೇ ಪ್ರಕರಣದಲ್ಲಿ ಸರ್ಕಾರಿ ವಾಹನ ದುರ್ಬಳಕೆ ಮಾಡಿರುವುದಾಗಿ ರಾಮಚಂದ್ರರಾವ್ಗೆ ಚಾರ್ಜ್ ಮೆಮೋ ನೀಡಲಾಗಿತ್ತು. ರಾಮಚಂದ್ರರಾವ್ ಮಗಳು ರನ್ಯಾರಾವ್ ಕಾರನ್ನು ದುರ್ಬಳಕೆ ಮಾಡಿದ್ದರು. ಕಚೇರಿಯಲ್ಲಿ ಸಮವಸ್ತ್ರದಲ್ಲಿಯೇ ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಂಡ ಪ್ರಕರಣವನ್ನು ಇಲಾಖಾ ತನಿಖೆಗೆ ಆದೇಶಿಸಿ ಪೊಲೀಸ್ ಮಹಾನಿರ್ದೇಶಕ ಸಲೀಂ ಆದೇಶ ಹೊರಡಿಸಿದ್ದಾರೆ.
ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ರಾಮಚಂದ್ರರಾವ್ ಅವರಿಗೆ ನೋಟಿಸ್ ನೀಡಿದ್ದ ಡಿಆರ್ಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ವಿಚಾರಣೆ ಮಾಡಿದ ಡಿಆರ್ಐ ಅಧಿಕಾರಿಗಳು ರನ್ಯಾರಾವ್ಗೆ ಮತ್ತು ರಾಮಚಂದ್ರರಾವ್ಗೆ ಇರುವ ಸಂಬಂಧ, ಚಿನ್ನ ಸಾಗಾಟ ಸಂದರ್ಭದಲ್ಲಿ ಸಹಾಯ ಮಾಡಲಾಗಿತ್ತಾ, ಪ್ರೋಟೋ ಕಾಲ್ ದುರ್ಬಳಕೆ, ಎರಡೇ ತಿಂಗಳಲ್ಲಿ 20ಕ್ಕೂ ಹೆಚ್ಚು ಬಾರಿ ದುಬೈಗೆ ಹೋಗಿ ಬಂದ ವಿಚಾರದ ಸಮಗ್ರ ವಿಚಾರಣೆ ನಡೆಸಿದ್ದರು.
ಡಿಜಿಪಿ ರಾಮಚಂದ್ರ ರಾವ್ ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಂಡಿರುವ ವೀಡಿಯೊ ವೈರಲ್ ಆದ ಬೆನ್ನಲ್ಲೇ ರಾಜ್ಯ ಸರ್ಕಾರ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ನಿನ್ನೆ ಮಧ್ಯಾಹ್ನ 10 ದಿನಗಳ ಕಡ್ಡಾಯ ರಜೆ ಮೇಲೆ ತೆರಳಿದ್ದ ರಾಮಚಂದ್ರ ರಾವ್ ಅವರನ್ನು ರಾತ್ರಿ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ವಿಚಾರಣೆ ಬಾಕಿಯಿರುವ ಕಾರಣ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ನಟಿ ರನ್ಯಾ ರಾವ್, ತರುಣ್ ರಾಜ್ ಮತ್ತು ಪ್ರಭಾವಿ ಸ್ವಾಮೀಜಿ ಮೂವರ ಗುಂಪು ಚಿನ್ನ ಕಳ್ಳಸಾಗಣೆಯಲ್ಲಿ ಶಾಮೀಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು. ಇದರಲ್ಲಿ ಸ್ವಾಮೀಜಿ ಭಾಗಿಯಾಗಿದ್ದು, ದುಬೈನಲ್ಲಿ ಆಫೀಸ್ ತೆರೆದು ಡಿಲೀಂಗ್ ನಡೆಸುತ್ತಿದ್ದರು. ಆಫೀಸ್ನಲ್ಲಿ ಸ್ವಾಮೀಜಿ ಕ್ರಿಫ್ಟೋ ಕರೆನ್ಸಿ, ಹಣ ವಿನಿಮಯ ವ್ಯವಹಾರ ಮಾಡುತ್ತಿದ್ದರು. ಸ್ವಾಮೀಜಿ ರಾಜಕೀಯ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿನ ಸ್ವಾಮೀಜಿ ಮನೆ ಮೇಲೆ ಡಿಆರ್ಐ ಅಧಿಕಾರಿಗಳು ದಾಳಿ ನಡೆಸಿದಾಗ ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿತ್ತು.


