ಬೆಂಗಳೂರು: ಚಿನ್ನ ಕಳ್ಳಸಾಗಾಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ ಜಾಮೀನು ಅರ್ಜಿಯನ್ನು ಬೆಂಗಳೂರು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಮಾರ್ಚ್ 14ಕ್ಕೆ ಕಾಯ್ದಿರಿಸಿದೆ.
ಕಳೆದ ೧೫ ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ರನ್ಯಾ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆ ಪೂರ್ಣಗೊಳಿಸಿದ್ದು, ನ್ಯಾಯಾಧೀಶರು ತೀರ್ಪನ್ನು ಎರಡು ದಿನಗಳ ಕಾಲ ಕಾಯ್ದಿರಿಸಿದರು.
ಮಾಸ್ಟರ್ ಮೈಂಡ್ ಸ್ನೇಹಿತ ತರುಣ್
ದುಬೈನಲ್ಲಿ ಚಿನ್ನ ಸಂಗ್ರಹಿಸುವ ಕುರಿತು ನಟಿ ರನ್ಯಾ ರಾವ್ ಗೆ ಸ್ನೇಹಿತ ಹಾಗೂ ಹೋಟೆಲ್ ಉದ್ಯಮಿ ಪುತ್ರ ತರುಣ್ ರಾಜ್ ಮಾಹಿತಿ ನೀಡಿ ಅಲ್ಲಿಂದ ಬೆಂಗಳೂರಿಗೆ ಹೇಗೆ ಸಾಗಿಸಬೇಕು ಎಂಬ ನೀಲನಕ್ಷೆಯನ್ನು ರವಾನಿಸುತ್ತಿರುವುದು ಡಿಆರ್ ಐ ಅಧಿಕಾರಿಗಳ ತನಿಖೆಯಲ್ಲಿ ಪತ್ತೆಯಾಗಿದೆ.
ಬಂಧಿತ ತರುಣ್ನನ್ನು ಡಿಆರ್ಐ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿ ಹಲವು ಮಾಹಿತಿಯನ್ನು ಕಲೆ ಹಾಕಿರುವ ಮಾಹಿತಿಯಲ್ಲಿ ತರುಣ್ ಪಾತ್ರವು ಸಾಬೀತಾಗಿದೆ.
ದುಬೈ ಪಯಣದಲ್ಲಿ ಗೆಳತಿ ಜತೆ ನಿರಂತರವಾಗಿ ಆತ ಸಂಪರ್ಕದಲ್ಲಿದ್ದು ಸೂಚನೆ ಕೊಡುತ್ತಿದ್ದ.ತನ್ನ ಗೆಳೆಯನ ಸೂಚನೆ ಅನುಸಾರ ರನ್ಯಾ ನಡೆದುಕೊಳ್ಳುತ್ತಿದ್ದರು. ಹೀಗಾಗಿ ವಿದೇಶದಿಂದ ಚಿನ್ನ ಸಾಗಿಸುವ ಜಾಲದ ಕೊರಿಯರ್ ಆಗಿ ರನ್ಯಾ ಬಳಕೆಯಾಗಿರಬಹುದು ಎಂದು ತಿಳಿದು ಬಂದಿದೆ.
ಈಗಾಗಲೇ ತಮ್ಮ ವಶದಲ್ಲಿ ರನ್ಯಾ ಇದ್ದಾಗಲೇ ತರುಣ್ನನ್ನು ವಶಕ್ಕೆ ಪಡೆದು ಡಿಆರ್ಐ ವಿಚಾರಣೆ ನಡೆಸಿತ್ತು. ಆ ವೇಳೆ ಚಿನ್ನ ಕಳ್ಳ ಸಾಗಾಣಿಕೆ ಕೃತ್ಯದಲ್ಲಿ ಈ ಇಬ್ಬರ ಪಾತ್ರದ ಬಗ್ಗೆ ಮುಖಾಮುಖಿ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ ಎನ್ನಲಾಗಿದೆ.
ಹಲವು ವರ್ಷಗಳಿಂದ ರನ್ಯಾ ಜತೆ ತರುಣ್ಗೆ ಆತ್ಮೀಯ ಒಡನಾಟವಿತ್ತು. ಅಲ್ಲದೆ ತನ್ನ ಉದ್ಯಮ ಸಮೂಹದಿಂದ ಆತನಿಗೆ ದುಬೈನಲ್ಲಿ ಕೆಲ ಉದ್ಯಮಿಗಳ ಸಂಪರ್ಕವಿತ್ತು. ಸುಲಭವಾಗಿ ಹಣ ಸಂಪಾದಿಸುವ ಹಾಗೂ ಕಪ್ಪು ಹಣವನ್ನು ಸಕ್ರಮಗೊಳಿಸುವ ಕಾರಣಕ್ಕೆ ಸ್ಮಗ್ಲಿಂಗ್ ನಲ್ಲಿ ತರುಣ್ ಪಾತ್ರ ವಹಿಸಿರಬಹುದು.
ಈ ಗುಮಾನಿ ಹಿನ್ನೆಲೆಯಲ್ಲಿ ಆತನನ್ನು ಐದು ದಿನ ಕಸ್ಟಡಿಗೆ ಪಡೆದು ಡಿಆರ್ಐ ವಿಚಾರಣೆಗೊಳಪಡಿಸಿದೆ ಎಂದು ತಿಳಿದು ಬಂದಿದೆ.
ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅವರ ಮೂರು ಸ್ನೇಹಿತರು ಪಾತ್ರ ವಹಿಸಿರುವ ಬಗ್ಗೆ ಶಂಕೆ ಮೂಡಿದೆ. ಈ ಗೆಳೆಯರಿಗೆ ಡಿಆರ್ಐ ತಲಾಶ್ ಸಹ ನಡೆಸಿದೆ ಎನ್ನಲಾಗಿದೆ.