ಮೊಹಾಲಿ: ಆಲ್ ರೌಂಡರ್ ಶ್ರೇಯಸ್ ಗೋಪಾಲ್ ಹೋರಾಟದ ಅರ್ಧಶತಕದ ನೆರವಿನಿಂದ ಕರ್ನಾಟಕದ ತಂಡ ರಣಜಿ ಟ್ರೋಫಿ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಪಂಜಾಬ್ ವಿರುದ್ಧ 7 ರನ್ ಗಳ ರೋಚಕ ಮುನ್ನಡೆ ಸಾಧಿಸಿದೆ.
ಮೊಹಾಲಿಯಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರ 6 ವಿಕೆಟ್ ಗೆ 255 ರನ್ ಗಳಿಂದ ಆಟ ಮುಂದುವರಿಸಿದ ಕರ್ನಾಕ ತಂಡ ಚಹಾ ವಿರಾಮ ವೇಳೆಗೆ 316 ರನ್ ಗೆ ಆಲೌಟಾಯಿತು. ಪಂಜಾಬ್ ತಂಡವನ್ನು 309 ರನ್ ಗೆ ಆಲೌಟ್ ಮಾಡಿದ್ದ ಕರ್ನಾಟಕ ಈ ಮೂಲಕ ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿತು.
ಕರ್ನಾಟಕ ತಂಡ ಪ್ರಮುಖ ಬ್ಯಾಟ್ಸ್ ಮನ್ ಗಳನ್ನು ಕಳೆದುಕೊಂಡಿದ್ದ ನಿನ್ನೆ 42 ರನ್ ಗಳಿಸಿ ಅಜೇಯರಾಗಿದ್ದ ಶ್ರೇಯಸ್ ಗೋಪಾಲ್ ಮೇಲೆ ಹೆಚ್ಚಿನ ಒತ್ತಡವಿತ್ತು. ಒತ್ತಡದ ನಡುವೆಯೂ ಬಾಲಂಗೋಚಿಗಳ ಸಹಾಯದಿಂದ ಹೋರಾಟ ಮುಂದುವರಿಸಿದ ಶ್ರೇಯಸ್ ಕರ್ನಾಟಕಕ್ಕೆ ಮಹತ್ವದ ಅಂಕ ತಂದುಕೊಡುವಲ್ಲಿ ಯಶಸ್ವಿಯಾದರು.
ಶ್ರೇಯಸ್ ಗೋಪಾಲ್ 195 ಎಸೆತಗಳಲ್ಲಿ 6 ಬೌಂಡರಿ ಒಳಗೊಂಡ 77 ರನ್ ಬಾರಿಸಿದರು. ನಿನ್ನೆ 23 ರನ್ ಗಳಿಸಿದ್ದ ವಿದ್ಯಾಧರ್ ಪಾಟೀಲ್ (34) 7ನೇ ವಿಕೆಟ್ ಗೆ ಮಹತ್ವದ 63 ರನ್ ಕಲೆಹಾಕಿದರು. ಮೊಹಸಿನ್ ಖಾನ್ 10 ಮತ್ತು ಪ್ರಸಿದ್ಧ ಕೃಷ್ಣ 3 ರನ್ ಗಳಿಸಿದರು.
ಪಂಜಾಬ್ ಪರ ಹರ್ಪೀತ್ ಬ್ರಾರ್ 4 ವಿಕೆಟ್ ಕಬಳಿಸಿದರೆ, ಸುಕದೀಪ್ ಸಿಂಗ್ 3 ವಿಕೆಟ್ ಗಳಿಸಿದರು.


