ನವದೆಹಲಿ: ಆಧುನಿಕ ವೈದ್ಯ ಪದ್ಧತಿ ವಿರುದ್ಧ ಅಪಪ್ರಚಾರ ಮಾಡಿದಕ್ಕೆ ಸುಪ್ರೀಂಕೋರ್ಟ್ ನಿಂದ ಛೀಮಾರಿಗೆ ಒಳಗಾಗಿದ್ದ ಯೋಗ ಗುರು ಬಾಬಾ ರಾಮ್ ದೇವ್ ಗೆ ದೆಹಲಿ ಹೈಕೋರ್ಟ್ ಮತ್ತೊಮ್ಮೆ ಚಾಟಿ ಬೀಸಿದೆ.
ಡಾಬರ್ ಚ್ಯವನ್ ಪ್ರಾಶ್ ವಿರುದ್ಧ ಅವಹೇಳನಕಾರಿ ಜಾಹಿರಾತು ಪ್ರಕಟಿಸದಂತೆ ಪತಂಜಲಿ ಸಂಸ್ಥೆಗೆ ಹೈಕೋರ್ಟ್ ಸೂಚಿಸಿದೆ.
ಗಿಡಮೂಲಿಕೆ ಪಾನೀಯ ರೂಹ್ ಅಫ್ಜಾ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಹೊಂದಿರುವ ಜಾಹಿರಾತು ಪ್ರಕಟಿಸಿದ ರಾಮ್‌ದೇವ್ ವರ್ತನೆಯನ್ನು ಹೈಕೋರ್ಟ್ ತೀವ್ರವಾಗಿ ಖಂಡಿಸಿದೆ.
ನ್ಯಾಯಮೂರ್ತಿ ಮಿನಿ ಪುಷ್ಕರ್ಣ ನೇತೃತ್ವದ ಪೀಠ ಗುರುವಾರ ಪತಂಜಲಿ ಆಯುರ್ವೇದ ಸಂಸ್ಥೆ ಪ್ರಕಟಿಸುತ್ತಿರುವ ಜಾಹೀರಾತುಗಳ ವಿರುದ್ಧ ಡಾಬರ್ ಸಲ್ಲಿಸಿದ 2 ಮಧ್ಯಂತರ ತಡೆಯಾಜ್ಞೆ ಅರ್ಜಿಗಳಿಗೆ ಅನುಮತಿ ನೀಡಿತು.
ಡಿಸೆಂಬರ್‌ನಲ್ಲಿ, ಪತಂಜಲಿ ಆಯುರ್ವೇದವು ತನ್ನ ಚ್ಯವನಪ್ರಾಶ್ ಉತ್ಪನ್ನಗಳನ್ನು ಅವಹೇಳನಕಾರಿ ಜಾಹೀರಾತುಗಳನ್ನು ನೀಡುತ್ತಿದೆ ಎಂದು ಆರೋಪಿಸಿ ಡಾಬರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಪತಂಜಲಿ ತಮ್ಮ ಖ್ಯಾತಿಗೆ ಹಾನಿ ಮಾಡುತ್ತದೆ ಮತ್ತು ಗ್ರಾಹಕರನ್ನು ದಾರಿ ತಪ್ಪಿಸುತ್ತದೆ ಎಂದು ಹೇಳುವ ಈ ಜಾಹೀರಾತುಗಳನ್ನು ಮುಂದುವರಿಸದಂತೆ ತಕ್ಷಣವೇ ನಿರ್ಬಂಧಿಸುವಂತೆ ಡಾಬರ್ ನ್ಯಾಯಾಲಯವನ್ನು ಒತ್ತಾಯಿಸಿತು.
ರಾಮ್‌ದೇವ್ ಜಾಹೀರಾತಿನಲ್ಲಿ ಯಾರಿಗೆ ಆಯುರ್ವೇದ ಮತ್ತು ವೇದದ ಜ್ಞಾನ ಇಲ್ಲವೋ ಅವರು ಚರಕ್, ಸುಶ್ರತ್, ಧನ್ವಂತರಿ ಮತ್ತು ಚ್ಯವನ ಋಷಿ ಅವರ ಪರಂಪರದಲ್ಲಿ ಮೂಲ ಚ್ಯವನ್ ಪ್ರಾಶ್ ಹೇಗೆ ಬರಲು ಸಾಧ್ಯ ಎಂದು ಪ್ರಶ್ನಿಸುವ ಮೂಲಕ ಲೇವಡಿ ಮಾಡಿದ್ದರು.