Menu

ಪಿಣರಾಯಿ ಎನ್‌ಡಿಎ ಸೇರಿದ್ರೆ ಮೋದಿಯಿಂದ ಕೇರಳಕ್ಕೆ ಬೃಹತ್‌ ಪ್ಯಾಕೇಜ್‌? ಕೇಂದ್ರದ ಅನುದಾನ ಭಿಕ್ಷಯಲ್ಲ, ಹಕ್ಕು ಎಂದ ಸಿಪಿಐಎಂ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಬೇಕು. ಇದರಿಂದ ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚಿನ ಅನುದಾನ ಬರಲು ಸಾಧ್ಯ. ವಿಜಯನ್ ಎನ್‌ಡಿಎ ಸೇರಿದರೆ ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಗೆದ್ದು ಮತ್ತೆ ಮುಖ್ಯಮಂತ್ರಿಯಾಗಬಹುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಳೆ ಹೇಳಿದ್ದಾರೆ.

ವಿಜಯನ್ ಎನ್‌ಡಿಎ ಸೇರಿದರೆ ಅದು ಒಂದು “ಕ್ರಾಂತಿಕಾರಿ” ನಿರ್ಧಾರವಾಗಲಿದೆ ಮತ್ತು ಖಂಡಿತವಾಗಿಯೂ ಕೇರಳಕ್ಕೆ ಹೆಚ್ಚಿನ ಹಣ ಹರಿದು ಬರಲಿದೆ ಎಂದು ಅಠವಳೆ ತಿಳಿಸಿದ್ದಾರೆ.

ಸಚಿವರ ಈ ಹೇಳಿಕೆಯನ್ನು ಕೇರಳದ ಆಡಳಿತಾರೂಢ ಸಿಪಿಐ(ಎಂ) ಖಂಡಿಸಿದ್ದು, ಕೇಂದ್ರದಿಂದ ಅನುದಾನ ಭಿಕ್ಷೆಯಲ್ಲ, ಅದು ರಾಜ್ಯದ ಹಕ್ಕು ಎಂದು ಹೇಳಿದೆ. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಇದು “ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ” ಹೇಳಿಕೆ. ಕಳೆದ ಐದು ವರ್ಷಗಳಲ್ಲಿ ಕೇರಳಕ್ಕೆ ಬರಬೇಕಿದ್ದ 2 ಲಕ್ಷ ಕೋಟಿ ರೂಪಾಯಿ ಅನುದಾನ ಕೇಂದ್ರ ಸರ್ಕಾರ ನೀಡಿಲ್ಲ. ಕೇಂದ್ರ ಸಚಿವರ ಹೇಳಿಕೆಯು ಭಾರತದ ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ, ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಗೋವಿಂದನ್ ಕಿಡಿಕಾರಿದ್ದಾರೆ.

ನರೇಂದ್ರ ಮೋದಿ ಅವರು ಕೇರಳಕ್ಕೆ ದೊಡ್ಡ ಪ್ಯಾಕೇಜ್ ನೀಡಲಿದ್ದಾರೆ, ವಿಜಯನ್ ಎನ್‌ಡಿಎ ಸೇರಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು  ಮತ್ತೆ ಮುಖ್ಯಮಂತ್ರಿಯಾಗಬಹುದು ಎಂದೂ ಅಠವಳೆ ಅಭಿಪ್ರಾಯಪಟ್ಟಿದ್ದಾರೆ. ಸೋಷಿಯಲಿಸ್ಟ್ (ಸಮಾಜವಾದಿ) ನಾಯಕರು ಎನ್‌ಡಿಎ ಸೇರಬಹುದಾದರೆ, ಕಮ್ಯುನಿಸ್ಟ್ ನಾಯಕರು ಏಕೆ ಸೇರಬಾರದು ಎಂದು ಪ್ರಶ್ನಿಸಿದ್ದಾರೆ. ಸಿಪಿಐ(ಎಂ) ಮತ್ತು ಸಿಪಿಐ ಪಕ್ಷಗಳು ಎನ್‌ಡಿಎ ಮೈತ್ರಿಕೂಟಕ್ಕೆ ಬರಬೇಕು ಎಂದು ಎಂದು ಅಠವಳೆ ಹೇಳಿದ್ದಾರೆ.

ಕೇರಳದ ಪಿಣರಾಯಿ ವಿಜಯನ್ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ದೀರ್ಘಕಾಲದಿಂದ ಹಣಕಾಸು ಸಂಘರ್ಷ ನಡೆಯುತ್ತಿದೆ. ಕೇಂದ್ರ ಸರ್ಕಾರವು ಕೇರಳಕ್ಕೆ ನೀಡಬೇಕಾದ ತೆರಿಗೆ ಪಾಲನ್ನು ಕಡಿತಗೊಳಿಸುತ್ತಿದೆ ಮತ್ತು ಸಾಲ ಪಡೆಯುವ ಮಿತಿಯನ್ನು ನಿರ್ಬಂಧಿಸುತ್ತಿದೆ ಎಂದು ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಅಠವಳೆ ಅವರ ಹೇಳಿಕೆಯು ಪರೋಕ್ಷವಾಗಿ ಕೇಂದ್ರದಲ್ಲಿರುವ ಪಕ್ಷದ ಜೊತೆಗಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂಬ ಸಂದೇಶ ನೀಡುವಂತಿದೆ. ಇದನ್ನೇ ಎಂ.ವಿ. ಗೋವಿಂದನ್ “ಸಂವಿಧಾನ ವಿರೋಧಿ” ಎಂದು ಕರೆದಿದ್ದಾರೆ, ಸಂವಿಧಾನದ ಪ್ರಕಾರ ಕೇಂದ್ರವು ಎಲ್ಲಾ ರಾಜ್ಯಗಳನ್ನು ಸಮಾನವಾಗಿ ನೋಡಬೇಕು ಎಂಬುದು ಗಮನಾರ್ಹ ವಿಚಾರ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಐ(ಎಂ) ಪಕ್ಷವು ಸೈದ್ಧಾಂತಿಕವಾಗಿ ಬಿಜೆಪಿಗೆ ತದ್ವಿರುದ್ಧವಾಗಿವೆ. ಅವರು ಎನ್‌ಡಿಎ ಸೇರುವ ಸಾಧ್ಯತೆ ಇಲ್ಲ ಎನ್ನಬಹುದು.

 

Related Posts

Leave a Reply

Your email address will not be published. Required fields are marked *