Menu

ರಾಮನ್, ಕಲ್ಪನಾ ಚಾವ್ಲಾರಂತೆ ಸಾಧನೆ ಮಾಡಬಹುದು: ಡಿಕೆ ಶಿವಕುಮಾರ್ ಕಿವಿಮಾತು

ಬೆಂಗಳೂರು: ಜೀವನದಲ್ಲಿ ಬದ್ಧತೆ ಹಾಗೂ ಶಿಸ್ತಿನಿಂದ ವಿದ್ಯಾಭ್ಯಾಸ ಮಾಡಿದರೆ ನೀವೂ ಸಿ.ವಿ ರಾಮನ್, ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್, ರಾಕೇಶ್ ಶರ್ಮಾರಂತೆ ಸಾಧನೆ ಮಾಡಬಹುದು. ಗುರಿ ಮುಟ್ಟುವ ಆತ್ಮವಿಶ್ವಾಸ ಬೆಳೆಸಿಕೊಳ್ಳಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಕ್ಕಳಿಗೆ ಕಿವಿಮಾತು ಹೇಳಿದರು.

ಬೆಂಗಳೂರಿನ ನೆಹರೂ ತಾರಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರೊ. ಯು.ಆರ್. ರಾವ್ ಭವನದ ಉದ್ಘಾಟನೆ ಸಮಾರಂಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಮಾತನಾಡಿದರು.

“ಇಲ್ಲಿ ನೀವೆಲ್ಲರೂ ಅನೇಕ ವಿಜ್ಞಾನಿಗಳನ್ನು ನೋಡಿದ್ದೀರಿ. ನೀವು ಕೂಡ ಅವರಂತೆಯೇ ಸಾಧನೆ ಮಾಡಬಹುದು. ಯಾರೂ ಯಾರಿಗಿಂತ ಕಡಿಮೆ ಇಲ್ಲ. ನೀವು ಯಶಸ್ಸು ಸಾಧಿಸಬೇಕಾದರೆ, ಸಾಧನೆಯ ಕನಸು ಕಾಣಬೇಕು, ಆ ಕನಸು ಈಡೇರಿಸಲು ಇಚ್ಚೆ ಇರಬೇಕು, ಬದ್ಧತೆ, ಶಿಸ್ತು ಹೊಂದಿರಬೇಕು. ಆಗ ಮಾತ್ರ ಸಾಧನೆ ಸಾಧ್ಯ. ಈಗ ಸಾಧನೆ ಮಾಡಿರುವ ಅನೇಕ ವಿಜ್ಞಾನಿಗಳು ನಿಮ್ಮಂತೆಯೇ ಹುಟ್ಟಿ ಬೆಳೆದವರು. ನಿಮಗೆ ಇರುವಷ್ಟು ಅವಕಾಶ, ಸೌಲಭ್ಯಗಳು ಅವರಿಗೆ ಇರಲಿಲ್ಲ. ಆದರೂ ಅವರು ಸಾಧನೆ ಮಾಡಿದ್ದಾರೆ” ಎಂದು ತಿಳಿಸಿದರು.

“ಶುಭಂ ಕರೋತಿ ಕಲ್ಯಾಣಂ-ಆರೋಗ್ಯಂ ಧನಸಂಪಾದ | ಜ್ಞಾನಶಕ್ತಿ ಸ್ವರೂಪಸ್ಯ, ದೀಪ ಜ್ಯೋತಿ ಪ್ರಕಾಶಿತಂ ಎಂಬ ಶ್ಲೋಕದ ಆಶಯದಂತೆ ನಿಮ್ಮೆಲ್ಲರಿಗೂ ಮಂಗಳವಾಗಲಿ, ಜ್ಞಾನ ಹೆಚ್ಚಾಗಲಿ ಎಂದು ಈ ಕಾರ್ಯಕ್ರಮದಲ್ಲಿ ಈ ಜ್ಯೋತಿ ಬೆಳಗಿಸಲಾಗಿದೆ. ಗಾಂಧಿಜಿ ಅವರ ವಿಜ್ಞಾನದ ವಿಚಾರ ಹಾಗೂ ನೆಹರೂ ಅವರ ಚಿಂತನೆ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಈ ಭವನಕ್ಕೆ ಯು.ಆರ್. ರಾವ್ ಅವರ ಹೆಸರು ಇಡಲಾಗಿದೆ. ಸಿ.ವಿ. ರಾಮನ್ ಅವರನ್ನು ನಾವು ಸ್ಮರಿಸಿದ್ದೇವೆ. ನಾವು ನಮ್ಮ ಮೂಲವನ್ನು ಮರೆಯಬಾರದು. ಮರೆತರೆ ಫಲ ಸಿಗುವುದಿಲ್ಲ. ವಿಜ್ಞಾನ ಕ್ಷೇತ್ರದ ಮಹಾಸಾಧಕರು ಹಾಕಿಕೊಟ್ಟಿರುವ ಬುನಾದಿ ಮೇಲೆ ನಾವು ಮುಂದೆ ಸಾಗಬೇಕು” ಎಂದರು.

“ಇಲ್ಲಿರುವ ನೀವು 13-14 ವರ್ಷದ ಮಕ್ಕಳಿದ್ದೀರಿ. ನನಗೂ ಹಾಗೂ ನಿಮಗೂ ಸುಮಾರು 50 ವರ್ಷಗಳ ವ್ಯತ್ಯಾಸವಿದೆ. ನಮಗೆ ವಯಸ್ಸಾಗಿದೆ. ನಿಮ್ಮ ಬಳಿ ಬಹಳ ವಯಸ್ಸಿದೆ. ನಾನು ವಿದ್ಯಾರ್ಥಿಯಾಗಿದ್ದಾಗ ಇದೆಲ್ಲದರ ಬಗ್ಗೆ ಗೊತ್ತಿರಲಿಲ್ಲ. ನಮ್ಮ ಕಾಲದಲ್ಲಿ ಫೋನ್, ಕ್ಯಾಲ್ಯುಕೇಟರ್ ಕೂಡ ಇರಲಿಲ್ಲ. ಈಗ ಕಂಪ್ಯೂಟರ್, ಮೊಬೈಲ್ ಫೋನ್ ಗಳು ಬಂದಿವೆ. ನಾನು ನನ್ನ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ನನಗೆ ಶಿಕ್ಷಣದ ಮೌಲ್ಯ ಗೊತ್ತಾಗಿದ್ದೆ ಶಾಸಕ ಹಾಗೂ ಸಚಿವನಾದ ನಂತರ. ವಿಧಾನಸಭೆಯಲ್ಲಿ ಅತ್ಯುತ್ತಮ ಭಾಷಣ ಮಾಡುವ ನಾಯಕರನ್ನು ನೋಡಿ ನಾನು ಹಿಂಜರಿಯುತ್ತಿದ್ದೆ. ಉತ್ತಮ ಓದುಗ ಉತ್ತಮ ನಾಯಕನಾಗುತ್ತಾನೆ ಎಂಬ ಮಾತಿದೆ” ಎಂದು ಹೇಳಿದರು.

“ನೀವು ನಿಮ್ಮ ಶಿಕ್ಷಕರ ಜತೆಗೆ ಸ್ಪರ್ಧೆ ಮಾಡುವಷ್ಟು ಸಾಮರ್ಥ್ಯ ಹೊಂದಿದ್ದೀರಿ. ನಿಮ್ಮ ಅಂಗೈಯಲ್ಲಿರುವ ಮೊಬೈಲ್ ಗಳಲ್ಲೇ ಎಲ್ಲಾ ಮಾಹಿತಿ ದೊರೆಕುತ್ತದೆ. ಅಷ್ಟರ ಮಟ್ಟಿಗೆ ತಂತ್ರಜ್ಞಾನ ಮುಂದುವರಿದಿದೆ. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಲ್ಲಿ ರಾಜಕಾರಣಿ. ನನ್ನ ಆಯ್ಕೆ ಸದಾ ಶಿಕ್ಷಣ. ನಾನು ನನ್ನ 29-30ನೇ ವಯಸ್ಸಿಗೆ ಮಂತ್ರಿಯಾದೆ. ಆದರೆ 47ನೇ ವಯಸ್ಸಿನಲ್ಲಿ ಪದವಿ ಮಾಡಿದೆ. ಮಂತ್ರಿಯಾದುದಕ್ಕಿಂತ ಹೆಚ್ಚಾಗಿ, ಪದವಿ ಪಡೆದಾಗ ನನಗೆ ಹೆಚ್ಚು ಸಂತೋಷವಾಯಿತು. ನನ್ನ ಮಕ್ಕಳು ನೀನೇ ಓದಿಲ್ಲ, ನಮಗೆ ಓದು ಎನ್ನುತ್ತೀಯಾ ಎಂದು ಪ್ರಶ್ನೆ ಮಾಡುತ್ತಾರೆ ಎಂಬ ಭಯದಲ್ಲಿ ನಾನು ಪದವಿ ಪಡೆದೆ” ಎಂದು ತಿಳಿಸಿದರು.

“ವಿದ್ಯೆ ಎಂಬುದು ದಾಯಾದಿಗಳು ಕಸಿದುಕೊಳ್ಳಲಾಗದ, ನೀರಿನಲ್ಲಿ ನೆನೆಯದ, ಬೆಂಕಿಯಲ್ಲಿ ಸುಡದ ಗುಪ್ತ ನಿಧಿ. ಈ ನಿಧಿಯನ್ನು ಧಕ್ಕಿಸಿಕೊಳ್ಳಲು ನಿಮಗೆ ಅವಕಾಶವಿದೆ. ನಾನು ಇತ್ತೀಚೆಗೆ ದುಬೈ ಪ್ರವಾಸ ಮಾಡಿದ್ದಾಗ ಒಬ್ಬ ಪ್ರೊಫೆಸರ್ ಜತೆ ಮಾತನಾಡುತ್ತಿದ್ದೆ. ಆಗ ಅವರು, ಮುಂದಿನ 15-20 ವರ್ಷಗಳಲ್ಲಿ ಶಿಕ್ಷಕರ ಅಗತ್ಯವೇ ಇರುವುದಿಲ್ಲ, ಕೃತಕ ಬುದ್ದಿಮತ್ತೆ ಮೂಲಕ ಶಿಕ್ಷಣ ನೀಡುವ ವ್ಯವಸ್ಥೆ ಬರಲಿದೆ ಎಂದು ಹೇಳಿದರು. ನೀವೆಲ್ಲರೂ ಕರ್ನಾಟಕ ರಾಜ್ಯದಲ್ಲಿದ್ದೀರಿ. ಏಷ್ಯಾದಲ್ಲಿ ಮೊದಲು ವಿದ್ಯುತ್ ಉತ್ಪಾದನೆ ಮಾಡಿದ್ದು ಕರ್ನಾಟಕದಲ್ಲಿ. ಜವಾಹರ್ ಲಾಲ್ ನೆಹರೂ ಅವರು ಬೆಂಗಳೂರಿನಲ್ಲಿ ಹೆಚ್ಎಎಲ್, ಹೆಚ್ಎಂಟಿ, ಇಸ್ರೋ, ಬಿಹೆಚ್ಇಎಲ್, ಐಐಟಿ ಮಾಡಿದರು? ಕಾರಣ ನಮ್ಮ ರಾಜ್ಯದ ಮಕ್ಕಳು ಬಹಳ ಪ್ರತಿಭಾವಂತರು. ಹೆಣ್ಣುಮಕ್ಕಳು ಕೂಡ ಸಾಧನೆ ಮಾಡಬಹುದು. ಸಂಸತ್ತಿನಲ್ಲಿ 33%ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಮಹಿಳೆಯರು ನಾಯಕಿಯರಾಗಿ ಬೆಳೆಯುತ್ತಿದ್ದಾರೆ” ಎಂದರು.

“ಇಂದು ಬಾಹ್ಯಾಕಾಶದಲ್ಲಿ ಏಳು ಗ್ರಹಗಳು ಒಂದೇ ಸಾಲಿನಲ್ಲಿ ಸೇರುತ್ತಿವೆ. ಮತ್ತೆ ಇದು ಸಾಧ್ಯವಾಗುವುದು 20240ರಲ್ಲಿ ಅಂದರೆ 15 ವರ್ಷಗಳ ನಂತರ ಎಂದು ಪತ್ರಿಕೆಗಳಲ್ಲಿ ವರದಿಯಾಗಿವೆ. ಕುವೆಂಪು ಅವರು ತಮ್ಮ ಪದ್ಯದಲ್ಲಿ ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರಬನ್ನಿ ಬಡತನವ ಬುಡಮಟ್ಟ ಕೀಳಬನ್ನಿ, ಮೌಢ್ಯತೆಯ ಮಾರಿಯನು ಹೊರದೂಡಲೈ ತನ್ನಿ, ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ ಎಂದು ಸಂದೇಶ ನೀಡಿದ್ದಾರೆ. ವಿಜ್ಞಾನ ದೇಶವನ್ನು ಮುನ್ನಡೆಸುತ್ತದೆ” ಎಂದು ಅಭಿಪ್ರಾಯಪಟ್ಟರು.

“ನಮ್ಮಲ್ಲಿ ಓದಿರುವ ಅತ್ಯುತ್ತಮ ವಿದ್ಯಾವಂತರು ವಿದೇಶಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ನಮ್ಮ ರಾಜ್ಯಗಳಲ್ಲಿ ಇರುವಷ್ಟು ಇಂಜಿನಿಯರಿಂಗ್ ಕಾಲೇಜು ಬೇರೆಲ್ಲೂ ಇಲ್ಲ. ಅತಿಹೆಚ್ಚು ವೈದ್ಯಕೀಯ ಶಿಕ್ಷಣ ಕಾಲೇಜು ಇರುವುದು ನಮ್ಮ ರಾಜ್ಯದಲ್ಲಿ. ಅತಿ ಹೆಚ್ಚು ಪ್ರತಿಭಾವಂತ ಮಾನವ ಸಂಪನ್ಮೂಲ ಇರುವುದು ನಮ್ಮ ರಾಜ್ಯದಲ್ಲೇ. ನೀವು ಎಂದಿಗೂ ನಿಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ನೀವು ಸಾಧನೆ ಮಾಡುತ್ತೀರಿ” ಎಂದು ಆತ್ಮಸ್ಥೈರ್ಯ ತುಂಬಿದರು.

“ವಿಜ್ಞಾನಿಗಳು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಬಾಹ್ಯಾಕಾಶ ಸಂಶೋಧನೆ ಪ್ರಮುಖ ಕ್ಷೇತ್ರವಾಗಿದ್ದು, ನೆಹರೂ ಅವರ ಕಾಲದಿಂದಲೂ ಇದಕ್ಕೆ ಅತ್ಯುತ್ತಮ ಪ್ರಾಶಸ್ತ್ಯ ನೀಡಲಾಗುತ್ತಿದೆ. ಇದು ದೇಶದ ಭವಿಷ್ಯ. ನೀವುಗಳು ಹಳ್ಳಿಗಳಲ್ಲಿ ಓದುತ್ತಿದ್ದೇನೆ ಎಂಬ ಹಿಂಜರಿಕೆ ಇಟ್ಟುಕೊಳ್ಳಬೇಡಿ. ಶಿಕ್ಷಕರು ಮಕ್ಕಳಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಅವರನ್ನು ನಾಯಕರನ್ನಾಗಿ ತಯಾರು ಮಾಡಬೇಕು. ನಾಯಕರು ಎಂದರೆ ಕೇವಲ ರಾಜಕೀಯ ಮಾತ್ರವಲ್ಲ. ಯಾವುದೇ ಕ್ಷೇತ್ರಕ್ಕೆ ಹೋದರೂ ಅಲ್ಲಿ ಸಾಧನೆ ಮಾಡುವಂತೆ ತಯಾರು ಮಾಡುವುದು. ಜವಹಾರ್ ಲಾಲ್ ನೆಹರೂ ಅವರು ತಮ್ಮ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುವಂತೆ ಕರೆ ನೀಡಿದರು. ಕಾರಣ ಮಕ್ಕಳ ಮನಸ್ಸು ಹಾಲಿನಂತೆ. ಅವರಲ್ಲಿ ಯಾವುದೇ ಬೇಧಭಾವ ಇರುವುದಿಲ್ಲ. ನಿಮ್ಮ ಭವಿಷ್ಯ ದೊಡ್ಡದಾಗಿದೆ. ನಿಮ್ಮ ಪೋಷಕರು, ಶಿಕ್ಷಕರ ಕೊಡುಗೆಯನ್ನು ನಿಮ್ಮ ಜೀವನದಲ್ಲಿ ಮರೆಯಬೇಡಿ. ನಿಮ್ಮೆಲ್ಲರಿಗೂ ಶುಭವಾಗಲಿ ಎಂದು ಈ ಸಂದರ್ಭದಲ್ಲಿ ಹಾರೈಸುತ್ತೇನೆ” ಎಂದು ತಿಳಿಸಿದರು..

Related Posts

Leave a Reply

Your email address will not be published. Required fields are marked *