ಸೋದರರಾದ ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಎರಡು ದಶಕಗಳ ನಂತರ ಮುಂಬೈನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಒಂದಾಗಿದ್ದಾರೆ. ಈ ಮೂಲಕ ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ.
ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರ ಖಂಡಿಸಿ ಶಿವಸೇನೆ ಉದ್ದವ್ ಬಾಳ ಸಾಹೇಬ್ ಠಾಕೆ ಬಣ ಹಾಗೂ ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್ ಎಸ್) ಜಂಟಿಯಾಗಿ ಮುಂಬೈನಲ್ಲಿ ಶನಿವಾರ ಆಯೋಜಿಸಿದ್ದ `ಆವಾಜ್ ಮರಾಠಾಚಿಯಾ’ (ಮರಾಠ ಭಾಷೆಗಾಗಿ ಧ್ವನಿ) ಎಂಬ ಸಾರ್ವಜನಿಕ ಕಾರ್ಯಕ್ರಮದಲ್ಲಿ ಠಾಕ್ರೆ ಸೋದರರು ವೇದಿಕೆ ಹಂಚಿಕೊಂಡಿದ್ದಾರೆ.
2005ರ ನಂತರ ಇದೇ ಮೊದಲ ಬಾರಿ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ.
ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕು ಎಂದು ತ್ರಿ ಭಾಷಾ ಸೂತ್ರದಡಿ ಹೇರಿಕೆಯನ್ನು ಖಂಡಿಸಿ 64 ವರ್ಷದ ಉದ್ಧವ್ ಠಾಕ್ರೆ ಮತ್ತು 57 ವರ್ಷದ ರಾಜ್ ಠಾಕ್ರೆ ಹೋರಾಟ ಆರಂಭಿಸಿದ್ದು, ಈ ತ್ರಿಭಾಷಾ ಸೂತ್ರದಿಂದ ಮರಾಠಿ ಭಾಷೆ ರಕ್ಷಿಸಬೇಕು ಎಂದು ಆಗ್ರಹಿಸಿದರು.
ನಮ್ಮನ್ನು ಒಂದುಗೂಡಿಸಲು ಬಾಳಾ ಸಾಹೇಬ್ ಅವರ ಕೈಯಿಂದ ಆಗಲಿಲ್ಲ. ಬೇರೆ ಯಾರ ಕೈಯಿಂದಲೂ ಆಗದೇ ಇದ್ದಿದ್ದನ್ನು ದೇವೇಂದ್ರ ಫಡ್ನವೀಸ್ ಮಾಡಿದರು. ತ್ರಿಭಾಷಾ ಸೂತ್ರದ ವಿರುದ್ಧ ಮರಾಠಿ ಭಾಷೆ ರಕ್ಷಣೆಗೆ ನಾವಿಬ್ಬರೂ ಒಂದಾಗಿದ್ದೇವೆ ಎಂದು ಉದ್ಧವ್ ಠಾಕ್ರೆ ನುಡಿದರು.
ಬಿಜೆಪಿ ತ್ರಿಭಾಷ ಸೂತ್ರವನ್ನು ಜಾರಿಗೆ ತರಲು ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ವಿಫಲವಾಗಿದೆ. ಈಗ ಹೊಸದಾಗಿ ಮಹಾರಾಷ್ಟ್ರದ ಮೇಲೆ ಹೇರಲು ಮುಂದಾಗಿದೆ ಎಂದು ಉದ್ಧವ್ ಠಾಕ್ರೆ ಆರೋಪಿಸಿದರು.