Saturday, February 22, 2025
Menu

ನೂತನ ಮುಖ್ಯ ಚುನಾವಣಾ ಆಯುಕ್ತರ ನೇಮಕ‌ ಮುಂದಿನ ವಾರ ಪ್ರಧಾನಿ ಸಭೆ

delhi election

ನವದೆಹಲಿ: ಮುಂದಿನ ಮುಖ್ಯ ಚುನಾವಣಾ ಆಯುಕ್ತರ ಹೆಸರನ್ನು ಅಂತಿಮಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಮುಂದಿನ ವಾರದ ಆರಂಭದಲ್ಲಿ ಸಭೆ ಸೇರಲಿದೆ.

ಹಾಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಅವರು ಇದೇ ಫೆಬ್ರವರಿ 18 ರಂದು ನಿವೃತ್ತರಾಗುವ ಮೊದಲು ಸಮಿತಿಯು ಭಾನುವಾರ ಅಥವಾ ಸೋಮವಾರ ಸಭೆ ಸೇರುವ ಸಾಧ್ಯತೆ ಇದೆ.

ಶೋಧನಾ ಸಮಿತಿಯು ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪೈಕಿ ಒಬ್ಬರ ಹೆಸರನ್ನು ಸಮಿತಿಯು ಶಿಫಾರಸು ಮಾಡಲಿದೆ. ನಂತರ ರಾಷ್ಟ್ರಪತಿಗಳು ಶಿಫಾರಸಿನ ಆಧಾರದ ಮೇಲೆ ಮುಂದಿನ ಸಿಇಸಿಯನ್ನು ನೇಮಕ ಮಾಡಲಿದ್ದಾರೆ.

ಪ್ರಸ್ತುತ ರಾಜೀವ್ ಕುಮಾರ್ ಅವರನ್ನು ಹೊರತು ಪಡಿಸಿದರೆ ಜ್ಞಾನೇಶ್ ಕುಮಾರ್ ಅತ್ಯಂತ ಹಿರಿಯ ಚುನಾವಣಾ ಆಯುಕ್ತರಾಗಿದ್ದಾರೆ. ಅವರ ಅಧಿಕಾರಾವಧಿ ಜನವರಿ 26, 2029 ರವರೆಗೆ ಇದೆ. ಸುಖ್ಬೀರ್ ಸಿಂಗ್ ಸಂಧು ಅವರು ಮತ್ತೊಬ್ಬ ಚುನಾವಣಾ ಆಯುಕ್ತರಾಗಿದ್ದಾರೆ.

ಅತ್ಯಂತ ಹಿರಿಯ ಚುನಾವಣಾ ಆಯುಕ್ತರನ್ನು (ಇಸಿ) ಅಧಿಕಾರದಲ್ಲಿರುವವರ ನಿವೃತ್ತಿಯ ನಂತರ ಸಿಇಸಿಯಾಗಿ ಬಡ್ತಿ ನೀಡುವುದು ಈವರೆಗೆ ನಡೆದುಕೊಂಡು ಬಂದ ಸಂಪ್ರದಾಯವಾಗಿತ್ತು. ಆದರೆ ಕಳೆದ ವರ್ಷ ಸಿಇಸಿ ಮತ್ತು ಇಸಿಗಳ ನೇಮಕಾತಿಗೆ ಸಂಬಂಧಿಸಿದ ಹೊಸ ಕಾನೂನು ಜಾರಿಗೆ ಬಂದ ನಂತರ, ಶೋಧನಾ ಸಮಿತಿಯು ಐದು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಹೆಸರುಗಳನ್ನು ಹುದ್ದೆಯ ನೇಮಕಾತಿಗಾಗಿ ಶಾರ್ಟ್​ ಲಿಸ್ಟ್ ಮಾಡಿ ಪ್ರಧಾನಿ ನೇತೃತ್ವದ ಸಮಿತಿಗೆ ಸಲ್ಲಿಸುತ್ತದೆ.

ಸಿಇಸಿ ಮಾತ್ರವಲ್ಲದೆ ರಾಜೀವ್ ಕುಮಾರ್ ಅವರ ನಿವೃತ್ತಿಯಿಂದ ಸೃಷ್ಟಿಯಾಗಲಿರುವ ಖಾಲಿ ಸ್ಥಾನವನ್ನು ತುಂಬಲು ಹೊಸ ಚುನಾವಣಾ ಆಯುಕ್ತರನ್ನು ಕೂಡ ನೇಮಿಸುವ ಸಾಧ್ಯತೆ ಇದೆ.

ಸಿಇಸಿಯನ್ನು ನೇಮಿಸಲು “ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರು (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ, 2023” ಯ ನಿಬಂಧನೆಗಳನ್ನು ಇದೇ ಮೊದಲ ಬಾರಿಗೆ ಅನ್ವಯಿಸಲಾಗುತ್ತಿದೆ.

ಕಾನೂನಿನ ಪ್ರಕಾರ, ಸಿಇಸಿ ಮತ್ತು ಇತರ ಇಸಿಗಳ ಹುದ್ದೆಗೆ ಭಾರತ ಸರ್ಕಾರದ ಕಾರ್ಯದರ್ಶಿ ಶ್ರೇಣಿಗೆ ಸಮಾನವಾದ ಹುದ್ದೆಯನ್ನು ಹೊಂದಿರುವ ವ್ಯಕ್ತಿಗಳನ್ನು ನೇಮಕ ಮಾಡಲಾಗುತ್ತದೆ ಮತ್ತು ಇವರು ಚುನಾವಣೆಗಳ ನಿರ್ವಹಣೆಯಲ್ಲಿ ಜ್ಞಾನ ಮತ್ತು ಅನುಭವ ಹೊಂದಿರುವ ವಿಶ್ವಾಸಾರ್ಹ ವ್ಯಕ್ತಿಗಳಾಗಿರುತ್ತಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನಿಯಿಂದ ನಾಮನಿರ್ದೇಶನಗೊಂಡ ಕೇಂದ್ರ ಕ್ಯಾಬಿನೆಟ್ ಸಚಿವರು ಈ ಸಮಿತಿಯ ಭಾಗವಾಗಿದ್ದಾರೆ

Related Posts

Leave a Reply

Your email address will not be published. Required fields are marked *