ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಪೌರಾಯುಕ್ತೆಗೆ ನಿಂದಿಸಿದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಉಚ್ಚಾಟಿತ ನಾಯಕ ರಾಜೀವ್ ಗೌಡ ಅವರನ್ನು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.
ಪೌರಾಯುಕ್ತೆ ನಿರ್ಮಲಾ ಗೌಡ ಅವರಿಗೆ ಮೊಬೈಲ್ ಸಂಭಾಷಣೆ ವೇಳೆ ಬ್ಯಾನರ್ ವಿಷಯದಲ್ಲಿ ಅಶ್ಲೀಲವಾಗಿ ನಿಂದಿಸಿದ್ದ ರಾಜೀವ್ ಗೌಡ ನಂತರ ತಲೆಮರೆಸಿಕೊಂಡಿದ್ದರು.
ರಾಜೀವ್ ಗೌಡ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ರದ್ದುಗೊಂಡಿದ್ದರೂ ಅಲ್ಲದೇ ನ್ಯಾಯಾಲಯ ಮಹಿಳೆಯರ ಬಗ್ಗೆ ನಿಮಗೆ ಗೌರವ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೇ ಪೊಲೀಸರು ಬಂಧಿಸಲು ಯಾಕೆ ವಿಳಂಬ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿತ್ತು. ಇದೇ ವೇಳೆ ಕಾಂಗ್ರೆಸ್ ಪಕ್ಷದಿಂದ ರಾಜೀವ್ ಗೌಡ ಅವರನ್ನು ಉಚ್ಚಾಟಿಸಲಾಗಿತ್ತು.
ಈ ಎಲ್ಲಾ ಬೆಳವಣಿಗೆ ನಡುವೆ ಕೇರಳದಲ್ಲಿ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ವಿರುದ್ಧ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ರಾಜೀವ್ ಗೌಡ ಅವರನ್ನು ಬಂಧಿಸಿದ ಚಿಕ್ಕಬಳ್ಳಾಪುರದ ಪೊಲೀಸರು ಶಿಡ್ಲಘಟ್ಟ ಪೊಲೀಸ್ ಠಾಣೆಗೆ ಕರೆತರುತ್ತಿದ್ದಾರೆ.
ಸೋಮವಾರ ಮಧ್ಯರಾತ್ರಿ ರಾಜೀವ್ ಗೌಡ ಅವರನ್ನು ಶಿಡ್ಲಘಟ್ಟಕ್ಕೆ ಕರೆತಂದ ನಂತರ ಮಂಗಳವಾರ ಬೆಳಿಗ್ಗೆ ಚಿಂತಾಮಣಿ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


