ಕಾನೂನುಬದ್ಧ ವಯಸ್ಸನ್ನು ತಲುಪದಿದ್ದರೂ ಪರಸ್ಪರ ಒಪ್ಪಿಗೆಯಿಂದ ಲಿವ್-ಇನ್ ಸಂಬಂಧದಲ್ಲಿರಲು ಯುವಕ ಯುವತಿ ಅರ್ಹರಾಗಿರುತ್ತಾರೆ, ಅವರ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಲಾಗುವುದಿಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಹೇಳಿದೆ.
ಕೋಟಾದ 18 ವರ್ಷದ ಯುವತಿ ಮತ್ತು 19 ವರ್ಷದ ಯುವಕ ರಕ್ಷಣೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನೂಪ್ ಧಂಡ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ಪ್ರಕಟಿಸಿದೆ.
ಅರ್ಜಿಯಲ್ಲಿ ಯುವಕ, ಯುವತಿ ತಾವು ಸ್ವತಂತ್ರವಾಗಿ ಜತೆಗೆ ವಾಸಿಸುತ್ತಿದ್ದೇವೆ. 2025ರ ಅಕ್ಟೋಬರ್ 27ರಂದು ಲಿವ್-ಇನ್ ಒಪ್ಪಂದವನ್ನು ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಯುವತಿಯ ಕುಟುಂಬವು ಈ ಸಂಬಂಧವನ್ನು ವಿರೋಧಿಸಿ ಇಬ್ಬರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದೆ. ಈ ಬಗ್ಗೆ ಕೋಟಾ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಅರ್ಜಿಯನ್ನು ವಿರೋಧಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ವಿವೇಕ್ ಚೌಧರಿ, ಯುವಕನಿಗೆ ಮದುವೆಗೆ ಕನಿಷ್ಠ ಕಾನೂನುಬದ್ಧ 21 ವರ್ಷ ಆಗಿಲ್ಲ.ಆತನಿಗೆ ಲಿವ್-ಇನ್ ಸಂಬಂಧದಲ್ಲಿರಲು ಅವಕಾಶ ನೀಡಬಾರದು ಎಂದು ವಾದಿಸಿದರು. ಪ್ರತಿಕ್ರಿಯಿಸಿದ ನ್ಯಾಯಾಲಯವು, ಅರ್ಜಿದಾರರು ಮದುವೆಯಾಗುವ ವಯಸ್ಸಿನವರಲ್ಲ ಎಂಬ ಕಾರಣಕ್ಕಾಗಿ ಸಂವಿಧಾನದ 21ನೇ ವಿಧಿ ಯುವಕನಿಗೆ ನೀಡುವ ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ನಿರಾಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಲಿವ್-ಇನ್ ಸಂಬಂಧಗಳನ್ನು ಭಾರತೀಯ ಕಾನೂನಿನಡಿ ನಿಷೇಧಿಸಲಾಗಿಲ್ಲ ಅಥವಾ ಅಪರಾಧವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅರ್ಜಿಯಲ್ಲಿ ಕುಟುಂಬಸ್ಥರು ಬೆದರಿಕೆ ಹಾಕಿರುವ ವಿಚಾರವಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವಂತೆ ಭಿಲ್ವಾರ ಮತ್ತು ಜೋಧ್ಪುರ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿಗಳಿಗೆಸೂಚಿಸಿ, ಅಗತ್ಯವಿದ್ದರೆ ಜೋಡಿಗೆ ಅಗತ್ಯ ರಕ್ಷಣೆಯನ್ನು ಒದಗಿಸಲು ನಿರ್ದೇಶಿಸಿದ್ದಾರೆ.


