Menu

ಮನರೇಗಾ ಉಳಿಸಲು ರಾಜಭವನ ಚಲೋ: ಡಿಕೆ ಶಿವಕುಮಾರ್

ಮನರೇಗಾ ಉಳಿಸುವ ಸಲುವಾಗಿ ಮಂಗಳವಾರ ರಾಜಭವನ ಚಲೋ ನಡೆಸಲಾಗುವುದು. ಪ್ರತಿ ತಾಲ್ಲೂಕಿನಲ್ಲೂ ಕನಿಷ್ಠ ಐದು ಕಿಲೋಮೀಟರ್ ಪಾದಯಾತ್ರೆ ನಡೆಸಲಾಗುವುದು. ಪ್ರತಿ ಪಂಚಾಯತಿ ಮಟ್ಟದಲ್ಲೂ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳಿಗೆ  ಪ್ರತಿಕ್ರಿಯೆ ನೀಡಿದರು. 20 ವರ್ಷಗಳ ಹಿಂದೆ ಸೋನಿಯಾಗಾಂಧಿ ಅವರ ನಾಯಕತ್ವದಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರ ಜಾರಿಗೆ ತಂದಿದ್ದ ಸಾಂವಿಧಾನಿಕ ಹಕ್ಕಾಗಿ ಬಂದಿರುವ ಮನರೇಗಾವನ್ನು ನಾಶ ಮಾಡಲು ಹೊರಟಿರುವುದು ನಮಗೆಲ್ಲಾ ಆಶ್ಚರ್ಯ ಉಂಟು ಮಾಡಿದೆ. ಮಹಾತ್ಮಗಾಂಧಿ ಅವರ ಹೆಸರಿನಲ್ಲಿ ಪ್ರಾರಂಭವಾದ ಯೋಜನೆ ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕಿಗೆ ಖಾತ್ರಿ ನೀಡಿತ್ತು. ಆದರೆ ಈ ಹಕ್ಕು ಈಗ ಮೊಟಕಾಗಿದೆ. ಆದಕಾರಣ ಇಡೀ ದೇಶದ ಉದ್ದಗಲಕ್ಕೂ ಈ ಬಗ್ಗೆ ಹೋರಾಟ ರೂಪಿಸಲಾ ಗಿದೆ ಎಂದರು.

ಪ್ರತಿವರ್ಷ 6 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳು ಮನರೇಗಾ ಅಡಿ ನಡೆಯುತ್ತಿದ್ದವು. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ದೊರೆಯುತ್ತಿತ್ತು. ವಿಧಾನಸಭೆಯಲ್ಲೂ ಇದರ ಬಗ್ಗೆ ಪ್ರತಿಭಟನೆ ಹಾಗೂ ನಿರ್ಣಯ ತೆಗೆದುಕೊಳ್ಳಲು ನಾವು ಸಜ್ಜಾಗಿದ್ದೇವೆ ಎಂದು ಹೇಳಿದರು. ಮನರೇಗಾ ಮರು ಸ್ಥಾಪಿಸುವವರೆಗೂ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದರು.

ಯಾವ ರೀತಿಯ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಕೇಳಿದಾಗ, ಮನರೇಗಾವನ್ನು ನಾಶ ಮಾಡುವ ಕಾನೂನನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಗುವುದು. ರೈತರ ಕರಾಳ ಕಾಯ್ದೆಗಳನ್ನು ಹೇಗೆ ಹಿಂಪಡೆಯಲಾಯಿತೋ ಅದೇ ರೀತಿ ಇದನ್ನೂ ಹಿಂಪಡೆಯಬೇಕು. ಹಿಂಪಡೆಯುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಉತ್ತರಿಸಿದರು.

ಜೆಡಿಎಸ್ ಮನರೇಗಾ ಬದಲಾವಣೆ ಬಗ್ಗೆ ವಿರೋಧ ವ್ಯಕ್ತಪಡಿಸದೇ ಇರುವ ಬಗ್ಗೆ ಕೇಳಿದಾಗ,”ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಸಹ ಬಾಯಿ ಬಿಡುತ್ತಿಲ್ಲ. ಹೊಸ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಗ್ರಾಮೀಣ ಭಾಗದ ಜನಪ್ರತಿನಿಧಿಯಾಗಿ ನನ್ನ ಅನುಭವದಲ್ಲಿ ಹೇಳುವುದಾದರೆ ಇದರ ಅನುಷ್ಠಾನ ಅಸಾಧ್ಯ ಎಂದರು.

ಈ ಯೋಜನೆಗೆ ಅನುದಾನ ಒಗಗಿಸಿ ಕೊಡುವವರು ಯಾರು? ಕೇಂದ್ರವೇ ಅನುದಾನ ಒದಗಿಸಿಕೊಡಲಿ. ಕೆಲವು ನಾಯಕರು ಚರ್ಚೆಗೆ ಬರುತ್ತೇವೆ ಎಂದು ಹೇಳಿದ್ದಾರೆ. ನಾವು ಸದನದಲ್ಲಿ ಅವರ ಚರ್ಚೆಗೆ ಉತ್ತರ ನೀಡಲು ಸಿದ್ಧರಿದ್ದೇವೆ ಎಂದರು.

2028 ಕ್ಕೆ ಮುಖ್ಯಮಂತ್ರಿಯಾಗುತ್ತೇನೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಇಂತಹ ಒಳ್ಳೆ ದಿನ ಏಕೆ ಅಶುಭ ಮಾತನ್ನಾಡುವುದು, ಆ ವಿಚಾರ ಬೇಡ ಬಿಡಿ ಎಂದು ಪ್ರತಿಕ್ರಿಯಿಸಿದರು.

ತಂದೆಗಾಗಿ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಕುಮಾರಸ್ವಾಮಿ ಹೇಳಿರುವ ಬಗ್ಗೆ ಕೇಳಿದಾಗ, ನಾವು ಸೇವೆ ಮಾಡುತ್ತಿರುವುದು ನಾಡಿನ ಜನತೆಗಾಗಿ. ಕುಟುಂಬಕ್ಕಾಗಿಯಲ್ಲ. ಕುಟುಂಬದ ಆಸೆ, ಭಾವನೆಗಳು, ತೊಂದರೆಯಲ್ಲಿ ಇರುವದರ ಬಗ್ಗೆ ಅವರು ಮಾತನಾಡಿಕೊಳ್ಳಲಿ. ನಾವು ಈ ದೇಶದ ಜನತೆಯ ಹಿತಕ್ಕಾಗಿ ರಾಜಕಾರಣ ಮಾಡುತ್ತಿದ್ದೇವೆ ಎಂದು ಹೇಳಿದರು.

ಹಾಸನ ಜಿಡಿಎಸ್ ಸಮಾವೇಶದ ಉದ್ದಕ್ಕೂ ತಮ್ಮನ್ನು ನೆನಪಿಸಿಕೊಂಡಿದ್ದರ ಬಗ್ಗೆ ಕೇಳಿದಾಗ, ನಮ್ಮನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ ಶಕ್ತಿ ಬರುವುದಿಲ್ಲ, ಜೀವ ಬರುವುದಿಲ್ಲ, ಧೈರ್ಯ ಬರುವುದಿಲ್ಲ. ಅದಕ್ಕೆ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದರು.

ಮನೆಗೆ ನುಗ್ಗಿ ಬಂಧಿಸಲಾಯಿತು ಎನ್ನುವ ದೇವೆಗೌಡರ ಹೇಳಿಕೆ ಬಗ್ಗೆ ಕೇಳಿದಾಗ,”ಈ ದೇಶದಲ್ಲಿ ಏನೇನು ಕಾನೂನು ಇದೆಯೋ ಅದೆಲ್ಲವೂ ಎಲ್ಲರಿಗೂ ಒಂದೇ. ಯಾರಿಗೆ ಏನೇನು ಕಾನೂನು ಮಾಡಬೇಕು ಅನ್ನೋದಕ್ಕೆ ನೀವೇ ಉತ್ತರ ನೀಡಬೇಕು ಎಂದು  ಪ್ರತಿಕ್ರಿಯಿಸಿದರು.

ಸದನದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ರಾಷ್ಟ್ರಪತಿಯವರಿಗೆ ರಾಜ್ಯಪಾಲರು ಪತ್ರ ಬರೆದಿರುವ ಬಗ್ಗೆ ಕೇಳಿದಾಗ, ಇದರ ಬಗ್ಗೆ ನನಗೆ ಮಾಹಿತಿಯಿಲ್ಲ. ರಾಜ್ಯಪಾಲರು ಭಾಷಣ ಓದಿ, ರಾಷ್ಟ್ರಗೀತೆ ಆಗುವ ತನಕ ಇರಬಹುದಿತ್ತು. ರಾಜ್ಯಪಾಲರಿಗೆ ನರೇಗಾ ಬಗೆಗಿನ ಭಾಷಣ ಓದುವುದಕ್ಕೆ ಇಷ್ಟವಿಲ್ಲದಿದ್ದರೆ ಹಾಗೆ ಇರಬಹುದಿತ್ತು. ಜತೆಗೆ ಸಾಕಷ್ಟು ಬೇರೆ ಅವಕಾಶಗಳೂ ಇದ್ದವು. ರಾಜ್ಯಪಾಲರು ಸರ್ಕಾರ ನೀಡಿದ ಭಾಷಣ ಓದುವುದು ಸಂವಿಧಾನ ರಕ್ಷಣೆಯ ಕರ್ತವ್ಯ. ನಮ್ಮಲ್ಲಿ ಅಲ್ಲದೇ ಬೇರೆ ರಾಜ್ಯಗಳಲ್ಲೂ ಇದೇ ರೀತಿ ಆಗಿದೆ ಎಂದರು.

Related Posts

Leave a Reply

Your email address will not be published. Required fields are marked *