ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು, ಭೂ ಕುಸಿತ, ಗೋಡೆ ಕುಸಿತ ಆಗಿ ಸಾವು ಸಂಭವಿಸಿರುವ ಬಗ್ಗೆ ಸಮಗ್ರ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾಧಿಕಾರಿಗೆ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ವರದಿ ಮಾಡುವಂತೆ ಸೂಚನೆ ನೀಡಿದ್ದಾರೆ.
ಮಳೆಯಿಂದಾಗಿ ಉಳ್ಳಾಲ ತಾಲೂಕಿನ ಕೆಲವೆಡೆ ಗುಡ್ಡ ಕುಸಿತದಿಂದಾಗಿ ಪ್ರಾಣ ಹಾನಿ ಸಂಭವಿಸಿರುವ ಮಾಹಿತಿ ತಿಳಿದ ಭಾಧ್ಯಕ್ಷ ಯು.ಟಿ.ಖಾದರ್ ಮುಂಜಾಗ್ರತಾ ಹಾಗೂ ರಕ್ಷಣಾ ಕಾರ್ಯಾಚರಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲು ಮದೀನಾದಿಂದಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಉಳ್ಳಾಲ ತಾಲೂಕಿನ ಬೆಳ್ಮ , ಮಂಜನಾಡಿ, ಉಳ್ಳಾಲ ಬೈಲು, ಅಕ್ಕರೆಕೆರೆ, ಮಿಲ್ಲತ್ ನಗರ, ಉಳಿಯ, ಅಲೇಕಳ, ಸುಂದರಿಬಾಗ್, ಕಲ್ಲಾಪು ಸೋಮೇಶ್ವವರ ಕೋಟೆಕಾರು ವ್ಯಾಪ್ತಿಯ ಕುಂಪಲ, ಕನೀರ್ ತೋಟ, ಉಚ್ಚಿಲ ಮುಂತಾದ ನದಿ ತಗ್ಗು ಪ್ರದೇಶಗಳಿಗೆ ಕೃತಕ ನೆರೆಯಿಂದ ಮನೆಗಳಿಗೆ ನೀರು ನುಗ್ಗಿದೆ. NDRF ಮುಂತಾದ ರಕ್ಷಣಾ ತಂಡಗಳನ್ನು ಸನ್ನದ್ಧಗೊಳಿಸಲು ಡಿಸಿಗೆ ಸೂಚನೆ ನೀಡಿದ್ದೇನೆ ಎಂದು ಖಾದರ್ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಅಧಿಕಾರಿಯನ್ನು ನೇಮಿಸಿ ಪರಿಸ್ಥಿತಿಯ ಅವಲೋಕನ ನಡೆಸಲು ಸೂಚನೆ ನೀಡಲಾಗಿದೆಯೆಂದು ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು,ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ, ಸಾರ್ವಜನಿಕರ ಸಂಪರ್ಕದಲ್ಲಿದ್ದುಕೊಂಡು ಸಹಕರಿಸುವಂತೆ ಸೂಚನೆ ನೀಡಿದ್ದು, ನಾಗರಿಕರೂ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.