ಹುಬ್ಬಳ್ಳಿ-ಧಾರವಾಡದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಆಯತಪ್ಪಿ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದಾರೆ. ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗಲಿ ರಸ್ತೆಯಲ್ಲಿ ಈ ದುರಂತ ನಡೆದಿದೆ.
ಬೀರಬಂದ ಓಣಿಯ ಹುಸೇನ ಕಳಸ ಬೆಳಗಲಿ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಯತಪ್ಪಿ ಚರಂಡಿಗೆ ಬಿದ್ದಿದ್ದಾರೆ. ಧಾರಾಕಾರ ಮಳೆಯಿಂದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಇದುವರೆಗೆ ಮೃತದೇಹ ಪತ್ತೆಯಾಗಿಲ್ಲ.
ಧಾರವಾಡದಲ್ಲಿ ಸುರಿದ ಮಳೆಗೆ ಬೆಣ್ಣಿಹಳ್ಳ ತುಂಬಿ ಹರಿಯುತ್ತಿದೆ. ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರ ಗ್ರಾಮದ ಬಳಿಯ ತೋಟದ ಮನೆಯಲ್ಲಿ ಕುಟುಂಬ ಸಿಲುಕಿಕೊಂಡಿದೆ. ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳಿರುವ ತೋಟದ ಮನೆಯು ಸಂಪೂರ್ಣ ಜಲಾವೃತವಾಗಿದೆ.