Wednesday, January 14, 2026
Menu

ನಿವೃತ್ತ ಉದ್ಯೋಗಿಗಳಿಗೆ ಬೆಳ್ಳಿ ಪದಕದ ಹೆಸರಲ್ಲಿ ತಾಮ್ರ ನೀಡಿದ ರೈಲ್ವೆ ಇಲಾಖೆ

ಪಶ್ಚಿಮ ಮಧ್ಯ ರೈಲ್ವೆ ವಲಯದಲ್ಲಿ ಹಲವು ದಶಕ ಕೆಲಸ ಮಾಡಿ ನಿವೃತ್ತರಾದ ನೌಕರರಿಗೆ ರೈಲ್ವೆ ಇಲಾಖೆಯು ವಿದಾಯದ ವೇಳೆ  ಚಿನ್ನಲೇಪಿತ  ಬೆಳ್ಳಿಯ ಪದಕವೆಂದು ಹೇಳಿ ಕೊಟ್ಟಿರುವುದು ತಾಮ್ರದ ಮೇಲೆ ಬೆಳ್ಳಿ ಲೇಪನ ಮಾಡಿದ ಪದಕವೆಂಬುದು ಬೆಳಕಿಗೆ ಬಂದಿದೆ.

ಈ ನಕಲಿ ಬೆಳ್ಳಿ ಪದಕಗಳನ್ನು 2023 ರಿಂದ 2025 ರ ನಡುವೆ ನಿವೃತ್ತರಾದ ನೌಕರರಿಗೆ ವಿತರಿಸಲಾಗಿದೆ. ಎರಡು ತಿಂಗಳ ಹಿಂದೆ ಹಗರಣ ಬೆಳಕಿಗೆ ಬಂದಿದ್ದು, ಕಳೆದ ಡಿಸೆಂಬರ್‌ನಲ್ಲಿ ದೂರುಗಳು ದಾಖಲಾಗಿವೆ. ಕಳೆದ ವಾರ ಅಂದರೆ ಜನವರಿ 9ರಂದು ಜಬಲ್ಪುರ ರೈಲ್ವೆ ಕೇಂದ್ರ ಕಚೇರಿಯು ಈ ಬಗ್ಗೆ ತೀವ್ರ ತನಿಖೆ ಆರಂಭಿಸಿದ್ದು, ವಿತರಿಸಲಾದ ಎಲ್ಲಾ ಪದಕಗಳನ್ನು ವಾಪಸ್ ಪಡೆಯಲು ಆದೇಶಿಸಿದೆ.

ರೈಲ್ವೆ ಇಲಾಖೆ ಬೆಳ್ಳಿ ಹೆಸರಿನಲ್ಲಿ ನಕಲಿ ಪದಕ ನೀಡುವ ಮೂಲಕ ನಿವೃತ್ತರ ಭಾವನೆಗೆ ಬಹಳಷ್ಟು ನೋವು ನೀಡಿದೆ. ನಿವೃತ್ತಿ ಹೊಂದುತ್ತಿರುವ ಸಿಬ್ಬಂದಿಯನ್ನು ಸನ್ಮಾನಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಇತ್ತೀಚೆಗೆ ಪಶ್ಚಿಮ ಮಧ್ಯ ರೈಲ್ವೆಯ ಜಬಲ್ಪುರ ವಿಭಾಗದಲ್ಲಿ ನಿವೃತ್ತ ನೌಕರರಿಗಾಗಿ ಇಲಾಖೆಯಿಂದ ಬೀಳ್ಕೊಡುಗೆ ಸಮಾರಂಭ ನಡೆದಿತ್ತು. ಸುದೀರ್ಘ ಕಾಲ ಕೆಲಸ ಮಾಡಿರುವ ನೌಕರರಿಗೆ ನೆನಪಿನ ಕಾಣಿಕೆಯಾಗಿ ಬೆಳ್ಳಿಯ ಪದಕಗಳನ್ನು ವಿತರಿಸಲಾಯಿತು. ಇಲಾಖೆಯ ದಾಖಲೆಗಳ ಪ್ರಕಾರ, ಪ್ರತಿಯೊಂದು ಪದಕವು ನಿರ್ದಿಷ್ಟ ತೂಕದ ಅಪ್ಪಟ ಬೆಳ್ಳಿಯಿಂದ ಕೂಡಿದ್ದು, ಸ್ವರ್ಣ ಲೇಪಿತ ಇರಲಿದೆ ಎಂದು   ಅದಕ್ಕಾಗಿ ರೈಲ್ವೆ ಬಜೆಟ್‌ನಿಂದ ದೊಡ್ಡ ಮೊತ್ತ ಮಂಜೂರು ಆಗಿತ್ತು.

ಪದಕ ಸ್ವೀಕರಿಸಿಸಂತಸಪಟ್ಟಿದ್ದ ನೌಕರರು, ಮನೆಗೆ ತೆರಳಿ ಪದಕವನ್ನು ಪರಿಶೀಲಿಸಿದಾಗ ಅನುಮಾನವಾಗಿದೆ. ಕೆಲವೇ ದಿನಗಳಲ್ಲಿ ಪದಕದ ಹೊಳಪು ಮಾಸಿದೆ. ಕೆಲವರು ಅಕ್ಕಸಾಲಿಗರ ಬಳಿ ಪದಕದ ಗುಣಮಟ್ಟ ಪರೀಕ್ಷಿಸಿದಾಗ ಅದು ಅಥವಾ ಬೇರೆ ಲೋಹದ ಮೇಲೆ ಬೆಳ್ಳಿಯ ಲೇಪನ ಮಾಡಿದ ಪದಕವಾಗಿತ್ತು ಎಂಬುದು ದೃಢಪಟ್ಟಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಪಶ್ಚಿಮ ಮಧ್ಯ ರೈಲ್ವೆ ಮಜ್ದೂರ್ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಮಾರುಕಟ್ಟೆಯಲ್ಲಿ ಇನ್ನೂರು-ಮುನ್ನೂರು ರೂಪಾಯಿ ಬೆಲೆಬಾಳುವ ಪದಕಗಳಿಗೆ, ಇಲಾಖೆಯ ಲೆಕ್ಕಪತ್ರದಲ್ಲಿ ಸಾವಿರಾರು ರೂಪಾಯಿ ಬಿಲ್ ತೋರಿಸಲಾಗಿದೆ. ಇದು ನಿವೃತ್ತ ನೌಕರರ ಸ್ವಾಭಿಮಾನಕ್ಕೆ ಮಾಡಿದ ಅವಮಾನ ಎಂದು ಹೇಳಿದೆ.

ಪ್ರಕರಣವು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ರೈಲ್ವೆ ಉನ್ನತ ಅಧಿಕಾರಿಗಳು ತನಿಖೆ ನಡೆಸಿ, ಜಬಲ್ಪುರ ವಿಭಾಗದ ಸಿಬ್ಬಂದಿ ಕಲ್ಯಾಣ ವಿಭಾಗದ ಕೆಲವು ಅಧಿಕಾರಿಗಳು ಹಾಗೂ ನೌಕರರನ್ನು ಅಮಾನತುಗೊಳಿಸಿದ್ದಾರೆ. ಈ ಹಿಂದೆ ನಡೆದ ಸಮಾರಂಭಗಳಲ್ಲೂ ನಕಲಿ ಪದಕಗಳನ್ನು ಹಂಚಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲು ವಿಚಕ್ಷಣಾ ದಳಕ್ಕೆ ಸೂಚಿಸಿದ್ದಾರೆ.

Related Posts

Leave a Reply

Your email address will not be published. Required fields are marked *