ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡ ಹಾಗೂ ಸಂಸದರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಹಾಗೂ ಶಿವಸೇನೆ ಮುಖಂಡರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಡಳಿತಾರೂಢ ಬಿಜೆಪಿ ಜೊತೆಗೂಡಿ ಕೇಂದ್ರ ಚುನಾವಣಾ ಆಯೋಗ ಚುನಾವಣಾ ಆಕ್ರಮ ನಡೆಸಿದೆ ಎಂದು ಆರೋಪಿಸಿ ಸೋಮವಾರ ಪ್ರತಿಭಟನೆ ನಡೆಸಿದ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಹಾಗೂ ಶಿವಸೇನೆ ಸೇರಿದತೆ ವಿವಿಧ ಪ್ರತಿಪಕ್ಷ ಮುಖಂಡರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂಸತ್ ಭವನದ ಮುಂದೆ ಭಾರೀ ಪ್ರಮಾಣದಲ್ಲಿ ಕಾಂಗ್ರೆಸ್ ಹಾಗೂ ಶಿವಸೇನಾ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿದ್ದರು. ಬ್ಯಾನರ್ ಹಿಡಿದು ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.
ಟಿಎಂಸಿ ಪಕ್ಷದ ಸಂಸದೆ ಮಿಥಾಲಿ ಭಾಗ್ ಕುಸಿದುಬಿದ್ದಿದ್ದು, ಕೂಡಲೇ ರಾಹುಲ್ ಗಾಂಧಿ ನೆರವಿಗೆ ಧಾವಿಸಿದರು. ಈ ವೇಳೆ ಹೈಡ್ರಾಮಾ ನಡೆಯಿತು.
ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಿದ ನಂತರ ಚುನಾವಣಾ ಆಯೋಗದ ಕಚೇರಿಗೆ ತೆರಳಿ ಮುತ್ತಿಗೆ ಹಾಕುವುದು ಪ್ರತಿಭಟನಾಕಾರರ ಉದ್ದೇಶವಾಗಿತ್ತು. ಆದರೆ ಪ್ರತಿಭಟನಾ ರ್ಯಾಲಿ ಆರಂಭಗೊಳ್ಳುತ್ತಿದ್ದಂತೆ ದೆಹಲಿ ಪೊಲೀಸರು ಕಾಂಗ್ರೆಸ್ ಮುಖಂಡರು ಹಾಗೂ ವಿವಿಧ ಪಕ್ಷಗಳ ಮುಖಂಡರನ್ನು ವಶಕ್ಕೆ ಪಡೆದರು.