ಭಾರತದ ಬ್ಯಾಟಿಂಗ್ ದಂತಕತೆ ರಾಹುಲ್ ದ್ರಾವಿಡ್ ಐಪಿಎಲ್ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಸ್ಥಾನ ತ್ಯಜಿಸಿ ಅಚ್ಚರಿ ಮೂಡಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಹಾಗೂ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ 2025ನೇ ಸಾಲಿನ ಐಪಿಎಲ್ ಟೂರ್ನಿ ವೇಳೆಗೆ ಮುಖ್ಯ ಕೋಚ್ ಆಗಿ ಮರಳಿದ್ದರು. ಆದರೆ ಇದೀಗ ತಂಡದಲ್ಲಿ ಮತ್ತಷ್ಟು ಜವಾಬ್ದಾರಿ ವಹಿಸಿಕೊಳ್ಳುವ ಪ್ರಸ್ತಾಪ ನಿರಾಕರಿಸಿ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ದ್ರಾವಿಡ್ ರಾಜೀನಾಮೆಯನ್ನು ದೃಢಪಡಿಸಿದೆ.
ರಾಜಸ್ಥಾನ್ ರಾಯಲ್ಸ್ ಪರ 46 ಪಂದ್ಯಗಳನ್ನು ಆಡಿರುವ ದ್ರಾವಿಡ್, 2024 ಸೆಪ್ಟೆಂಬರ್ 6ರಂದು ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಭಾರತ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಐಪಿಎಲ್ ಗೆ ಮರಳಿದ್ದ ದ್ರಾವಿಡ್ ರಾಜಸ್ಥಾನ್ ತಂಡ ಸೇರಿಕೊಂಡಿದ್ದರು.
2025ನೇ ಸಾಲಿನಲ್ಲಿ ರಾಜಸ್ಥಾನ್ ರಾಯಲ್ಸ್ ಕಳಪೆ ಸಾಧನೆ ಮಾಡಿದ್ದು, ಆಡಿದ 14 ಪಂದ್ಯಗಳಲ್ಲಿ ಕೇವಲ 4ರಲ್ಲಿ ಜಯ ಸಾಧಿಸಿತ್ತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ ನಂತರದ ಸ್ಥಾನ ಪಡೆದು ನಿರಾಸೆ ಮೂಡಿಸಿತ್ತು.
ಕಳೆದ ವರ್ಷ ನಿರಾಶಾದಾಯಕ ಪ್ರದರ್ಶನದ ಹೊರತಾಗಿಯೂ ರಾಹುಲ್ ದ್ರಾವಿಡ್ ಅವರಿಗೆ ಮುಖ್ಯ ಕೋಚ್ ಹುದ್ದೆ ಜೊತೆಗೆ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುವ ಪ್ರಸ್ತಾಪ ಇಟ್ಟಿದ್ದೆವು. ಆದರೆ ಅವರು ನಿರಾಕರಿಸಿದರು ಎಂದು ರಾಜಸ್ಥಾನ್ ರಾಯಲ್ಸ್ ಆಡಳಿತ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.