Menu

ಪಾಕಿಸ್ತಾನ ಜಿಂದಾಬಾದ್‌ ಎಂದಾಗಲೇ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಿತ್ತು: ಆರ್‌ ಅಶೋಕ

ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿದಾಗಲೇ ಕಾಂಗ್ರೆಸ್‌ ಸರ್ಕಾರ ಕಠಿಣ ಕ್ರಮ ವಹಿಸಿದ್ದರೆ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿಯ ಹತ್ಯೆ ಆಗುತ್ತಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿಯ ಕೊಲೆಯ ಮೂಲಕ ಮಂಗಳೂರಿನಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಮಂಗಳೂರು ಬಂದ್‌ ಮಾಡಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ 2013 ರಲ್ಲಿ ಅಧಿಕಾರದಲ್ಲಿದ್ದಾಗ 36 ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು. ಪಾಪ್ಯುಲರ್‌ ಫ್ರಂಟ್‌ ಮೊದಲಾದ ಸಂಘಟನೆಗಳು ಇಂತಹ ಕೃತ್ಯಗಳನ್ನು ಮಾಡಿವೆ. ಪಾಕಿಸ್ತಾನ ಜಿಂದಾಬಾದ್‌ ಎಂದಾಗಲೇ ಕಠಿಣ ಕ್ರಮ ಕೈಗೊಂಡಿದ್ದರೆ ಇಂತಹ ಕೃತ್ಯ ನಡೆಯುತ್ತಿರಲಿಲ್ಲ ಎಂದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಲಾಗುತ್ತದೆ. ಪಾಕಿಸ್ತಾನಕ್ಕೆ ಅಪಮಾನ ಮಾಡಲು ಧ್ವಜವನ್ನು ರಸ್ತೆಗೆ ಅಂಟಿಸಿದರೆ ಅದನ್ನು ಮಹಿಳೆಯರು ಎತ್ತಿಕೊಂಡು ಹೋಗುತ್ತಾರೆ. ಅಮಾಯಕ ಹಿಂದೂ ಕಾರ್ಯಕರ್ತರ ಬಳಿ ಯಾವುದೇ ಆಯುಧ ಇಲ್ಲವೆಂದು ತಿಳಿದು ದಾಳಿ ಮಾಡಲಾಗುತ್ತಿದೆ ಎಂದು ದೂರಿದರು.

ಸಿಎಂ ಸಿದ್ದರಾಮಯ್ಯ ಯುದ್ಧ ಬೇಡ ಎನ್ನುತ್ತಾರೆ. ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗುವ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಇಂತಹ ದೇಶದ್ರೋಹಿಗಳನ್ನು ಗುಂಡಿಕ್ಕುವ ಕಾನೂನು ಬಂದರೆ ಮಾತ್ರ ದೇಶ ಸುರಕ್ಷಿತವಾಗಿರುತ್ತದೆ. ಇನ್ನೆಷ್ಟು ಹಿಂದೂ ಕಾರ್ಯಕರ್ತರ ಬಲಿಯಾಗಲಿ ಎಂದು ಸಿಎಂ ಸಿದ್ದರಾಮಯ್ಯ ಬಯಸುತ್ತಾರೋ ಗೊತ್ತಿಲ್ಲ. ಲವ್‌ ಜಿಹಾದ್‌ ಆದಾಗ, ಪಾಕಿಸ್ತಾನ ಜಿಂದಾಬಾದ್‌ ಎಂದಾಗಲೇ ಕಠಿಣ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಲಿದ್ದೇವೆ ಎಂದು ಹೇಳಿದರು.

ಸುಹಾಸ್‌ ಎಲ್ಲೆಲ್ಲಿ ಓಡಾಡುತ್ತಾನೆ, ಆತನ ಬಳಿ ಆಯುಧ ಇಲ್ಲವೆಂದು ತಿಳಿದಿದ್ದು ಹೇಗೆ? ಈ ವಿಚಾರದಲ್ಲಿ ಪೊಲೀಸ್‌ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿರುವ ಅನುಮಾನವಿದೆ. ಇಂತಹ ಘಟನೆ ನಡೆದಾಗ ಸಿಎಂ ಸಿದ್ದರಾಮಯ್ಯ ಸಬೂಬು ಹೇಳುವ ನಡೆ ತೋರುತ್ತಾರೆ. ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ಪಾಕಿಸ್ತಾನ ಜಿಂದಾಬಾದ್‌ ಎಂದರೂ ಏನೂ ಅನ್ನಿಸುವುದಿಲ್ಲ. ಅವರದ್ದು ಅಂತಹ ಎಮ್ಮೆ ಚರ್ಮ ಎಂದು ಟೀಕಿಸಿದರು.

ಪೊಲೀಸ್‌ ಇಲಾಖೆ ಕಾಂಗ್ರೆಸ್‌ ಪಕ್ಷದ ಇಲಾಖೆಯಾಗಿದೆ. ಸಿಎಂ ಸಿದ್ದರಾಮಯ್ಯನವರೇ ಪೊಲೀಸರಿಗೆ ಹೊಡೆಯಲು ಮುಂದಾಗುತ್ತಾರೆ ಎಂದರು.

Related Posts

Leave a Reply

Your email address will not be published. Required fields are marked *