ಅಬಕಾರಿ ಇಲಾಖೆಯಲ್ಲಿ ಲೈಸೆನ್ಸ್ ಮಂಜೂರಾತಿಗೆ ಲಂಚ, ವರ್ಗಾವಣೆ ಮಾಡಿಸಲು ಲಂಚ ಪಡೆಯಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಆಡಿಯೋಗಳು ಬಿಡುಗಡೆಯಾಗಿ ಲೋಕಾಯುಕ್ತದಲ್ಲಿ ದೂರುಗಳು ದಾಖಲಾಗಿವೆ. ಆದ್ದರಿಂದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಅಬಕಾರಿ ಇಲಾಖೆಯು ಭ್ರಷ್ಟಾಚಾರದ ಅಪರಾಧಿ ನಂ.1 ಇಲಾಖೆಯಾಗಿದೆ. ಲೈಸೆನ್ಸ್‌ಗೆ ಲಂಚ, ವರ್ಗಾವಣೆಗೆ ಹಣ ಫಿಕ್ಸ್ ಹೀಗೆ ಮೊದಲಾದ ರೀತಿಯಲ್ಲಿ ಅಕ್ರಮ ನಡೆಯುತ್ತಿದೆ. ವಿಬಿ ಜಿ ರಾಮ್ ಜಿ ಯೋಜನೆಯನ್ನು ವಿರೋಧಿಸಿರುವ ಕಾಂಗ್ರೆಸ್ ನಾಯಕರು ಮಹಾತ್ಮ ಗಾಂಧೀಜಿಯ ಆದರ್ಶಗಳ ಬಗ್ಗೆ ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಗಾಂಧೀಜಿಯ ಆದರ್ಶ ಪಾಲಿಸುತ್ತಿಲ್ಲ. ಸರ್ಕಾರಿ ಅಧಿಕಾರಿಗಳ ಕಡೆಯಿಂದ ಮಾಡಿರುವ ವಾಟ್ಸಾಪ್ ಸಂದೇಶದಲ್ಲಿ, ಹುಬ್ಬಳ್ಳಿಯಲ್ಲಿ ವಸತಿ ಇಲಾಖೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿಎಂ ಹಾಗೂ ಡಿಸಿಎಂ ಭಾಗವಹಿಸುವುದರಿಂದ ಹೆಚ್ಚು ಜನರು ಬರುತ್ತಿದ್ದಾರೆ. ಆದ್ದರಿಂದ ಮದ್ಯದಂಗಡಿಗಳು ಸಾಕಷ್ಟು ಪ್ರಮಾಣದ ಮದ್ಯ ಸಂಗ್ರಹಿಸಿ ಇಟ್ಟುಕೊಂಡು ಮಾರಾಟ ಮಾಡಬೇಕೆಂದು ಅಧಿಕೃತವಾಗಿ ಸೂಚಿಸಲಾಗಿದೆ. ಇದು ಮನೆ ಹಾಳು ಮಾಡುವ ಕಾರ್ಯಕ್ರಮ. ಸಿಎಂ ಸಿದ್ದರಾಮಯ್ಯ ಸಂವೇದನೆಯ ಪಾಠ ಮಾಡುತ್ತಾರೆ. ಮದ್ಯ ಕುಡಿಯಿರಿ ಎಂದು ಹೇಳುವುದೇ ಇವರ ಸಂವೇದನೆ ಎಂದರು.
ಅಬಕಾರಿ ಇಲಾಖೆಯಲ್ಲಿ ನಡೆಯುವ ಹಗರಣದಲ್ಲಿ ಅಧಿಕಾರಿಗಳಿಂದ ಮಂತ್ಲಿ ಫೀಸ್ ಬರುವುದರಿಂದ ಸಚಿವರು ಸುಮ್ಮನಿದ್ದಾರೆ. ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ ಅಕ್ರಮದ ಕುರಿತು ರಾಹುಲ್ ಗಾಂಧಿಗೆ ದೂರು ನೀಡುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. “ಇಲಾಖೆಯಲ್ಲಿ ಪ್ರತಿ ವರ್ಷ ಟಾರ್ಗೆಟ್ ನೀಡಿ ಹಣ ಸಂಗ್ರಹಿಸಲಾಗುತ್ತದೆ, ಲೈಸೆನ್ಸ್‌ನಿಂದ ಆರಂಭವಾಗಿ ಎಲ್ಲ ಹಂತದಲ್ಲೂ ಕೈ ಬಿಸಿ ಮಾಡಬೇಕಿದೆ, ಲೈಸೆನ್ಸ್ ನೀಡುವಾಗ ಅಬಕಾರಿ ಡಿಸಿ ಲಂಚ ಪಡೆಯುವುದು ಪತ್ತೆಯಾಗಿದೆ. ಹಿರಿಯ ಅಧಿಕಾರಿಗಳಿಂದ ಕಿರಿಯವರೆಗೂ ಲಂಚ ಕೊಡಬೇಕಿದೆ. ಈ ಕುರಿತು ಮುಖ್ಯಮಂತ್ರಿಗೆ ದೂರು ನೀಡಲಾಗಿದೆ” ಎಂದು ಗುರುಸ್ವಾಮಿ ಹೇಳಿದ್ದಾರೆ. ಎರಡು ಸಾವಿರ ಲಿಕ್ಕರ್ ಶಾಪ್‌ಗಳಿಗೆ ಅವಕಾಶ ನೀಡಿದ್ದು, ಒಂದಕ್ಕೆ 50 ಲಕ್ಷ ರೂ. ಹಾಗೂ ಮತ್ತೊಂದಕ್ಕೆ 1 ಕೋಟಿ ರೂ. ಲಂಚ ಪಡೆಯಲಾಗಿದೆ, ಪ್ರತಿ ತಿಂಗಳ 10 ನೇ ದಿನಾಂಕ ಲಂಚ ನೀಡದಿದ್ದರೆ ಅಂಗಡಿ ಮಾಲೀಕರಿಗೆ ಕಿರುಕುಳ ನೀಡುತ್ತಾರೆ. ಗುರುಸ್ವಾಮಿ ಸಿಎಂ ಸಿದ್ದರಾಮಯ್ಯನವರ ವರುಣಾ ಕ್ಷೇತ್ರದವರೇ ಆಗಿದ್ದಾರೆ. ಗುರುಸ್ವಾಮಿ ದೂರು ನೀಡಿದ್ದರೂ ಸಿದ್ದರಾಮಯ್ಯ ಸಹಾಯ ಮಾಡಿಲ್ಲ. ಅವರು ಖಡಕ್ ಸಿಎಂ ಆಗಿ ಉಳಿದಿಲ್ಲ ಎಂದು ಗುರುಸ್ವಾಮಿ ಹೇಳಿದ್ದಾಗಿ ಅಶೋಕ ತಿಳಿಸಿದರು.
ಲಂಚ ವಸೂಲಿ ಆಡಿಯೋ
ಅಬಕಾರಿ ಇಲಾಖೆಯ ಹಗರಣ ಸಂಬಂಧ ಆಡಿಯೋ ಬಂದಿದೆ. ಇದರಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಅವರ ಮಗನ ಮೇಲೆ ಆರೋಪ ಬಂದಿದೆ. ಆದರೂ ನಾನವನಲ್ಲ ಎಂದು ಸಚಿವರು ಹೇಳುತ್ತಾರೆ. 2025 ಜೂನ್‌ವರೆಗೆ, ಸಿಎಲ್-7 ನಡಿ 3,267 ಹೋಟೆಲ್ ರೆಸ್ಟೋರೆಂಟ್, ಸಿಎಲ್-2 ನಡಿ 4342 ಎಂಆರ್‌ಪಿಗಳು, ಸಿಎಲ್-9 ನಡಿ 3667 ಬಾರ್‌ಗಳು, ಸಿಎಲ್ 11ಸಿ ನಡಿ 1088, ಸಿಎಲ್-4 316 ಕ್ಲಬ್‌ಗಳು, ಸಿಎಲ್ 6 ನಡಿ 86 ಸ್ಟಾರ್ ಹೋಟೆಲ್‌ಗಳಿವೆ. ಒಟ್ಟು 14,229 ಮದ್ಯ ಪೂರೈಸುವ ಸಂಸ್ಥೆಗಳಿವೆ. ಆದರೆ ರಾಜ್ಯದಲ್ಲಿ ಇಷ್ಟು ಸಂಖ್ಯೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ. ಪ್ರತಿ ತಿಂಗಳು ಒಂದು ಅಂಗಡಿಯಿಂದ 15-20 ಸಾವಿರ ರೂ. ಲಂಚ ವಸೂಲಿ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ತಿಂಗಳಿಗೆ ಸರಾಸರಿ 21 ಕೋಟಿ ರೂ. ಆಗುತ್ತದೆ ಹಾಗೂ ವರ್ಷಕ್ಕೆ 252 ಕೋಟಿ ರೂ. ಆಗುತ್ತದೆ.
ಬೇಡಿಕೆ ಇಡುತ್ತಿರುವ ಮಾತುಕತೆ ಆಡಿಯೋ
ಜಂಟಿ ಆಯುಕ್ತ ನಾಗರಾಜಪ್ಪ ಹಾಗೂ ವಕೀಲ ರಮೇಶ್ ಎಂಬುವರ ನಡುವೆ ಸಂಭಾಷಣೆ ನಡೆದಿದ್ದು, ಅದರಲ್ಲಿ 18 ಲಕ್ಷ ರೂ.ಗೆ ಬೇಡಿಕೆ ಇಡುತ್ತಿರುವ ಮಾತುಕತೆ ಇದೆ. ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಮಗ ವಿನಯ್ ಅವರಿಗೆ ಲಂಚ ಪಾವತಿ ಯಾಗಲಿದೆ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಶೇ.50 ರಷ್ಟು ಕಡಿಮೆ ಮಾಡಲು ಸಚಿವರ ಬಳಿಯೇ ಮಾತನಾಡಬೇಕು ಎಂದು ಹೇಳಲಾಗುತ್ತದೆ. ಬಳಿಕ ರಮೇಶ್ ಮುಖ್ಯಮಂತ್ರಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ನಗರ ಪ್ರದೇಶವಾದರೆ 15 ಲಕ್ಷ ರೂ. ಹಾಗೂ ಗ್ರಾಮೀಣವಾದರೆ 10 ಲಕ್ಷ ರೂ. ನೀಡಬೇಕೆಂದು ಅಧಿಕಾರಿ ಹೇಳಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಅಬಕಾರಿ ವರ್ಗಾವಣೆಗೆ ಹಣ ನಿಗದಿ ಮಾಡಲಾಗಿದೆ. ಉಪ ಆಯುಕ್ತರಿಗೆ 2.5 ರಿಂದ 3.5 ಕೋಟಿ ರೂ., ಅಧೀಕ್ಷಕರಿಗೆ 25-30 ಲಕ್ಷ ರೂ. ಉಪ ಅಧೀಕ್ಷಕರಿಗೆ 30-40 ಲಕ್ಷ ರೂ., ಅಬಕಾರಿ ವೀಕ್ಷಕರಿಗೆ 40-50 ಲಕ್ಷ ರೂ., ಪೇದೆಗಳಿಗೆ 5-8 ಲಕ್ಷ ರೂ., ನೀಡಬೇಕಾಗುತ್ತದೆ. ಇದರಲ್ಲಿ ಪೇದೆಗಳೇ ನಾಲ್ಕೈದು ಬಾರ್‌ಗಳನ್ನು ನಡೆಸುತ್ತಿರುತ್ತಾರೆ ಎಂದು ದೂರಿದರು.
ಬಳಿಕ ಮಂಜು ಅವರು ಈ ಕುರಿತು ದೂರು ನೀಡಿದ್ದಾರೆ. ಆದರೆ ಅಧಿಕಾರಿ ನಾಗರಾಜಪ್ಪ ಇದನ್ನು ಅಲ್ಲಗಳೆದು ಕೃತಕವಾಗಿ ಧ್ವನಿ ಸೃಷ್ಟಿಸಿದ್ದಾರೆ, ಆದ್ದರಿಂದ ಪ್ರಕರಣ ಕೈ ಬಿಡಿ ಎಂದು ಕೋರಿದ್ದಾರೆ. ಆಗ ಇಲಾಖೆಯಿಂದ ತನಿಖೆ ಮಾಡಿಲ್ಲ. ಇಷ್ಟೆಲ್ಲ ದಾಖಲೆ ಇದ್ದಾಗಲೂ ಹಗರಣದ ವಿರುದ್ಧ ತನಿಖೆ ಮಾಡಲೇ ಇಲ್ಲ. ಆಡಿಯೋವನ್ನು ಫೊರೆನ್ಸಿಕ್‌ಗೆ ಕಳುಹಿಸಿ ಅದರ ನಿಜಾಂಶವನ್ನು ಪತ್ತೆ ಮಾಡಬೇಕಿತ್ತು. ಇಲ್ಲಿ ಅಧಿಕಾರಿಯನ್ನು ರಕ್ಷಿಸಲಾಗಿದೆ. ಮತ್ತೊಂದು ಆಡಿಯೊದಲ್ಲಿ ಜೆಡಿಎಸ್ ಬೆಂಬಲಿಗನಾಗಿರುವುದರಿಂದ ಹೆಚ್ಚು ಲಂಚ ಕೊಡಬೇಕೆಂದು ಹೇಳಲಾಗಿದೆ ಎಂದು ವಿವರಿಸಿದರು.
ಮತ್ತೊಬ್ಬ ಹಿರಿಯ ಅಧಿಕಾರಿ ಡಿಸಿ ನಾಗಶಯನ ಲಂಚ ಪಡೆಯುವ ಬಗ್ಗೆ ಆಡಿಯೋದಲ್ಲಿದೆ. ನೀನು ಜೆಡಿಎಸ್ ಕಾರ್ಯಕರ್ತನೇ ಎಂದು ಅಧಿಕಾರಿ ಪ್ರಶ್ನೆ ಮಾಡುತ್ತಾನೆ. ಜೆಡಿಎಸ್ ಕಾರ್ಯಕರ್ತ ಅಲ್ಲದಿದ್ದರೆ ಲಂಚ ಕಡಿಮೆಯಾಗುತ್ತದೆ. ನೀವು ಒಕ್ಕಲಿಗರಾ, ನಿಮ್ಮೂರಿನಲ್ಲಿ ಯಾರೂ ಕುರುಬರು ಇಲ್ಲವೇ? ಕುರುಬ ಮುಖಂಡರನ್ನು ಕರೆದುಕೊಂಡು ಮುಖ್ಯಮಂತ್ರಿಯವರ ಮನೆಯವರಿಗೆ ಫೋನ್ ಮಾಡಿಸಿ, ಒಕ್ಕಲಿಗ ಮುಖಂಡರನ್ನು ಕರೆದುಕೊಂಡು ಸಚಿವ ಚಲುವರಾಯ ಸ್ವಾಮಿ ಬಳಿಗೆ ಹೋಗಿ ಒಂದು ಮಾತು ಹೇಳಿಸಿ ಎಂದು ಸಲಹೆ ನೀಡುತ್ತಾನೆ. ಇಂತಹ ಘಟನೆಗಳು ನಡೆಯುವುದರಿಂದಲೇ ಸರ್ಕಾರ ಸರ್ಕಸ್ ಆಗಿದೆ ಎಂದರು.
ವೈನ್ ಮರ್ಚೆಂಟ್ ಸಂಘದವರು ಮತ್ತೊಂದು ಆರೋಪ ಮಾಡಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಲಂಚ ಮಿತಿಮೀರಿದೆ. ನಕಲಿ ಮದ್ಯ ಹೆಚ್ಚಳವಾಗಿದ್ದು, ಅದನ್ನು ನಿಯಂತ್ರಣ ಮಾಡುತ್ತಿಲ್ಲ. ಪರಿಣಾಮ ಆದಾಯ ಕಡಿಮೆಯಾಗಿದೆ ಎಂದು ದೂರು ನೀಡಿ ದ್ದಾರೆ. ಆದರೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಹೆಚ್ಚು ಹಣ ಕೊಟ್ಟರೆ ಆಯಕಟ್ಟಿನ ಹುದ್ದೆ ದೊರೆಯುತ್ತದೆ. ನಿಂಗಪ್ಪ ಎಂಬ ಅಧಿಕಾರಿ ಲೋಕಾಯುಕ್ತದಲ್ಲಿ ಸ್ವ ಇಚ್ಛಾ ಹೇಳಿಕೆ ನೀಡಿದ್ದು, ವರ್ಗಾವಣೆ ಸಂಬಂಧ ಸಚಿವರನ್ನು ಮಡಿವಾಳದ ಹೋಟೆಲ್‌ನಲ್ಲಿ ಭೇಟಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇವೆಲ್ಲ ಆಡಿಯೊ ದಾಖಲೆಗಳನ್ನು ಮೂರು ಪೆನ್‌ಡ್ರೈವ್‌ಗಳನ್ನು ನೀಡಿದ್ದೇನೆ ಎಂದು ಹೇಳಿದರು.
ಸಿಎಲ್-7 ಲೈಸೆನ್ಸ್‌ಗೆ ಅಬಕಾರಿ ಡಿಸಿ ಜಗದೀಶ್ ನಾಯಕ್ ಒಂದೂವರೆ ಕೋಟಿ ರೂ. ಲಂಚ ಕೇಳಿದ್ದ. ಆತನ ಆಡಿಯೋದಲ್ಲಿ, ಮ್ರೈಕ್ರೋ ಬ್ರಿವರಿಗೆ 1.5 ಕೋಟಿ ರೂ. ಕೊಡಬೇಕು. ಅದರಲ್ಲಿ 25 ಲಕ್ಷ ರೂ. ಕಡಿಮೆ ಮಾಡಬಹುದು. ಇನ್ಸ್‌ಪೆಕ್ಟರ್, ಉಪ ಆಯುಕ್ತ, ಹೆಚ್ಚುವರಿ ಆಯುಕ್ತ ಹಾಗೂ ಸಚಿವರವರೆಗೂ ಈ ಹಣ ತಲುಪುತ್ತದೆ. ವಿಟಮಿನ್ ಎಂ ಕೊಟ್ಟರೆ ಸರಿ, ಇಲ್ಲವೆಂದರೆ ಓಡಾಡಿಸುತ್ತಾರೆ, ನಮ್ಮ ಬಳಿ 28 ಮಾಹಿತಿ ಕೇಳುತ್ತಾರೆ. ಲಂಚ ಕೊಡಲಿಲ್ಲವೆಂದರೆ ಗುಮ್ಮ ಬೀಳಿಸುತ್ತಾರೆ ಎಂದು ಹೇಳಿದ್ದಾರೆ. ಈ ಸಂಬಂಧ ಲಕ್ಷ್ಮಿನಾರಾಯಣ ಎಂಬುವರು ಲೋಕಾಯುಕ್ತದಲ್ಲಿ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ ಎಂದರು.
ಇಷ್ಟೆಲ್ಲ ದಾಖಲೆಗಳಿದ್ದರೂ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಏನೂ ಅನ್ನಿಸಿಲ್ಲ. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ನಾಗೇಶ್ ಅವರ ಮೇಲೆ ವರ್ಗಾವಣೆ ಲಂಚದ ಆರೋಪ ಬಂದಿತ್ತು. ಅವರು ರಾಜೀನಾಮೆ ನೀಡಿದ್ದರು. ಕೆ.ಎಸ್.ಈಶ್ವರಪ್ಪ ಮೇಲೆ ಆರೋಪ ಬಂದಾಗಲೂ ರಾಜೀನಾಮೆ ಪಡೆಯಲಾಗಿತ್ತು. ಆದರೆ ಈಗ ಇಷ್ಟೆಲ್ಲ ಲಂಚಾವತಾರ ಬಹಿರಂಗವಾಗಿದ್ದರೂ ಸಚಿವ ತಿಮ್ಮಾಪುರ ಅವರ ರಾಜೀನಾಮೆ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


