ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಲು ಲೋಕಾಯುಕ್ತ ಮುಂದಾಗಿದೆ. ಪೂರ್ವ ನಿಯೋಜಿತವಾಗಿ ತನಿಖಾ ವರದಿ ರೂಪಿಸಲಾಗಿದೆ. ಆದರೆ ಬಿಜೆಪಿಯಿಂದ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಾಗೂ ಕುಟುಂಬದವರು ನಡೆಸಿದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಮಾಡಿದೆ. ಜೊತೆಗೆ ಅಧಿವೇಶನದಲ್ಲಿ ಚರ್ಚಿಸಲಾಗಿದೆ. ಈ ಹಗರಣದಲ್ಲಿ ತಪ್ಪಿಲ್ಲ ಎಂದಾದರೆ ಸಿಎಂ ಸಿದ್ದರಾಮಯ್ಯ ನಿವೇಶನಗಳನ್ನು ಯಾಕೆ ಮರ ಳಿಸಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.
ಲೋಕಾಯುಕ್ತ, ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಲಿದೆ. ಇದರಲ್ಲಿ ಯಾರದ್ದೂ ತಪ್ಪಿಲ್ಲ, ಸ್ವಯಂಚಾಲಿತವಾಗಿ ಭೂ ಪರಿವರ್ತನೆಯಾಗಿದೆ. ಲೇಔಟ್ ಮಾಡಿರುವುದೇ ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ. ಇದರಲ್ಲಿ ಅಧಿಕಾರಿಗಳದ್ದೇ ತಪ್ಪು ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಲಿದೆ. ಈ ಪ್ರಕರಣ ದಾಖಲಾಗುವ ಮುನ್ನವೇ ಲೋಕಾಯುಕ್ತದಲ್ಲಿ ಆಯಕಟ್ಟಿನ ಜಾಗಕ್ಕೆ ನಿರ್ದಿಷ್ಟ ಅಧಿಕಾರಿಗಳು ಬಂದು ಕೂತಿದ್ದಾರೆ. ಇದು ಪೂರ್ವ ನಿಯೋಜಿತವಾಗಿ ತಯಾರಿಸಿದ ವರದಿ ಎಂದು ದೂರಿದರು.
ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟಾಕ್ಷಣ ಅದನ್ನು ಕೋರ್ಟ್ ಸ್ವೀಕರಿಸಬೇಕೆಂದೇನಿಲ್ಲ. ಕೋರ್ಟ್ ಅದನ್ನು ತಿರಸ್ಕರಿಸಿದರೆ ಮತ್ತೆ ತನಿಖೆ ನಡೆಯಲಿದೆ. ನಮಗೆ ನ್ಯಾಯಾಂಗದ ಬಗ್ಗೆ ವಿಶ್ವಾಸವಿದೆ. ಕಾಂಗ್ರೆಸ್ ಸರ್ಕಾರದ ಬಳಿ ಗ್ಯಾರಂಟಿಗೆ ಹಣವಿಲ್ಲ ಎಂದ ಮೇಲೆ ಮತ್ತೆ ಅಭಿವೃದ್ಧಿಗೆ ಎಲ್ಲಿಂದ ಹಣ ಬರಲಿದೆ, ಈ ಬಗ್ಗೆ ಕಾಂಗ್ರೆಸ್ ಶಾಸಕರು ಪ್ರಶ್ನೆ ಮಾಡಿದರೆ ಅವರನ್ನು ಯಾವುದಾದರೂ ಸಮಿತಿ, ನಿಗಮಕ್ಕೆ ಅಧ್ಯಕ್ಷರನ್ನಾಗಿ ಮಾಡಿ ಸುಮ್ಮನಾಗಿಸಲಾಗುತ್ತದೆ. ಇದೇ ಸಿಎಂ ಸಿದ್ದರಾಮಯ್ಯನವರ ಬಳಿ ಇರುವ ಅಸ್ತ್ರ ಎಂದರು.
ಸಿಎಂ ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿ ಎಂದು ನೂರಾರು ಬಾರಿ ಹೇಳಿದ್ದಾರೆ. ಅದೇ ರೀತಿ ಜಾತಿ ವರದಿ ಬಿಡುಗಡೆ ಬಗ್ಗೆಯೂ ಹೇಳಿದ್ದಾರೆ. ವೀರಪ್ಪ ಮೊಯ್ಲಿ ಸುಳ್ಳಿನ ಸರದಾರರಾದರೆ, ಸಿಎಂ ಸಿದ್ದರಾಮಯ್ಯ ಅವರ ತಾತನಂತೆ ಸುಳ್ಳು ಹೇಳುತ್ತಾರೆ ಎಂದು ದೂರಿದರು.
ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಎರಡು ತಿಂಗಳಿಗೊಮ್ಮೆ ಸಂಬಳ ನೀಡಲಾಗುತ್ತಿದೆ. ಸ್ಕಾಲರ್ ಶಿಪ್ ಸಿಕ್ಕಿಲ್ಲವೆಂದು ವಿದ್ಯಾರ್ಥಿಗಳು ಕೋರ್ಟ್ ಮೊರೆ ಹೋಗಿದ್ದಾರೆ. ಪ್ರತಿ ತಿಂಗಳು ಗ್ಯಾರಂಟಿ ಹಣ ಕೊಡಲು ಕೂಡ ಹಣವಿಲ್ಲ. ಬಜೆಟ್ ಗೂ ಹಣ ಇರುವುದಿಲ್ಲ. ಅಂಗನವಾಡಿ ಕಾರ್ಯಕರ್ತರಿಗೆ ಗೌರವಧನ ಹೆಚ್ಚಳ ಮಾಡಿಲ್ಲ. ಕೇಂದ್ರ ಸರ್ಕಾರ ಅಕ್ಕಿ ಕೊಡಲು ಸಿದ್ಧವಾಗಿದ್ದರೂ ಪಡೆಯಲು ಸರ್ಕಾರ ತಯಾರಿಲ್ಲ. ಸರ್ಕಾರ ದಿವಾಳಿಯಾಗಿರುವುದಕ್ಕೆ ಇದಕ್ಕಿಂತ ಹೆಚ್ಚು ಸಾಕ್ಷಿ ಬೇಡ ಎಂದರು.