ಕರಾವಳಿ ಭಾಗದಲ್ಲಿ ಹಲವಾರು ಸಮಸ್ಯೆಗಳಿವೆ. ಬೇರೆ ಪ್ರದೇಶಗಳಂತೆ ಅಲ್ಲಿ ರಸ್ತೆಗಳು ಬಹುಕಾಲ ಉಳಿಯುವುದಿಲ್ಲ. ಅಲ್ಲಿ ಬೇರೆ ತರಹದ ಆರೋಗ್ಯ ಸಮಸ್ಯೆಗಳಿವೆ. ಮಂಗಳೂರಿಂದ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದೆ. ಆದ್ದರಿಂದ ಕಲ್ಯಾಣ ಕರ್ನಾಟಕಕ್ಕೆ ನೀಡಿದಂತೆ ಕರಾವಳಿ ಭಾಗಕ್ಕೆ ಪ್ರತ್ಯೇಕ ಅಭಿವೃದ್ಧಿ ನೀತಿಯನ್ನು ತರಬೇಕಿದೆ. ಇರುವ ಅನುದಾನದಲ್ಲೇ ಈ ನೀತಿಯನ್ನು ತರಬಹುದು. ಸ್ಪೀಕರ್ ಯು.ಟಿ.ಖಾದರ್ ಕೂಡ ಅದೇ ಭಾಗದವರಾಗಿದ್ದು, ಅವರು ಕೂಡ ಈ ಬಗ್ಗೆ ಸಲಹೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಮೀಸಲು ಅರಣ್ಯ ಸಂರಕ್ಷಿಸುವ ಅಗತ್ಯವನ್ನು ಸರ್ಕಾರದ ಗಮನಕ್ಕೆ ತಂದರು. ಮೀಸಲು ಅರಣ್ಯವನ್ನು ಯಾರಿಗೂ ನೀಡಲು ಆಗುವುದಿಲ್ಲ. ವಾಯುಪಡೆಗೆ ಸ್ವಾಧೀನ ಮಾಡಲು ಬೇಕಾದಷ್ಟು ಜಮೀನು ಲಭ್ಯವಿದೆ. ಅರಣ್ಯ ಇಲಾಖೆ ತಮ್ಮ ಜಮೀನನ್ನು ಬಿಟ್ಟು ಕೊಡಬಾರದು. ಅರಣ್ಯ ಇಲಾಖೆಯ ಜಮೀನು ಯಾರಾದರೂ ಕೇಳಿದರೆ ಅದು ಕೇಂದ್ರ ಪರಿಸರ ಸಚಿವಾಲಯದ ಬಳಿ ಹೋಗಬೇಕಾಗುತ್ತದೆ. ಆದರೂ ಅರಣ್ಯ ಜಮೀನನ್ನು ನೀಡಲು ಸಾಧ್ಯವಾಗುವುದಿಲ್ಲ. ಸಾವಿರಾರು ಎಕರೆ ಅರಣ್ಯ ಭೂಮಿ ಇನ್ನೂ ವಾಯುಪಡೆಯ ಬಳಿಯೇ ಇದೆ. ಬೆಂಗಳೂರಿನಲ್ಲಿ ರಕ್ಷಣಾ ಸಚಿವಾಲಯದ ಜಮೀನಿನ ಸಮೀಪ ಒಂದು ರಸ್ತೆ ನಿರ್ಮಿಸಲು ಪರದಾಡಬೇಕಾಗುತ್ತದೆ. ಅವರ ಭೂಮಿಯಲ್ಲಿ ಒಂದು ಅಡಿ ಜಾಗವನ್ನು ಕೂಡ ಪಡೆಯಲು ಸಾಧ್ಯವಿಲ್ಲ. ಆದರೆ ನಮ್ಮ ಭೂಮಿಯನ್ನು ಪಡೆಯಲು ಅಂಗಲಾಚಬೇಕಾಗುತ್ತದೆ. ಸಾರ್ವಜನಿಕ ಬಳಕೆಗಾಗಿ ಭೂಮಿ ಬಳಸಿಕೊಳ್ಳಲು ರಕ್ಷಣಾ ಸಚಿವಾಲಯ ಅವಕಾಶ ನೀಡುವುದೇ ಇಲ್ಲ. ಆದ್ದರಿಂದ ಅರಣ್ಯ ಇಲಾಖೆಗೆ ಸೇರಿದ ಜಮೀನುಗಳನ್ನು ವಾಪಸ್ ಪಡೆಯಬೇಕು. ಈ ಹಿಂದೆ ಮುನಿರೆಡ್ಡಿ ಪಾಳ್ಯದಲ್ಲಿದ್ದ 60 ವರ್ಷ ಹಳೆಯ ಸರ್ಕಾರಿ ಶಾಲೆಯ ಜಾಗವನ್ನು ರಕ್ಷಣಾ ಸಚಿವಾಲಯದ ಯೋಧರು ಗನ್ ಹಿಡಿದುಕೊಂಡು ಬಂದು ವಶಪಡಿಸಿಕೊಂಡಿದ್ದರು. ನಂತರ ಅಲ್ಲಿ ಶಾಲೆ ನಿರ್ನಾಮವಾಗಿದೆ. ಆದ್ದರಿಂದ ಅರಣ್ಯ ಭೂಮಿಯನ್ನು ಅರಣ್ಯವಾಗಿಯೇ ಉಳಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಜಾಲಹಳ್ಳಿ ಸರ್ಕಲ್‌ನಲ್ಲಿ 452 ಎಕರೆ ಮೀಸಲು ಅರಣ್ಯವಿದೆ. ರಾಮಕೃಷ್ಣ ಹೆಗಡೆ ಸರ್ಕಾರ ಅದನ್ನು ಕಂದಾಯ ಇಲಾಖೆಯ ಜಾಗವಾಗಿ ಗುರುತಿಸಿ ಅದನ್ನು ವಾಯಪಡೆಗೆ ನೀಡಿತ್ತು. ನಾನು ಈ ಬಗ್ಗೆ ಅಧಿಕಾರಿಗಳ ಬಳಿ ವಿಚಾರಿಸಿದ್ದೆ. ಈಗ ಅರಣ್ಯ ಪ್ರದೇಶಗಳನ್ನು ನಾವು ಉಳಿಸಬೇಕಿದೆ. ಅರಣ್ಯ ಪ್ರದೇಶದಲ್ಲಿ ಬೇರೆ ಯಾವುದೇ ಯೋಜನೆಗಳನ್ನು ರೂಪಿಸಲು ಆಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶಗಳು ಕೂಡ ಇದೆ. ಆದರೆ ವಾಯಪಡೆ ಅಧಿಕಾರಿಗಳು ಈ ಜಾಗದ ಸುತ್ತಮುತ್ತ ಯಾವುದೇ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಬಿಡುತ್ತಿಲ್ಲ. ಯಾವುದೇ ರಸ್ತೆ, ಅಂಡರ್‌ಪಾಸ್ ಮಾಡಲು ಅವಕಾಶ ಕೊಡುವುದಿಲ್ಲ. ಈ ಜಮೀನನ್ನು ಯಾವುದೇ ಕಾರಣಕ್ಕೂ ಪರಭಾರೆ ಮಾಡಬಾರದು. ಇಲ್ಲಿ ಈಗ ಕೆಲವು ಅಭಿವೃದ್ಧಿ ಕಾರ್ಯಗಳು ವಾಯುಪಡೆಯಿಂದ ನಡೆಯುತ್ತಿವೆ. ಆದರೆ ಜನರು ಜಾಲಹಳ್ಳಿ ಸರ್ಕಲ್‌ನಲ್ಲಿ ಓಡಾಡಲು ಕೂಡ ಸಾಧ್ಯವಿಲ್ಲದಂತಾಗಿದೆ. ವಾಯುಪಡೆಯವರು ಅನಧಿಕೃತವಾಗಿ ಇಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಈ ಒತ್ತುವರಿಯನ್ನು ಯಾವಾಗ ತೆರವು ಮಾಡಲಾಗುವುದೆಂದು ಸರ್ಕಾರ ತಿಳಿಸಬೇಕು ಎಂದು ಆಗ್ರಹಿಸಿದರು.
ಶ್ರೀಗಂಧ ಬೆಳೆಯಲು ಸರ್ಕಾರ ಪ್ರೋತ್ಸಾಹ ನೀಡಬೇಕು. ಹರಾಜು ಸಮಯದಲ್ಲಿ ತಮಿಳುನಾಡಿನಲ್ಲಿ ಶ್ರೀಗಂಧ ಬೆಳೆಯುವವರಿಗೆ 22,000 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಆದರೆ ಶ್ರೀಗಂಧದ ನಾಡಾದ ಕರ್ನಾಟಕದಲ್ಲಿ 7,000 ರೂ. ನೀಡಲಾಗುತ್ತಿದೆ. ಆದ್ದರಿಂದ ರಾಜ್ಯದಲ್ಲೂ ಅಧಿಕ ಪ್ರೋತ್ಸಾಹಧನ ನೀಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಬಜೆಟ್ ಮೂಲಕ ಜನರನ್ನು ಸಾಲದ ಕೂಪಕ್ಕೆ ತಳ್ಳಿರುವುದನ್ನು ವಿಧಾನಸಭಾ ಅಧಿವೇಶನದಲ್ಲಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಹಾಗೆಯೇ ಅನೇಕ ಸಮಸ್ಯೆಗಳನ್ನು ತಾರ್ಕಿಕ ಅಂತ್ಯಕ್ಕೆ ಒಯ್ದು ಸರ್ಕಾರದಿಂದ ಕ್ರಮ ಕೈಗೊಳ್ಳುವಂತೆ ಮಾಡಿದ್ದೇವೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದರು.
ಅಧಿವೇಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಅಧಿವೇಶನದಲ್ಲಿ ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಿದ್ದೇವೆ. ಇ ಖಾತಾ ವ್ಯವಸ್ಥೆಯಲ್ಲಿ ಫೋನ್ ಪೇ ಮೂಲಕ ಲಂಚ ಪಡೆಯುವುದನ್ನು ಬಹಿರಂಗಪಡಿಸಿದ್ದು, ಆ ಅಧಿಕಾರಿಯ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ. ಬೆಂಗಳೂರಿನ ಅಭಿವೃದ್ಧಿ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಸಾಲದ ಕೂಪ ಸೃಷ್ಟಿಸಿರುವುದರ ಬಗ್ಗೆ ಎಳೆಎಳೆಯಾಗಿ ತಿಳಿಸಿದ್ದೇವೆ. ಸರ್ಕಾರ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವಂತೆ ಮಾಡಿದ್ದೇವೆ. ಮುಂದಿನ ವರ್ಷವೂ ಈ ಸರ್ಕಾರ ಸಾಲ ಮಾಡಲಿದೆ. ಕಾಂಗ್ರೆಸ್‌ನವರು ಸಾಲ ಮಾಡುವುದರಲ್ಲಿ ನಿಸ್ಸೀಮರು ಹಾಗೂ ಅಭಿವೃದ್ಧಿಯಲ್ಲಿ ಶೂನ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.
ಜಕ್ಕೂರಿನ ವಾಯುಯಾನ ತರಬೇತಿ ಶಾಲೆಯನ್ನು ಉಳಿಸಿಕೊಳ್ಳಲು ಈ ಸದನದಲ್ಲಿ ಹೋರಾಟ ಮಾಡಿದ್ದೇವೆ. ಇದರ ಪರಿಣಾಮವಾಗಿ ಭೂಮಿ ಉಳಿದಿದೆ. ಟಿ.ನರಸೀಪುರದ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಯನ್ನು ಕೂಡ ಉಳಿಸಿದ್ದೇವೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದೇವೆ ಎಂದು ಹೇಳಿದರು.
ಈ ತಿಂಗಳ ಅಂತ್ಯದಲ್ಲಿ ಹಾಗೂ ಏಪ್ರಿಲ್‌ನಲ್ಲಿ ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿದ್ದೇನೆ. ಈ ಚುನಾವಣೆಯನ್ನು ಗೆಲ್ಲಲು ಬಿಜೆಪಿಯ ತಂಡ ಒಂದಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.


