Menu

ಅಂಬೇಡ್ಕರ್ ಸೋಲಿಗೆ ತಂತ್ರಗಾರಿಕೆ ಹೆಣೆದಿದ್ದು ಕಾಂಗ್ರೆಸ್ ಎಂದ ಆರ್‌. ಅಶೋಕ್‌

ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿರುದ್ಧ ಅಭ್ಯರ್ಥಿ ಹಾಕಿದ್ದು ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಅವರ ಸೋಲಿಗೆ ಎಲ್ಲ ಬಗೆಯ ತಂತ್ರಗಾರಿಕೆಯನ್ನು ಹೆಣೆದಿದ್ದು ಕಾಂಗ್ರೆಸ್ ಪಕ್ಷ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನ ಸೋಲಿಸಲು ನಾರಾಯಣ ಸದೋಬಾ ಕರ್ಜೋಲ್ಕರ್ ಗೆ ಸಂಪನ್ಮೂಲ ಒದಗಿಸಿದ್ದು ಕೂಡ ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಅವರನ್ನು ಸೋಲಿಸಿದ್ದಕಾಗಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಬಹುಮಾನ ಕೊಟ್ಟಿದ್ದೂ ಕಾಂಗ್ರೆಸ್ ಪಕ್ಷ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ  ಮಹದೇವಪ್ಪ ಅವರನ್ನು ಉದ್ದೇಶಿಸಿ  ಮಾಡಿರುವ ಪೋಸ್ಟ್‌ನಲ್ಲಿ  ಕಿಡಿಕಾರಿರುವ ಅಶೋಕ್‌, ಬಾಬಾಸಾಹೇಬರ ಸೋಲಿಗೆ ಇಷ್ಟೆಲ್ಲಾ ಕುತಂತ್ರ, ಹುನ್ನಾರ ಮಾಡಿ, ಅವರಿಗೆ ಭಾರತ ರತ್ನವನ್ನು ನಿರಾ ಕರಣೆ ಮಾಡಿದ ಕಾಂಗ್ರೆಸ್ ಪಕ್ಷ ಇಂದು ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಲು ವೀರ ಸಾವರ್ಕರ್ ಸಂಚು ಮಾಡಿದ್ದರು ಎಂದು ಹೇಳುವುದು ನಾಚಿಕೆಗೇಡಿನ ಪರಮಾವಧಿ ಎಂದು ಬರೆದುಕೊಂಡಿ ದ್ದಾರೆ.

ಅಂಬೇಡ್ಕರ್ ಅವರ ಸಮಗ್ರ ಜೀವನ ಚರಿತ್ರೆಯಲ್ಲಿಯೂ, 1974ರಲ್ಲಿ ಸ್ವತಃ ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷ ಪ್ರಕಟಿಸಿದ ಪುಸ್ತಕದಲ್ಲಿಯೂ, ಕರ್ನಾಟಕ ಕಾಂಗ್ರೆಸ್ ಪಕ್ಷ ಪ್ರಕಟಿಸಿದ ಅಂಬೇಡ್ಕರ್ ಸಮಗ್ರದಲ್ಲಿಯೂ ಈ ಬಗ್ಗೆ ಎಲ್ಲಿಯೂ ಸಾವರ್ಕರ್ ಅವರ ಈ ವಿಚಾರದ ಬಗ್ಗೆ ಉಲ್ಲೇಖವಿಲ್ಲ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಅಂಬೇಡ್ಕರರ ಬಗ್ಗೆ ಇದ್ದ ಅಸಹನೆ, ಅವರನ್ನ ತುಳಿಯಲು, ಕಡೆಗಳಿಸಲು ಪದೇ ಪದೇ ಮಾಡಿದ ಪ್ರಯತ್ನಗಳು ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ. ಕಾಂಗ್ರೆಸ್ ಪಕ್ಷ ಅಂಬೇಡ್ಕರರಿಗೆ ಮಾಡಿದ ಅನ್ಯಾಯ, ಅವರನ್ನ ನಡೆಸಿಕೊಂಡ ರೀತಿ ಬಗ್ಗೆ ತಮ್ಮದೇ ಪಕ್ಷದ ಹಿರಿಯ ನಾಯಕರು, ಸಿಎಂ ಸಿದ್ದರಾಮಯ್ಯ ನವರ ಆಪ್ತರು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸದನದಲ್ಲೇ ಏನು ಹೇಳಿದ್ದಾರೆ ಎಂದು ಒಮ್ಮೆ ಕೇಳಿ. ನಿಜವಾದ ಅಂಬೇಡ್ಕರ್ ಅನುಯಾಯಿಗಳು ಕಾಂಗ್ರೆಸ್ ಪಕ್ಷವನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಟೀಕಿಸಿದ್ದಾರೆ.

Related Posts

Leave a Reply

Your email address will not be published. Required fields are marked *