ಮಾಧ್ಯಮಗಳ ಮುಂದೆ ಬಾಯಿಗೆ ಬದಂತೆ ಬಡಬಡಾಯಿಸುವುದು ಬಿಟ್ಟು ತಮ್ಮ ಖಾತೆ ನಿರ್ವಹಣೆ ಬಗ್ಗೆ ಸ್ವಲ್ಪ ಗಮನ ಕೊಡಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.
ತಮ್ಮ ಖಾತೆ ಯಾವುದು ಎಂದು ತಮಗೆ ನೆನಪಿದೆಯೇ ಚಲುವರಾಯಸ್ವಾಮಿ ಅವರೇ? ಸಿಎಂ ಸಿದ್ದರಾಮಯ್ಯ ಅವರ ಬಣದಲ್ಲಿ ಇರಬೇಕೋ ಅಥವಾ ಡಿಸಿಎಂ ಡಿಕೆ ಶಿವಕುಮಾರ್ ಅವರ ಬಣದಲ್ಲಿ ಗುರುತಿಸಿಕೊಳ್ಳಬೇಕೋ ಎಂಬ ತ್ರಿಶಂಕು ಸ್ಥಿತಿಯಲ್ಲಿರುವ ತಮಗೆ ಸಂಪುಟ ಪುನಾರಚನೆ ಆದರೆ ಅಥವಾ ಮುಖ್ಯಮಂತ್ರಿ ಬದಲಾದರೆ ತಮ್ಮ ಕುರ್ಚಿ ಉಳಿಯುತ್ತದೆಯೋ ಇಲ್ಲವೋ ಎಂಬ ಗೊಂದಲವಿದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವ್ಯಂಗ್ಯವಾಡಿದ್ದಾರೆ.
ಕಳೆದ 20 ತಿಂಗಳಲ್ಲಿ ಕೃಷಿ ಸಚಿವರಾಗಿ ತಮ್ಮ ಸಾಧನೆಯಾದರೂ ಏನು ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ 20 ತಿಂಗಳುಗಳಲ್ಲಿ ರಾಜ್ಯದ 3,000 ರೈತರು ಆತ್ಮಹತ್ಯೆಗೆ ಶರಣಾಗಿದ್ದರೂ ತಮಗೆ ಕಳಕಳಿ ಇಲ್ಲ. ಬರ, ನೆರೆ ಬಂದಾಗ ಸಮಯಕ್ಕೆ ಸರಿಯಾಗಿ ರೈತರಿಗೆ ಪರಿಹಾರ ಕೊಡಲು ನಿಮ್ಮ ಸರ್ಕಾರಕ್ಕೆ ಯೋಗ್ಯತೆ ಇಲ್ಲ ಎಂದಿದ್ದಾರೆ.
ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಸಿದ ರೈತರಿಗೆ 4,482 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಕಬ್ಬು ಪೂರೈಸಿದ 14 ದಿನಗಳಲ್ಲಿ ಬಿಲ್ ಮೊತ್ತ ಪಾವತಿಸಬೇಕು ಎಂಬ ಕಾಯ್ದೆ ಇದ್ದರೂ ಜಾರಿ ಮಾಡಲು ಕಾಂಗ್ರೆಸ್ ಸರ್ಕಾರ ಇಚ್ಛಾಶಕ್ತಿ ಇಲ್ಲ. ತೊಗರಿ ಖರೀದಿ ಕೇಂದ್ರ ಆರಂಭಿಸಲು ವಿಳಂಬವಾದ ಕಾರಣ ಉತ್ತರ ಕರ್ನಾಟಕದ ರೈತರು ನಷ್ಟ ಅನುಭವಿಸುತ್ತಿದ್ದರೂ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಹೇಳಿದ್ದಾರೆ.
ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ದಿನಬೆಳಗಾದರೆ ರೈತರು ಆತಹತ್ಯಗೆ ಶರಣಾಗುತ್ತಿದ್ದಾರೆ. ತವರು ಜಿಲ್ಲೆಯ ಸಂತ್ರಸ್ತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಸೌಜನ್ಯವೂ ತಮಗಿಲ್ಲ. ನಾನು ಮಂಡ್ಯ ಜಿಲ್ಲೆಯ ಕೊನ್ನಾಪುರ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ಪ್ರೇಮ ಹಾಗು ಅವರ ಮಗ ರಂಜಿತ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಮೇಲೆ ತಮಗೆ ಜ್ಞಾನೋದಯವಾಗಿದೆ ಎಂದು ಟೀಕಿಸಿದ್ದಾರೆ.
ಈಗಿರುವ ಕಾನೂನಿನ ಚೌಕಟ್ಟಿನಲ್ಲಿಯೇ ಮೈಕ್ರೋ ಫೈನಾನ್ಸ್ ಕಂಪನಿಗಳ ಸಮಸ್ಯೆಗೆ ಕಡಿವಾಣ ಹಾಕಬಹುದು ಎಂದು ರಾಜ್ಯಪಾಲರು ಅಭಿಪ್ರಾಯ ಪಟ್ಟಿದ್ದಾರೆ. ಇದರಲ್ಲಿ ತಪ್ಪೇನಿದೆ, ರಾಜ್ಯಪಾಲರು ಬಿಜೆಪಿ ವಕ್ತಾರರು ಎಂದು ಆಪಾದನೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.