ಮೈಕ್ರೋ ಫೈನಾನ್ಸ್ ಹಾವಳಿಯಿಂದ ಕೊನ್ನಾಪುರದಲ್ಲಿ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
2018ರಲ್ಲಿ ಉಜ್ಜೀವನ್ ಬ್ಯಾಂಕ್ ನಲ್ಲಿ ಪ್ರೇಮಾ ಎಂಬವರು 6 ಲಕ್ಷ ರೂ. ಸಾಲ ಪಡೆದಿದ್ದು, ಮೂರು ತಿಂಗಳ ಕಂತು ಕಟ್ಟದ ಹಿನ್ನೆಲೆಯಲ್ಲಿ ಮನೆ ಸೀಜ್ ಮಾಡಲಾಗಿತ್ತು. ಇದರಿಂದ ಮನನೊಂದು ಪ್ರೇಮಾ ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿ ಸಾವಿನಿಂದ ನೊಂದ ಮಗ ರಂಜಿತ್ ಕೂಡ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮೃತ ಪ್ರೇಮ ಭಾವಚಿತ್ರಕ್ಕೆ ಆರ್. ಅಶೋಕ್ ಪುಷ್ಪಾರ್ಚನೆ ಮಾಡಿದರು. ಪ್ರೇಮಾ ಅವರ ಮನೆ ಸೀಜ್ ಮಾಡುವ ವೇಳೆ ಪೊಲೀಸರು ನಡೆದುಕೊಂಡ ರೀತಿಗೆ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದು, ನಾವು ನಿಮ್ಮ ಜೊತೆ ಇರುತ್ತೇವೆ. ಹೋರಾಟ ಮಾಡಿ ನಿಮಗೆ ಸರ್ಕಾರದಿಂದ ಸಹಾಯ ಮಾಡಿಕೊಡಿಸುತ್ತೇವೆ. ಈ ಬಗ್ಗೆ ಸರ್ಕಾರದ ಜೊತೆ ನಾನು ಮಾತನಾಡುತ್ತೇನೆ ಎಂದು ಅಶೋಕ್ ಭರವಸೆ ನೀಡಿದ್ದಾರೆ.
ನಮಗೆ ಸರ್ಕಾರದಿಂದ ನ್ಯಾಯ ಕೊಡಿಸಿ ಎಂದು ಮೃತ ಪ್ರೇಮಾ ಅವರ ಪುತ್ರಿಯವರಾದ ಮಾಣಿಕ್ಯ, ಸುಷ್ಮಾ ಮನವಿ ಮಾಡಿದರು.
ಮನೆ ಸೀಜ್ ವೇಳೆ ಪೊಲೀಸರು ದರ್ಪದಿಂದ ನಡೆದುಕೊಂಡಿದ್ದಾರೆ. ಫೈನಾನ್ಸ್ ನವರಿಗಿಂತ ಪೊಲೀಸರು ಹೆಚ್ಚಿನ ದೌರ್ಜನ್ಯ ಮಾಡಿದ್ದಾರೆ. ಅವರನ್ನು ಸಸ್ಪೆಂಡ್ ಮಾಡುವಂತೆ ಅಶೋಕ್ ಒತ್ತಾಯಿಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಆರ್.ಅಶೋಕ್ ವೈಯಕ್ತಿಕವಾಗಿ ಪರಿಹಾರ ವಿತರಿಸಿದ್ದಾರೆ.