ಬಿಜೆಪಿ ಸರ್ಕಾರ ಚಲನಚಿತ್ರೋತ್ಸವ ಮಾಡಿದಾಗಲೂ ಕಲಾವಿದರು ಬಂದಿರಲಿಲ್ಲ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಲಾವಿದರಿಗೆ ಬೆದರಿಕೆ ಹಾಕಿದ್ದಾರೆ. ಚಿತ್ರೋದ್ಯಮವನ್ನು ಅಭಿವೃದ್ಧಿ ಮಾಡಲು ಪ್ರತಿ ಸರ್ಕಾರ ಅನುದಾನ ನೀಡುತ್ತದೆ. ಅನೇಕ ಕಲಾವಿದರು ಈಗ ಆಹ್ವಾನ ಪತ್ರಿಕೆ ನೀಡಿಲ್ಲ ಎಂದು ಹೇಳಿದ್ದಾರೆ. ಕಲಾವಿದರಿಗೆ ಮೊದಲು ಗೌರವ ನೀಡಬೇಕು. ಮೇಕೆದಾಟು ಪಾದಯಾತ್ರೆಯನ್ನು ರಾಜಕೀಯ ಉದ್ದೇಶ ಇಟ್ಟುಕೊಂಡು ಮಾಡಲಾಗಿತ್ತು. ಅಂತಹ ಪ್ರತಿಭಟನೆಗೆ ಕಲಾವಿದರು ಯಾಕೆ ಬರುತ್ತಾರೆ, ನೆಟ್ ಬೋಲ್ಟ್ ಅನ್ನು ಸರ್ಕಾರಕ್ಕೆ ಮೊದಲು ಟೈಟ್ ಮಾಡಬೇಕಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯ ಸರ್ಕಾರ ರಾಜ್ಯಪಾಲರ ಬಾಯಿಂದ ಸಾಕಷ್ಟು ಸುಳ್ಳುಗಳನ್ನು ಹೇಳಿಸಿದೆ. ರಾಜ್ಯಪಾಲರ ಎಲ್ಲ ಅಧಿಕಾರಗಳನ್ನು ಕಿತ್ತುಕೊಂಡು ಅವರನ್ನೇ ಬಳಸಿಕೊಂಡು ಸರ್ಕಾರವನ್ನು ಶ್ಲಾಘಿಸಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಕ್ಸ್‌ಫರ್ಡ್ ಬ್ಲಾಗ್‌ನಲ್ಲಿ ಆರ್ಥಿಕ ತಜ್ಞರೊಬ್ಬರು ಸರ್ಕಾರವನ್ನು ಶ್ಲಾಘಿಸಿ ಶೈನಿಂಗ್ ಲೈಟ್ ಇನ್ ದಿ ಡಾರ್ಕ್‌ನೆಸ್ ಎಂದು ಬರೆದಿದ್ದಾರೆ ಎಂದು ಭಾಷಣದಲ್ಲಿ ಉಲ್ಲೇಖಿಸಲಾಗಿದೆ. ಇದು ಯಾರೆಂದು ಹುಡುಕಿದರೆ, ಇವರು ಮುಖ್ಯಮಂತ್ರಿ ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಎಂದು ತಿಳಿಯಿತು. ಕಾಂಗ್ರೆಸ್ ನಾಯಕರ ಕಚೇರಿಯಲ್ಲೇ ಸಂಬಳಕ್ಕಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ ಬರೆದಿರುವುದನ್ನು ಬಜೆಟ್ ಭಾಷಣದಲ್ಲಿ ಏಕೆ ಉಲ್ಲೇಖಿಸಬೇಕು? ಇದನ್ನು ರಾಜ್ಯಪಾಲರ ಬಾಯಿಂದ ಹೇಳಿಸಬೇಕೇ, ರಾಷ್ಟ್ರಪತಿಯವರಿಂದ ಬಿರುದು ಪಡೆಯಬೇಕೆ ಹೊರತು, ಸಿಎಂ ಕಚೇರಿಯಲ್ಲಿ ಕೆಲಸ ಮಾಡುವವರಿಂದ ಬಿರುದು ಪಡೆಯಬಾರದು ಎಂದು ಹೇಳಿದರು.
9 ವಿಶ್ವವಿದ್ಯಾಲಯಗಳನ್ನು ರದ್ದು ಮಾಡಲು ಡಿ.ಕೆ.ಶಿವಕುಮಾರ್ ನೇತೃತ್ವದ ಸಮಿತಿ ನಿರ್ಧರಿಸಿದೆ. ಯುಜಿಸಿ ಪ್ರತಿ ಜಿಲ್ಲೆಗೆ ಒಂದು ವಿವಿ ಬೇಕು ಎಂದು ಹೇಳಿದೆ. ಅಮೆರಿಕದಲ್ಲಿ 60 ಸಾವಿರ ಜನರಿಗೆ ಒಂದು ವಿವಿ ಇದ್ದರೆ, ನಮ್ಮಲ್ಲಿ 1.18 ಲಕ್ಷ ಜನರಿಗೆ ಒಂದು ವಿವಿ ಇದೆ. ತಾಲೂಕುಗಳನ್ನು ಹೆಚ್ಚಿಸಿ ಎಂದು ಇದೇ ಕಾಂಗ್ರೆಸ್ ನಾಯಕರು ಈ ಹಿಂದೆ ಒತ್ತಾಯ ಮಾಡುತ್ತಿದ್ದರು. ಆದರೆ ಶಿಕ್ಷಣದ ವಿಚಾರದಲ್ಲಿ ಮಾತ್ರ ಈ ಮನೋಭಾವ ಇಲ್ಲ. ಬಾರ್‌ಗಳನ್ನು ಹೆಚ್ಚಿಸಬೇಕೋ, ವಿವಿಗಳನ್ನು ಹೆಚ್ಚಿಬೇಕೋ ಎಂದು ಇವರೇ ತೀರ್ಮಾನಿಸಲಿ ಎಂದರು.
ಬೆಂಗಳೂರು ಅಭಿವೃದ್ಧಿ ಇಲ್ಲ: ಬೆಂಗಳೂರಿನಲ್ಲಿ ಎಲ್ಲೆಡೆ ಕಸದ ರಾಶಿ ಕಂಡುಬರುತ್ತಿದೆ. ರಾಜಧಾನಿಯ ಪ್ರಗತಿಗೆ ಅನುದಾನವೇ ಇಲ್ಲ. ಎರಡು ವರ್ಷದಿಂದ ಅಭಿವೃದ್ಧಿ ನಡೆದಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಭೈರತಿ ಸುರೇಶ್ ಕ್ಷೇತ್ರಕ್ಕೆ ಒಂದು ವರ್ಷಕ್ಕೆ 100 ಕೋಟಿ ರೂ. ನೀಡಲಾಗಿತ್ತು. ಆದರೆ ಈಗಿನ ಸರ್ಕಾರದಿಂದ ಹಣ ಬರುತ್ತಿಲ್ಲ. ಮಳೆಗಾಲ ಬರುವ ಮುನ್ನ ಡಾಂಬರೀಕರಣ ಮಾಡಬೇಕಿತ್ತು. ಈಗ ಬ್ರ್ಯಾಂಡ್ ಬೆಂಗಳೂರು ಹೋಗಿ ಬ್ಯಾಡ್ ಬೆಂಗಳೂರು ಆಗಿದೆ ಎಂದು ದೂರಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಿಜೆಪಿ 431 ಕೋಟಿ ರೂ. ನೀಡಿದರೆ, ಈಗ 265 ಕೋಟಿ ರೂ. ನೀಡಲಾಗಿದೆ. ಸಾಹಿತ್ಯ ಸಮ್ಮೇಳನಕ್ಕೆ 30 ಕೋಟಿ ರೂ. ಅನ್ನು 10 ಕೋಟಿ ರೂ. ಇಳಿಸಲಾಗಿದೆ. ಸಾಂಸ್ಕೃತಿಕ ಸಂಘಗಳ ಸಹಾಯಧನ 29 ಕೋಟಿ ರೂ. ನಿಂದ 10 ಕೋಟಿ ರೂ.ಗೆ ಇಳಿದಿದೆ. ರಂಗಮಂದಿರಗಳಿಗೆ ಸಹಾಯಧನ ನೀಡಿಲ್ಲ. ಕಲಾವಿದರ ಪಿಂಚಣಿಗೆ ಅರ್ಜಿ ಆಹ್ವಾನಿಸಿಲ್ಲ. ಕಲಾ ತಂಡಗಳಿಗೆ ಹಣ ಕೊರತೆ ಉಂಟಾಗಿದೆ ಎಂದರು.
ದರ ಏರಿಕೆ: ಪೆಟ್ರೋಲ್, ಆಲ್ಕೋಹಾಲ್, ಮೆಟ್ರೋ, ಬಸ್ ಟಿಕೆಟ್, ಮದ್ಯ, ದತ್ತು ಸ್ವೀಕಾರ, ಮದುವೆ ಪ್ರಮಾಣಪತ್ರ, ಹಾಲು, ಮಾರ್ಗಸೂಚಿ ದರ ಎಲ್ಲಕ್ಕೂ ದರ ಏರಿಕೆ ಮಾಡಲಾಗಿದೆ. ಏರಿಕೆ ನಂತರವೂ ಜನಪರ ಸರ್ಕಾರ ಎಂದು ಯಾವ ಬಾಯಲ್ಲಿ ಹೇಳುತ್ತಾರೆ, ಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ ಹಾಲಿನ ಪ್ರೋತ್ಸಾಹಧನವನ್ನು 5 ರಿಂದ 7 ರೂ.ಗೆ ಏರಿಸಿಲ್ಲ. 2,329 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ಅವರೇ ಹಣಕಾಸಿನ ಸ್ಥಿತಿ ಬಗ್ಗೆ ಮಾತಾಡಿದ್ದಾರೆ. ಕಮಿಶನ್ 40% ಗಿಂತ ಹೆಚ್ಚಾಗಿದೆ ಎಂದು ಗುತ್ತಿಗೆದಾರರು ಸಿಎಂ ಬಳಿ ಹೇಳಿದ್ದಾರೆ. ಆದರೂ ಸರ್ಕಾರ ಪಾರದರ್ಶಕತೆ ಬಗ್ಗೆ ಹೇಳುತ್ತದೆ. 32 ಸಾವಿರ ಕೋಟಿ ರೂ. ಬಿಲ್ ಬಾಕಿ ಇದೆ ಎಂದರು.
ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಲಾಗಿದೆ. ಆದರೂ ಆರೋಪಿಯ ವಿರುದ್ಧ ಕಠಿಣ ಕ್ರಮ ವಹಿಸದೆ ಆತನನ್ನು ಹುಚ್ಚ ಎಂದು ಕರೆಯಲಾಯಿತು. ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯಲ್ಲಿ ಗಲಭೆ ನಡೆದಿತ್ತು ಎಂದು ರಾಜ್ಯ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಅಶೋಕ್ ವಾಗ್ದಾಳಿ ನಡೆಸಿದರು.