Wednesday, December 17, 2025
Menu

ಕಾವೇರಿ-2, ಇ-ಸ್ವತ್ತು ಡಿಜಿಟಲ್ ಡೇಟಾ ಲಿಂಕ್ ಗೆ ತ್ವರಿತ ಪರಿಹಾರ: ಸಚಿವ ಕೃಷ್ಣ ಬೈರೇಗೌಡ

krishna byregowda

ಬೆಳಗಾವಿ: ರಾಜ್ಯದಲ್ಲಿ ಕಾವೇರಿ-2 ಮತ್ತು ಇ-ಸ್ವತ್ತು ಡಿಜಿಟಲ್ ಡೇಟಾ ಪರಸ್ಪರ ಲಿಂಕ್ ಮಾಡುವಲ್ಲಿ ಉಂಟಾಗಿರುವ ತಾಂತ್ರಿಕ ತೊಂದರೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಪರಿಷತ್ತಿನಲ್ಲಿ ಸದಸ್ಯರಾದ ಡಿ.ಎಸ್.ಅರುಣ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾವೇರಿ 2.0 ತಂತ್ರಾಂಶದಲ್ಲಿ ವಿಭಾಗಪತ್ರ ಹಾಗೂ ದಾನಪತ್ರಗಳ ನೋಂದಣಿ ಸ್ಥಗಿತವಾಗಿರುವುದಿಲ್ಲ. ಆರ್ಟಿಸಿ, ಮೋಜಿಣಿ ನಕ್ಷೆ, ಇ ಸ್ವತ್ತು ಖಾತಾ, ಇ-ಆಸ್ತಿ ಖಾತಾ ಹಾಗೂ ಯುಎಲ್ ಎಮ್ ಎಸ್ ಖಾತಾ ಹೊಂದಿರುವ ಸ್ವತ್ತುಗಳ ವಿಭಾಗಪತ್ರ ಹಾಗೂ ದಾನಪತ್ರಗಳು ಎಂದಿನಂತೆ ನೋಂದಣಿ ಆಗುತ್ತಿವೆ. ಕಾವೇರಿ 2.0 ತಂತ್ರಾಂಶದಲ್ಲಿ 2024-25ನೇ ಸಾಲಿನಲ್ಲಿ 1,15,068 ವಿಭಾಗ ಪತ್ರಗಳು ಮತ್ತು 1,39,134 ದಾನಪತ್ರಗಳು ಅದೇ ರೀತಿ 2025-26ನೇ ಸಾಲಿನಲ್ಲಿ 79,515 ವಿಭಾಗ ಪತ್ರಗಳು ಹಾಗೂ 92,618 ದಾನಪತ್ರಗಳು ನೋಂದಣಿ ಆಗಿವೆ ಎಂದು ಸಚಿವರು ಮಾಹಿತಿ ನೀಡಿದರು.

ನ್ಯಾಯಾಲಯಗಳಲ್ಲಿನ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ

ಸರ್ಕಾರದ ಉಪವಿಭಾಗಾಧಿಕಾರಿಗಳ ಎಸಿ ಕೋರ್ಟ್ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಕಳೆದ ಎರಡೂವರೆ ವರ್ಷದಲ್ಲಿ ರಾಜ್ಯ ಸರ್ಕಾರವು ಶೆ.80ರಷ್ಟು ವಿಲೇ ಮಾಡಿದ್ದು, ಇನ್ನುಳಿದ ಬಾಕಿ ಪ್ರಕರಣಗಳನ್ನು ಸಹ ಇತ್ಯರ್ಥಗೊಳಿಸಲು ಸರ್ಕಾರ ಬದ್ದವಾಗಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಬುಧವಾರ ನಡೆದ ಪ್ರಶ್ನೋತ್ತರ ವೇಳೆ ಸದಸ್ಯರಾದ ರಾಮೋಜಿ ಗೌಡ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹೆಚ್ಚು ಪ್ರಕರಣಗಳು ಬಾಕಿ ಇರುವ ಜಿಲ್ಲೆಗಳಲ್ಲಿನ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಮೇಲ್ಮನವಿ ಪ್ರಕರಣಗಳನ್ನು ಉಪ ವಿಭಾಗಾಧಿಕಾರಿ ವೃಂದಕ್ಕೆ ಸಮಾನಾಂತರ ವೃಂದದ ಇತರೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ಎ.ಎಸ್ ಅಧಿಕಾರಿಗಳಿಗೆ ಕಾರ್ಯಹಂಚಿಕೆ ಮಾಡಿ ಸರ್ಕಾರವು ಆದೇಶಿಸಿರುತ್ತದೆ.

ಕಂದಾಯ ನ್ಯಾಯಲಯಗಳ ನಿರ್ವಹಣೆಯಲ್ಲಿ ಪಾರದರ್ಶಕತೆ, ದಕ್ಷತೆ, ಸಕಾಲಿಕ ವಿಲೇವಾರಿ ಮತ್ತು ಲಭ್ಯತೆಯ ಹಿತದೃಷ್ಟಿಯಿಂದ ಡಿಜಿಟಲ್ ಸಹಿ ಅಥವಾ ಸಮಾನವಾದ ಕಾನೂನು ಬದ್ಧವಾಗಿ ಗುರುತಿಸಲ್ಪಟ್ಟ ಎಲೆಕ್ಟ್ರಾನಿಕ್ ವಿಧಾನಗಳಿಂದ ದೃಢೀಕರಣದೊಂದಿಗೆ ಕೇಂದ್ರೀಕೃತ ವೇದಿಕೆಯ ಮೂಲಕ ಅಂತಹ ಎಲ್ಲಾ ಎರಡು ಪ್ರಕ್ರಿಯೆಗಳ ಆನ್ಲೈನ್ ಫೈಲಿಂಗ್ ಮತ್ತು ಎಲೆಕ್ಟ್ರಾನಿಕ್ ನಿರ್ವಹಣೆಯನ್ನು ಒದಗಿಸುವುದು ಸೂಕ್ತವೆಂದು ಪರಿಗಣಿಸಿ ಕರ್ನಾಟಕ ಕಂದಾಯ ನ್ಯಾಯಾಲಯದ ನಡವಳಿಗಳು (ಆನ್ಲೈನ್ ಸಲ್ಲಿಕೆ, ದೃಢೀಕರಣ ಮತ್ತು ಡಿಜಿಟಲೀಕರಣ) ಸರ್ಕಾರವು ದಿ.29.08.2025ರಂದು ಅಧಿಸೂಚನೆ ಹೊರಡಿಸಲಾಗಿರುತ್ತದೆ. ಇದರಿಂದಾಗಿ ಕಂದಾಯ ನ್ಯಾಯಾಲಯಗಳು ನಿರ್ವಹಣೆಯನ್ನು ಕಡ್ಡಾಯವಾಗಿ ಆರ್ಸಿಸಿಎಂಎಸ್ ತಂತ್ರಾಂಶದಲ್ಲಿಯೇ ನಿರ್ದೇಶಿಸಲಾಗಿರುತ್ತದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.

Related Posts

Leave a Reply

Your email address will not be published. Required fields are marked *