ಪಂಜಾಬ್, ಹರಿಯಾಣ ಪ್ರದೇಶಗಳಲ್ಲಿ ಅತ್ಯಾಚಾರಿ ಗಂಡುಮಕ್ಕಳನ್ನು ಕುಟುಂಬದ ಸದಸ್ಯರು ಹಾಗೂ ತಾಯಂದಿರುವ ‘ರಾಜಾ ಬೇಟಾ’ ಎಂದು ಕುರುಡಾಗಿ ಮುದ್ದಿಸುವುದು ಸಾಮಾನ್ಯ, ದುಷ್ಟ, ವಿಕೃತ ವ್ಯಕ್ತಿಗಳನ್ನು ಪುರುಷತ್ವ ಅಳಿಯುವ ತನಕ ಜೈಲಲ್ಲಿ ಕೊಳೆಯುವಂತೆ ಮಾಡಬೇಕು ಎಂದು ಪಂಜಾಬ್- ಹರಿಯಾಣ ಹೈಕೋರ್ಟ್ ಹೇಳಿದೆ.
ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವನಿಗೆ 30 ವರ್ಷ ಸಜೆ ನೀಡಿದ ಪಂಜಾಬ್ ಹರಿಯಾಣ ಹೈಕೋರ್ಟ್, 30 ಲಕ್ಷ ರೂಪಾಯಿ ದಂಡವನ್ನು ಅತ್ಯಾಚಾರ-ಹತ್ಯೆಗೀಡಾದ ಮಗುವಿನ ಕುಟುಂಬಕ್ಕೆ ನೀಡುವಂತೆ ಆದೇಶಿಸಿದೆ.
2025ರ ಮೇ 31ರಂದು ಮಗುವಿನ ತಂದೆಯ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ನೌಕರ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ನೌಕರ ಮಗುವನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿ ಚಾಕುವಿನಿಂದ ಹತ್ಯೆ ಮಾಡಿದ್ದ. ಮೃತ ದೇಹವನ್ನು ಅಡುಗೆ ಕೋಣೆಯ ದೊಡ್ಡ ಡಬ್ಬವೊಂದರಲ್ಲಿ ಅಡಗಿಸಿಟ್ಟಿದ್ದ. ಈ ಕ್ರೌರ್ಯ ನಡೆದಾಗ ಆತನ ತಾಯಿ ಹೊರಗೆ ಕೆಲಸಕ್ಕೆ ಹೋಗಿದ್ದರು.
ವಿಷಯ ತಿಳಿದ ಮಗುವಿನ ಪೋಷಕರು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದಾಗ, ನಿಮ್ಮ ಮಗುವಾಗಲಿ ನನ್ನ ಮಗನಾಗಲಿ ಮನೆಯಲ್ಲಿಲ್ಲ ಎಂದು ತಾಯಿ ಬಾಗಿಲಿಗೆ ಅಡ್ಡ ನಿಂತಿದ್ದಳು. ಅಂಗಳದಲ್ಲಿದ್ದ ಡಬ್ಬದಲ್ಲಿ ಹಸುಳೆಯ ದೇಹ ಪತ್ತೆಯಾಗಿದ್ದು, ಆರೋಪಿ ಯನ್ನು ಪೋಕ್ಸೋ ಕಾಯಿದೆಯಡಿ ಬಂಧಿಸಲಾಗಿದೆ.
ಅಪರಾಧಿಯ ರಕ್ಷಣೆಗೆ ಮುಂದಾದ ತಾಯಿಗೆ ನ್ಯಾಯಾಲಯ ಏಳು ವರ್ಷಗಳ ಕಠಿಣ ಸಜೆ ವಿಧಿಸಿದೆ. ತಾಯಿ-ಮಗ ಇಬ್ಬರೂ ಈ ತೀರ್ಪನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದು, ತಾಯಿಯು ಮಗನನ್ನು ವಹಿಸಿಕೊಳ್ಳುವುದು ಪಂಜಾಬ್-ಹರಿಯಾಣ ಸೀಮೆಯ ಪುರುಷಾಧಿಪತ್ಯ ಮನಸ್ಥಿತಿ ಮತ್ತು ಸಂಸ್ಕೃತಿಯಲ್ಲಿ ಬೇರು ಬಿಟ್ಟಿದೆ ಎಂದು ಹೈಕೋರ್ಟ್ ಕಿಡಿ ಕಾರಿದೆ.
“ತನ್ನ ರಾಜಾ ಬೇಟಾಅಮಾಯನಕನಲ್ಲ, ಮಗುವಿನ ಮೇಲೆ ರೇಪ್ ಮಾಡಿ ಕೊಂದಿರುವುದು ಗೊತ್ತಾದ ನಂತರವೂ ತಾಯಿ ಅವನ ರಕ್ಷಣೆಗೆ ನಿಂತಳು. ತನ್ನ ಮಗನನನ್ನು ರಕ್ಷಿಸುವ ಬದಲು ಮಗುವಿಗೆ ನ್ಯಾಯ ಒದಗಿಸಲು ಮುಂದಾಗಬೇಕಿತ್ತು. ಈ ತಾಯಿಯ ವರ್ತನೆ ಖಂಡನೀಯ. ಮಕ್ಕಳು ಮತ್ತು ಮಹಿಳೆಯರನ್ನು ಕಾಪಾಡಬೇಕಿದ್ದರೆ ಇಂಥ ಅಪರಾಧಿ ಜೈಲಿನ ನಾಲ್ಕು ಗೋಡೆಗಳ ನಡುವೆ ಕೊಳೆಯಬೇಕು. ಪುರುಷತ್ವ ಅಳಿಯುವ ತನಕವೂ ಬಂಧನದಲ್ಲೇ ಇರಬೇಕು ಎಂದು ನ್ಯಾಯಾಲಯ ಹೇಳಿದೆ.


