ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಹಾಗೂ ವಾಣಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿದರು.
ಧರ್ಮ ಆಚರಣೆ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ಆಯಾ ಧರ್ಮ ಉಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ನಮ್ಮ ಸರ್ಕಾರ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಲಿದೆ ಎಂದರು.
ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು ಎಂದು ಹೇಳಿದರು.
ಅನೇಕರು ರಾಜಕೀಯ ಟೀಕೆ ಮಾಡುತ್ತಿದ್ದಾರೆ. ಮಾಡಕೊಳ್ಳಲಿ. ಟೀಕೆ ಮಾಡಿದರೆ ನಾವು ತಿದ್ದುಕೊಳ್ಳಲು ಅವಕಾಶ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಮ್ಮಲ್ಲಿ ದೋಷ ಇದ್ದರೆ ಮಾತ್ರ ತಿದ್ದುಕೊಳ್ಳಲು ಸಾಧ್ಯ. ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವದ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ. ಅದೇ ರೀತಿ ನಾವು ಇಂದು ಜ್ಞಾನ, ಗುರು, ದೇವರನ್ನು ಸ್ಮರಿಸಲು ಇಲ್ಲಿ ಸೇರಿದ್ದೇವೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಶೃಂಗೇರಿಯ ಶಾರದಾ ಪೀಠದ ಶ್ರೀಗಳು ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿದ್ದಾರೆ ಎಂದರು.
1983ರಲ್ಲಿ ಈ ಭಾಗದ ಜನರ ಪ್ರೋತ್ಸಾಹದೊಂದಿಗೆ ಬೆಳ್ತಂಗಡಿ ತಾಲೂಕಿನ ಒಕ್ಕಲಿಗರ ಸೇವಾ ಸಂಘದ ಟ್ರಸ್ಟ್ ನಿಂದ ಶಾಲೆ ಆರಂಭಿಸಲಾಗಿದೆ. ಶಿಕ್ಷಣ ಸಂಸ್ಥೆ ಕಟ್ಟಿರುವಈ ಸಮುದಾಯದ ಪ್ರತಿನಿಧಿಯಾಗಿ, ಉಪಮುಖ್ಯಮಂತ್ರಿಯಾಗಿ ಸರ್ಕಾರದ ಪರವಾಗಿ ಈ ಸಂಸ್ಥೆಯವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ. ನಾನು ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದೇನೆ. ಅದನ್ನು ನೋಡಿಕೊಳ್ಳಲು ಸಮಯವಿಲ್ಲದ ಕಾರಣ ನನ್ನ ಮಗಳಿಗೆ ಜವಾಬ್ದಾರಿ ವಹಿಸಿದ್ದೇನೆ. ಸಮುದಾಯದ ಸೇವೆಗೆ ಈ ಸಂಸ್ಥೆ ನಡೆಸುತ್ತಿರುವ ನಿಮ್ಮ ಜತೆ ನಾನು ಇದ್ದೇನೆ ಎಂದು ಹೇಳಲು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಈ ಸಂಸ್ಥೆಯ ಬೇಡಿಕೆಗೆ ಶಕ್ತಿ ತುಂಬುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂಸ್ಥೆಯು ಕಡಿಮೆ ಶುಲ್ಕ ಪಡೆದು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಎಲ್ಲರಿಗೂ ತಮಗೆ ಸಿಗುವ ಶಿಕ್ಷಣದ ಬೆಲೆ ಅರಿವಾಗಬೇಕು. ವಿದ್ಯಾ ದದಾತಿ ವಿನಯಂ ವಿನಯಾ ದದಾತಿ ಪಾತ್ರತಾಂ। ಪಾತ್ರತ್ವಂ ಧನಮಾಪ್ರೋತಿ ಧನಧರ್ಮಂ ತತಃ ಸುಖಮ್. ಅಂದರೆ ಮನುಷ್ಯನಿಗೆ ವಿದ್ಯೆ ಇದ್ದರೆ ವಿನಯ ಬರುತ್ತದೆ. ವಿನಯವಿದ್ದರೆ ಯೋಗ್ಯತೆ ಬರುತ್ತದೆ. ಯೋಗ್ಯತೆಯಿಂದ ಹಣ, ಹಣದಿಂದ ಧರ್ಮ, ಧರ್ಮದಿಂದ ಸುಖ ಪಡೆಯುತ್ತೇವೆ. ವಿದ್ಯೆ ಇದ್ದರೆ ಇದೆಲ್ಲವೂ ಸಿಗುತ್ತದೆ ಎಂದರು.
ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ, ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮ್ ಇದಂ ಶರೀರಮ್ ಎಂಬ ಶ್ಲೋಕವಿದೆ. ಅಂದರೆ ಮರ, ನದಿ, ಹಸು ಎಲ್ಲವೂ ಪರರ ಉಪಕಾರಕ್ಕಾಗಿ ಇವೆ. ಅದೇ ರೀತಿ ನಮ್ಮ ದೇಹ ಕೂಡ ಪರೋಪಕಾರಕ್ಕೆ ಸೀಮಿತವಾಗಬೇಕು ಎಂಬುದು ಈ ಶ್ಲೋಕದ ಅರ್ಥ. ಅದೇ ರೀತಿ ನೀವು ನಿಮ್ಮ ಜೀವನದಲ್ಲಿ ಬೇರೆಯವರಿಗೆ ಸಹಾಯ ಮಾಡಿ” ಎಂದು ತಿಳಿಸಿದರು.
ಆತ್ಮಸಾಕ್ಷಿ ಮತಗಳಿಂದ ದ.ಕನ್ನಡ, ಉಡುಪಿ ಜೆಲ್ಲೆಯಲ್ಲಿ ಕಾಂಗ್ರೆಸ್ಸಿಗೆ 10 ಸ್ಥಾನ
ಜನರ ಆತ್ಮಸಾಕ್ಷಿ ಮತಗಳಿಂದ 2028ರ ಚುನಾವಣೆಯಲ್ಲಿ ದ.ಕನ್ನಡ, ಉಡುಪಿ ಜೆಲ್ಲೆಯಲ್ಲಿ ಕಾಂಗ್ರೆಸ್ 10 ಕ್ಷೇತ್ರಗಳನ್ನು ಗೆಲ್ಲಲಿದೆ. ಆ ಮೂಲಕ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ” ಎಂದು ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾಯನಕೆರೆಯಲ್ಲಿಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಈ ವರ್ಷವನ್ನು ಸಂಘಟನೆ ವರ್ಷವೆಂದು ಘೋಷಣೆ ಮಾಡಿದ್ದಾರೆ. ಜೈ ಬಾಪು, ಜೈ ಭೀಮ್ ಹಾಗೂ ಜೈ ಸಂವಿಧಾನ ಸಮಾವೇಶ ಮಾಡಿ, ಗಾಂಧೀಜಿ, ಅಂಬೇಡ್ಕರ್ ತತ್ವ ಸಿದ್ಧಾಂತ ಹಾಗೂ ಸಂವಿಧಾನ ರಕ್ಷಣೆಗೆ ಕರೆ ನೀಡಿದ್ದಾರೆ. ಇವುಗಳನ್ನು ನಾವು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದರು.
ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ಈ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದು, ಎಲ್ಲರಿಗೂ ಅಭಿನಂದಿಸುತ್ತೇನೆ. ಇಲ್ಲಿ ಪ್ರತಿ ಬೂತ್ ನಲ್ಲಿ ಇಬ್ಬರು ಡಿಜಿಟಲ್ ಯೂಥ್ ನೇಮಕ ಮಾಡಲಾಗಿದೆ. ನಿಮ್ಮೆಲ್ಲರಿಗೂ ಅಭಿನಂದನೆಗಳು” ಎಂದರು.
ನಮ್ಮ ಸರ್ಕಾರ ಬಂದ ನಂತರ 1.21 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪಿದೆ. 200 ಯೂನಿಟ್ ವರೆಗೂ ಉಚಿತ ವಿದ್ಯುತ್, 10 ಕೆ.ಜಿ ಅಕ್ಕಿ, ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ಸಿಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿಯಲ್ಲಿ ನಾನು ಸಮೀಕ್ಷೆ ಮಾಡಿಸಿದ್ದು, ಮುಂದಿನ ಚುನಾವಣೆಯಲ್ಲಿ ಈ ಜಿಲ್ಲೆಗಳಿಂದ ಕನಿಷ್ಠ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು.
“ಬೆಳ್ತಂಗಡಿ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ವರದಿ ಹೇಳುತ್ತಿದೆ. ಹೀಗಾಗಿ ನೀವು ಈಗಿನಿಂದಲೇ ಜನರ ಹೃದಯ ಗೆಲ್ಲಬೇಕು. ಬಿಜೆಪಿಗೆ ಮತ ಹಾಕಬೇಕು ಎಂದು ಯಾರೂ ಹಠ ಮಾಡಿ ಕೂತಿಲ್ಲ. ಎಲ್ಲರೂ ಪರಿವರ್ತನೆ ಆಗುತ್ತಾರೆ. ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಚನ್ನಪಟ್ಟಣ ಹಾಗೂ ಶಿಗ್ಗಾವಿಯಲ್ಲಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನೇ ಜನ ಸೋಲಿಸಿದರು. ಬಿಜೆಪಿ ಹಾಗೂ ದಳದ ಭದ್ರಕೋಟೆ ಒಡೆದು 136 ಇದ್ದ ನಮ್ಮ ಸಂಖ್ಯಾಬಲ 138 ಆಗಿದೆ. ಇಬ್ಬರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ನಮ್ಮ ಬಲ 140 ಆಗಿದೆ” ಎಂದು ತಿಳಿಸಿದರು.
ಪರಶುರಾಮನ ಪ್ರತಿಮೆ ಬಿಜೆಪಿ ಸಾಕ್ಷಿಗುಡ್ಡೆ: “ಕಾರ್ಕಳದಲ್ಲಿ ಹಿಂದೂ ಧರ್ಮದ ಹೆಸರಿನಲ್ಲಿ ಜನರ ಮತ ಪಡೆಯುತ್ತಿದ್ದಾರೆ. ಆದರೆ ಅವರಿಂದಲೇ ಅಲ್ಲಿ ಪರಶು ರಾಮನ ಕೊಲೆಯಾಗಿದೆ. ಪರಶುರಾಮನ ಪ್ರತಿಮೆ ನೋಡಿ, ಇಂತಹ ಕೊಲೆ ನೋಡಿ ಅಲ್ಲಿನ ಜನ ಅವರಿಗೆ ಮತ ಹಾಕಿದ್ದಾರಲ್ಲ ಎಂದು ಅಚ್ಚರಿಯಾಯಿತು. ಆ ಪ್ರತಿಮೆಯನ್ನು ಅವರು ಹಾಗೆಯೇ ಇಟ್ಟುಕೊಂಡಿರಲಿ. ಅದು ಅವರ ಸಾಕ್ಷಿಗುಡ್ಡೆ” ಎಂದು ಹರಿಹಾಯ್ದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 10 ಶಾಸಕರು ಈ ಭಾಗದಿಂದ ಆಯ್ಕೆಯಾಗುತ್ತಿದ್ದರು. ಈಗ 2 ಸ್ಥಾನಕ್ಕೆ ಇಳಿದಿದೆ. ಯಾರೂ ಎದೆಗುಂಡಬೇಡಿ. ಚಿಕ್ಕಮಗಳೂರಿನಲ್ಲಿ ದತ್ತಪೀಠ ಹೆಸರಿಟ್ಟುಕೊಂಡು ಅದರಲ್ಲೇ ರಾಜಕಾರಣ ಮಾಡುತ್ತಿದ್ದರು. ಇಂದು ಆ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ. ಕೊಡಗಿನಲ್ಲಿ 2ಕ್ಕೆ ಎರಡೂ ಕ್ಷೇತ್ರ ಗೆದ್ದಿದ್ದೇವೆ. ದೇವೇಗೌಡರು, ಕುಮಾರಸ್ವಾಮಿ ಅವರು ರಾಮನಗರ ತಮ್ಮ ಆಸ್ತಿ ಎಂದುಕೊಂಡಿದ್ದರು. ಈಗ ನಾಲ್ಕಕ್ಕೆ ನಾಲ್ಕೂ ಕ್ಷೇತ್ರ ಗೆದ್ದಿದ್ದೇವೆ. ಮಂಡ್ಯದಲ್ಲಿ ಕೇವಲ ಒಂದು ಸೀಟು ಗೆದ್ದಿದ್ದೆವು. ಈಗ ಏಳಕ್ಕೆ ಏಳೂ ಕ್ಷೇತ್ರ ಗೆದ್ದಿದ್ದೇವೆ. ಇದೇ ಕಾಂಗ್ರೆಸ್ ಪಕ್ಷದ ಶಕ್ತಿ” ಎಂದು ಧೈರ್ಯ ತುಂಬಿದರು.
“2028ರ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಈ ಮಾತನ್ನು ಮಾಧ್ಯಮಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬರೆದಿಟ್ಟುಕೊಳ್ಳಿ. ಬೂಟ್ ಮಟ್ಟದ ನಾಯಕರನ್ನು ತಯಾರು ಮಾಡಲು ನಾವಿಂದು ಬಂದಿದ್ದೇವೆ. ಕಾರ್ಯಕರ್ತರು ಪಕ್ಷದ ಆಧಾರಸ್ತಂಭ. ಕಾರ್ಯಕರ್ತರಿಗೆ ಅಧಿಕಾರ ನೀಡಲು ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಲಾಗಿದೆ. ಸ್ಥಳೀಯ ಸಮಿತಿಗಳಲ್ಲೂ ಅಧಿಕಾರ ನೀಡಲಾಗಿದೆ” ಎಂದರು.
ರಾಜ್ಯದೆಲ್ಲೆಡೆ 100 ಕಾಂಗ್ರೆಸ್ ಕಚೇರಿ ಸ್ಥಾಪಿಸಲು ಮುಂದಾಗಿದ್ದು, ಕಾರ್ಯಾಧ್ಯಕ್ಷರುಗಳು ರಾಜ್ಯದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗಬಹುದು. ಅದಕ್ಕೆ ನೀವು ಸಜ್ಜಾಗಬೇಕು. ನಮ್ಮ ಗ್ಯಾರಂಟಿ ಯೋಜನೆಗಳೇ ನಿಮ್ಮ ಪ್ರಮುಖ ಅಸ್ತ್ರ. ಇದರ ಬಗ್ಗೆ ಜನರಿಗೆ ತಿಳಿಸಿ ಅವರ ಮನಗೆಲ್ಲಬೇಕು. ನೀವು ಆತ್ಮವಿಶ್ವಾಸದಿಂದ ಪಕ್ಷ ಸಂಘಟಿಸಿ. ಕಾರ್ಯಕರ್ತರ ರಕ್ಷಣೆ ಈ ಡಿ.ಕೆ. ಶಿವಕುಮಾರ್ ಮೊದಲ ಕರ್ತವ್ಯ. ನೀವಿದ್ದರೆ ನಾವು. ನೀವಿಲ್ಲದಿದ್ದರೆ ನಾವಿಲ್ಲ. ನೀವೇ ನಮ್ಮ ಪಕ್ಷದ ಆಸ್ತಿ ಎಂದು ಹೇಳಿದರು.
ಜಾತಿಗಣತಿ ಬಗ್ಗೆ ರಾಹುಲ್ ಗಾಂಧಿ ಪತ್ರ ಬರೆದಿಲ್ಲ, ಇದಕ್ಕೆ ಯಾರ ವಿರೋಧವಿಲ್ಲ. ನಾವು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಕೇಳಿದಾಗ, “ಸಿಎಂ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ವಿಚಾರ ತಿಳಿದು ಮಾತನಾಡುವೆ. ಎಲ್ಲಾ ಸಮುದಾಯದವರನ್ನು ಸಮಾನವಾಗಿ ನೋಡಬೇಕು ಎಂಬುದು ನಮ್ಮ ಪಕ್ಷದ ಧ್ಯೇಯ. ಜಾತಿ ಗಣತಿ ವಿಚಾರದಲ್ಲೂ ಯಾರಿಗೂ ನೋವಾಗದ ರೀತಿ ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತೇವೆ” ಎಂದರು.
ಶೂಟೌಟ್ ನಲ್ಲಿ ಗಾಯಗೊಂಡಿರುವ ರಿಕ್ಕಿ ರೈ ಅವರಿಗೆ ಕರೆ ಮಾಡಿದ್ದೀರಾ ಎಂದು ಕೇಳಿದಾಗ, “ನಾನು ಯಾರಿಗೂ ಕರೆ ಮಾಡಿಲ್ಲ. ಆದರೆ ಈ ಪ್ರಕರಣದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವಂತೆ ಪೊಲೀಸರಿಗೆ ತಿಳಿಸಿದ್ದೇವೆ” ಎಂದು ಹೇಳಿದರು.