Menu

ಪುನೀತ್ ರಾಜಕುಮಾರ್, ಅಶ್ವಿನಿಯಿಂದ ರಾಜಕಾರಣದ ಆಹ್ವಾನ ನಿರಾಕರಣೆ: ಡಿಕೆ ಶಿವಕುಮಾರ್‌

“ರಾಜಕಾರಣಕ್ಕೆ ಪುನೀತ್ ರಾಜಕುಮಾರ್ ಅವರನ್ನು ಸೆಳೆಯಲು ನಾನು ಅನೇಕ ಬಾರಿ ಪ್ರಯುತ್ನ ಪಟ್ಟೆ, ಚಾಕಲೇಟ್ ಕೊಟ್ಟೆ. ಆದರೆ ಅವರು ಬರಲಿಲ್ಲ. ಸಹೋದರಿ ಅಶ್ವಿನಿ ಅವರನ್ನು ಸಹ ಆಹ್ವಾನಿಸಿದೆ. ಅವರು ಸಹ ತಮ್ಮ ಪತಿ ಹಾದಿಯಲ್ಲೇ ನಡೆಯುವುದಾಗಿ ತಿಳಿಸಿದರು, ರಾಜಕಾರಣಕ್ಕೆ ಬರಲಿಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದರು.

ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಜೀವನಾಧಾರಿತ ಎಐ ತಂತ್ರಜ್ಞಾನ ಬಳಸಿ ಮಾಡಿರುವ ‘ಕನ್ನಡದ ಅಪ್ಪು’ ಮೊಬೈಲ್ ಆ್ಯಪ್ ಅನ್ನು ಡಿಸಿಎಂ ಶಿವಕುಮಾರ್ ಬಿಡುಗಡೆಗೊಳಿಸಿ ಮಾತನಾಡಿದರು. “ಅಶ್ವಿನಿ ಅವರು ರಾಜಕೀಯಕ್ಕೆ ಬರಲು ತಿರಸ್ಕರಿಸಿದಾಗ. ಸಕ್ರಿಯ ರಾಜಕಾರಣಕ್ಕೆ ಬರುವುದು ಬೇಡ ಆದರೆ ಮುಖ್ಯವಾಹಿನಿಯಲ್ಲಿರಿ ಎಂದು ತಿಳಿಸಿದ್ದೆ. ಇಷ್ಟು ದಿನ ಇದನ್ನು ಬಹಿರಂಗ ಗೊಳಿಸಿರಲಿಲ್ಲ. ಇಂದು ಬಹಿರಂಗಗೊಳಿಸಿದ್ದೇನೆ” ಎಂದರು.

“ರಾಮಾಯಣ ಮತ್ತು ಮಹಾಭಾರತಗಳು ಅನೇಕ ವರ್ಷಗಳಿಂದ ನಮ್ಮ ನಡುವೆ ಉಳಿದುಕೊಂಡಿವೆ. ಪುನೀತ್ ರಾಜಕುಮಾರ್ ಅವರು ಮಾಡಿರುವ ಕೆಲಸಗಳು ಹೊಸ ತಂತ್ರಜ್ಞಾನದ ಮೂಲಕ ನಮ್ಮ ನಡುವೆ ಜೀವಂತವಾಗಿರುತ್ತವೆ” ಎಂದು ತಿಳಿಸಿದರು.

“ಎಐ‌ ತಂತ್ರಜ್ಞಾನದ ಮೂಲಕ ಭೀಮ, ಅರ್ಜುನ, ರಾಮ ಹೀಗೆ ಅನೇಕ ಪಾತ್ರಗಳನ್ನು ನೈಜತೆಗೆ ಹತ್ತಿರವಾದಂತೆ ಚಿತ್ರಿಸಲಾಗುತ್ತಿದೆ. ಅದೇ ರೀತಿ ಈ ಆ್ಯಪ್ ನಲ್ಲಿ ಬಾಲ್ಯಕಾಲದ ಪುನೀತ್‌‌ ಸೇರಿದಂತೆ ಇತ್ತೀಚಿನ ದಿನದವರೆಗಿನ ತನಕ ಸೃಷ್ಟಿಸಲಾಗಿದೆ. ಪುನೀತ್ ಅವರು ಕೊನೆಯುಸಿರು ಎಳೆದ ಸಂದರ್ಭದಲ್ಲಿ ಎಷ್ಟೊಂದು ಅಭಿಮಾನಿಗಳು ಅವರಿಗಾಗಿ ಮಿಡಿದರು. ನೂರಾರು ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ಅವರ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟಿದ್ದಾರೆ. ಕತ್ತಲೆಗೆ ಹೋಗಿರುವ ಅಪ್ಪು ತಂತ್ರಜ್ಞಾನದ ಮೂಲಕ ಬೆಳಕಿಗೆ ಬಂದಿದ್ದಾರೆ” ಎಂದರು.

“ನನಗೆ ಬಹಳಷ್ಟು ರಾಜ್ಯಗಳ ಸಿನಿಮಾ ಸ್ನೇಹಿತರು ಪರಿಚಯ ಇದ್ದಾರೆ. ಯಾರೂ ಕೂಡ ಈ ಆಲೋಚನೆ ಮಾಡಿಲ್ಲ. ನನ್ನ ಸ್ನೇಹಿತನ ಹೆಸರಿನಲ್ಲಿ ಇಂತಹ ಆ್ಯಪ್ ರೂಪುಗೊಂಡಿದ್ದು, ಅದನ್ನು ಉದ್ಘಾಟನೆ ಮಾಡಲು ನಾನು ಬಂದಿರುವುದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ” ಎಂದು ಹೇಳಿದರು.

“ಅಪ್ಪು ಅವರು ಸಮಾಜದಿಂದ ಪಡೆದು ಸಮಾಜಕ್ಕೆ ಹಲವಾರು ಕಾಣಿಕೆಗಳನ್ನು ಕೊಟ್ಟು ಹೋಗಿದ್ದಾರೆ. ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ. ದೇವರು ಕೊಟ್ಟಂತಹ ಅವಕಾಶವನ್ನು ಸದುಪಯೋಗ ಮಾಡಿಕೊಂಡಿದ್ದಾರೆ. ಮನುಷ್ಯತ್ವಕ್ಕೆ ದೊಡ್ಡ ‌ಉದಾಹರಣೆಯಾಗಿದ್ದಾರೆ. ಸಾವು ಎಂಬುದು ಯಾರ ಕೈಯಲ್ಲಿ ಇಲ್ಲ. ನಾನು ಹಾಗೂ ಪುನೀತ್ ರಾಜಕುಮಾರ್ ಅವರು ನೆರೆಹೊರೆಯವರು. ಇಬ್ಬರೂ ಒಟ್ಟಿಗೆ ಒಂದೇ ಜಿಮ್ ಗೆ ಕಸರತ್ತು ನಡೆಸಲು ಹೋಗುತ್ತಿದ್ದೆವು. ಕೊನೆ ಕ್ಷಣಗಳು ಅವರ ಕೈಯಲ್ಲೂ ಇರಲಿಲ್ಲ. ಅವರ ಜಿಮ್ ತರಬೇತುದಾರ ಹಾಗೂ ನನ್ನ ತರಬೇತುದಾರ ಕೊನೆ ಕ್ಷಣದಲ್ಲಿ ಒಟ್ಟಿಗೆ ಇದ್ದರು. ಅವರು ನನಗೆ ಈ ವಿಚಾರ ತಿಳಿಸಿದರು” ಎಂದರು.

“ನಾನು ಈ ಮೊದಲು ಟೂರಿಂಗ್ ಟಾಕೀಸ್ ಗಳನ್ನು ನಡೆಸುತ್ತಿದೆ. ನನಗೆ ಗೊತ್ತಿರುವ ಪ್ರಕಾರ ಅತಿ ಹೆಚ್ಚು ಓಡಿದ ಸಿನಿಮಾ ಎಂದರೆ ಸತ್ಯ ಹರಿಶ್ಚಂದ್ರ. ಮದುವೆಯಾದ ಹೊಸದರಲ್ಲಿ ನನ್ನ ಹೆಂಡತಿಯನ್ನು ಮೈಸೂರಿಗೆ ಸತ್ಯ ಹರಿಶ್ಚಂದ್ರ ಸಿನಿಮಾ ನೋಡಲು ಕರೆದುಕೊಂಡು ಹೋಗಿದ್ದೆ. ಒಂದು ಬಾರಿ ಸಿನಿಮಾ ಪ್ರದರ್ಶನ ಆರಂಭಿಸಿದರೆ 15 ದಿನಗಳ ಗಟ್ಟಲೆ ನಡೆಯುತ್ತಿತ್ತು. ರಾಜಕುಮಾರ ಅವರ ಅಭಿನಯ ಅಷ್ಟು ತೀವ್ರವಾಗಿತ್ತು. ಈಗಲೂ ಸುಮಾರು 20 ಕ್ಕೂ ಹೆಚ್ಚು ಚಲನಚಿತ್ರ ಪರದೆಗಳನ್ನು ಹೊಂದಿದ್ದೇನೆ. ನಾನು ಬಿಟ್ಟರೂ ಚಲನಚಿತ್ರ ರಂಗ ನಮ್ಮನ್ನು ಬಿಡುತ್ತಿಲ್ಲ” ಎಂದರು.

“ತಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದವರಲ್ಲಿ ಪುನೀತ್ ರಾಜಕುಮಾರ್ ಒಬ್ಬರು. ಮಹಾತ್ಮ ಗಾಂಧಿ ಅವರು ಒಂದು ಮಾತು ಹೇಳುತ್ತಾರೆ. ನಿಮ್ಮನ್ನ ನೀವು ನಿಯಂತ್ರಣ ಮಾಡಿಕೊಳ್ಳಬೇಕಾದರೆ ಮೆದುಳನ್ನು ಬಳಸಿ ಇತರರನ್ನು ನಿಯಂತ್ರಿಸಬೇಕಾದರೆ ಹೃದಯವನ್ನು ಬಳಸಿ. ಹೃದಯವಂತಿಕೆಯಿಂದ ಪುನೀತ್ ರಾಜಕುಮಾರ್ ಅವರು ಕೆಲಸ ಮಾಡಿದರು. ಇದನ್ನು ಮುಂದುವರೆಸಿಕೊಂಡು ಹೋಗಲು ಆಪ್ ಮುಖಾಂತರ ಹೊಸ ಹೆಜ್ಜೆ ಇಡಲಾಗಿದೆ” ಎಂದು ಹೇಳಿದರು.

“ಎಐ ಮೂಲಕ ಹೊಸ ಹೆಜ್ಜೆಯನ್ನು ಇಟ್ಟಿದ್ದೀರಿ. ಮುಂದಿನ‌ ಪೀಳಿಗೆ ಹೆಚ್ಚು ತಂತ್ರಜ್ಞಾನದ ಮೂಲಕ ಅವಲಂಭಿತವಾಗಿದೆ. ಭವಿಷ್ಯದಲ್ಲಿ ಎಲ್ಲವೂ ಸಹ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮುಖಾಂತರವೇ ನಡೆಯಲಿದೆ ಎನಿಸುತ್ತಿದೆ. ಉದಾಹರಣೆಗೆ ನನ್ನ ಕಾರ್ಯದರ್ಶಿಗೆ ಕರೆ ಮಾಡಿ ಭಾಷಣ ಕಳಿಸುವಂತೆ ಕೇಳಿದೆ. ಪಕ್ಕದಲ್ಲಿದ್ದ ನನ್ನ ಮಗಳು ಇಷ್ಟೊಂದು ಕಷ್ಡ ಪಡುವುದು ಬೇಡ, ಚಾಟ್ ಜಿಪಿಟಿಯಲ್ಲಿ ನೀನು ಕೇಳಿದ ಮಾಹಿತಿ ದೊರೆಯುತ್ತದೆ ಎಂದು ಹೊಸ ವಿದ್ಯೆ ಕಲಿಸಿಕೊಟ್ಟಳು” ಎಂದರು.

“ಸರ್ಕಾರದಿಂದ ಎಲ್‌ ಇಡಿ ಬಲ್ಬ್ ನೀಡುವ ಯೋಜನೆಗೆ ಪುನೀತ್ ಅವರನ್ನೇ ರಾಯಭಾರಿಯನ್ನಾಗಿ ಮಾಡಲಾಗಿತ್ತು. ಅವರು ಪ್ರೀತಿಯಿಂದ ನನ್ನ ಆಹ್ವಾನ ಒಪ್ಪಿಕೊಂಡಿದ್ದರು. ನಾನು ತಂತ್ರಜ್ಞಾನದಿಂದ ದೂರ ಇದ್ದೇನೆ.‌ ಅದರ ಬಗ್ಗೆ ಅರಿವಿದೆ, ಆದರೆ ಬಳಸುವ ಪ್ರಮೇಯ ಬಂದಿಲ್ಲ. ಪ್ರತಿದಿನವೂ ಹೊಸ ವಿಚಾರಗಳು ಬರುತ್ತಲೇ ಇರುತ್ತವೆ.  ಟಿವಿಯನ್ನು ಆನ್ ಮಾಡಲು ಸಹ ಮಕ್ಕಳ ಅಥವಾ ಹೆಂಡತಿಯ ಸಹಾಯ ಕೇಳುತ್ತೇನೆ. ಕೇವಲ ಒಂದು ಬಟನ್ ಒತ್ತಿದರೆ ಇನ್ನೆಲ್ಲೋ ಸ್ಪೋಟವಾಗುವ ತಂತ್ರಜ್ಞಾನ ಯುದ್ದದಲ್ಲಿ ಬಳಕೆಯಾಗುತ್ತಿದೆ” ಎಂದು ಹೇಳಿಕೊಂಡಿರು.

“ರಾಮಾಯಣ ಮತ್ತು ಮಹಾಭಾರತವನ್ನು ಈಗಲೂ ನಾವು ಓದುತ್ತೇವೆ ಬಳಸುತ್ತೇವೆ. ರಾಜಕಾರಣದಿಂದ ಹಿಡಿದು ಶಿಕ್ಷಣಕ್ಕೂ ಇದರ ಮಹತ್ವ ಬೇಕಾಗಿದೆ. ನಮ್ಮ ಬಾಲ್ಯಕಾಲದಲ್ಲಿ ದೂರದರ್ಶನದಲ್ಲಿ ಮಹಾಭಾರತ ಸೀರಿಯಲ್ ಅನ್ನು ತೋರಿಸುತ್ತಿದ್ದರು. ಈಗ ಹೊಸ ತಂತ್ರಜ್ಞಾನದ ಮೂಲಕವೂ ತೋರಿಸುತ್ತಿದ್ದಾರೆ. ಆದರೆ ಎರಡು ಹೇಳುವ ಆಚಾರ ವಿಚಾರ ಒಂದೇ” ಎಂದು ತಿಳಿಸಿದರು.

“ಈ ಕಾರ್ಯಕ್ರಮದ ಬಗ್ಗೆ ತಿಳಿದಾಗ ಇದರಲ್ಲಿ ವಿಶೇಷತೆ ಇದೆ ಎಂದು ಕಾರ್ಯಕ್ರಮಕ್ಕೆ ಬರಲು ಒಪ್ಪಿದೆ. ನಾನು ಡಿಸಿಎಂ ಆಗಿ ಈ ಕಾರ್ಯಕ್ರಮಕ್ಕೆ ಬಂದಿಲ್ಲ ಈ ಕುಟುಂಬದ ಸದಸ್ಯನಾಗಿ ಬಂದಿದ್ದೇನೆ ಬಂದಿದ್ದೇನೆ. ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನ ಸಂಪದ, ಜ್ಞಾನ ಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತ. ಎಲ್ಲರಿಗೂ ಶುಭವಾಗಲಿ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಹೊಸ ಪೀಳಿಗೆಗೆ ಹೊಸ ವಿಚಾರ ತಲುಪಿಸಬೇಕು, ತಾನು ಬೆಳೆದು ಬಂದ ಹಾದಿ ಬಲಿಷ್ಠವಾಗಿ ಬೆಳೆಸಲು ಪುನೀತ್ ಅವರಿಗೆ ದೃಢವಾದ ಸಂಕಲ್ಪ ಇತ್ತು. ಸ್ಯಾಂಡಲ್ ವುಡ್ ಲೋಕದಲ್ಲಿರುವ ಜನರಿಗೆ ಸಿನಿಮಾ ರಂಗದಲ್ಲಿ ಬೆಳೆಯಲು ಆಸಕ್ತಿ ಇರುವವರಿಗೆ ಒಂದು ವೇದಿಕೆಯಾಗಿ ಈ ಆ್ಯಪ್ ರೂಪುಗೊಂಡಿದೆ ಎಂದರು.

Related Posts

Leave a Reply

Your email address will not be published. Required fields are marked *