ಕಂತೆ ಕಂತೆ ನೋಟು ಹಿಡ್ಕೊಂಡು ಅದನ್ನು ಎಸೆಯುತ್ತ ರೀಲ್ಸ್ ಮಾಡಿ ಇನ್ಸ್ ಸ್ಟಾ ಗ್ರಾಮ್ ನಲ್ಲಿ ಸ್ಟೋರಿ ಅಪ್ಲೋಡ್ ಮಾಡಿ ಬಿಲ್ಡಪ್ ಕೊಡುತ್ತಿದ್ದ ಶೋಕಿವಾಲನ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಫಾಲೋ ಮಾಡಿದವ್ರಿಗೆ, ಟೆಲಿಗ್ರಾಮ್ ಪೇಜ್ ಜಾಯಿನ್ ಆದರವರಿಗೆ ದುಡ್ಡು ಕೊಡ್ತೀನಿ, ದುಡ್ಡು ತಗೊಂಡು ಜಾಲಿ ಮಾಡಿ ಎಂದು ಅರುಣ್ ಕಟಾರೆ ಎಂಬಾತ ದುಡ್ಡು ಎಸೆದಿರುವ ವೀಡಿಯೊ ಅಪ್ಲೋಡ್ ಮಾಡಿದ್ದಾನೆ.
ಚಿತ್ರದುರ್ಗ ಮೂಲದ ಅರುಣ್ ಕಟಾರೆ ಈ ಹಿಂದೆ ಚಿತ್ರದುರ್ಗದಲ್ಲಿ ಸುಲಿಗೆ ಕೇಸ್ ನಲ್ಲಿ ಜೈಲು ಪಾಲಾಗಿದ್ದ, ಬಳಿಕ ಬೆಂಗಳೂರಿನ ಕೊತ್ತನೂರು ಠಾಣೆಯಲ್ಲಿ ಕೂಡ ಪ್ರಕರಣ ದಾಖಲಾಗಿತ್ತು.
ಹುಡುಗನನ್ನು ಬೆದರಿಸಿ ಚಿನ್ನಾಭರಣ ಸುಲಿಗೆ ಮಾಡಿದ್ದ ಆರೋಪದಲ್ಲಿ ಕೂಡ 2023ರಲ್ಲಿ ಬಂಧಿತನಾಗಿದ್ದ. ಬಾಲಕನಿಗೆ ಬಲವಂತವಾಗಿ ಸಿಗರೇಟ್ ಕೊಟ್ಟು ಡ್ರಿಂಕ್ಸ್ ಮಾಡಿಸಿ ಫೋಟೋ ತೆಗೆದು ಬೆದರಿಸಿ 35 ಲಕ್ಷ ಮೌಲ್ಯದ 656 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದ್ದ. ಈ ಕೇಸ್‌ನಲ್ಲಿ ಆತನ ಇಬ್ಬರು ಸಹೋದರರು ಕೂಡ ಆರೋಪಿಗಳಾಗಿದ್ದರು.
ಜಾಮೀನಿನ ಮೇಲೆ ಹೊರಬಂದಿದ್ದ ಅರುಣ್ ಮೇಲೆ ಮತ್ತೊಂದು ವಂಚನೆ ಕೇಸ್ ದಾಖಲಾಗಿತ್ತು. ಪರಿಚಯಸ್ಥರೊಬ್ಬರ ಬಳಿ 3.5 ಲಕ್ಷ ಸಾಲ ಪಡೆದು ವಂಚಿಸಿದ್ದರ ಬಗ್ಗೆ 2023ರಲ್ಲೇ ಚಿತ್ರದುರ್ಗ ನಗರ ಠಾಣೆಯಲ್ಲೇ ಪ್ರಕರಣ ದಾಖಲಾಗಿತ್ತು. ಬೆಂಗಳೂರಿನಲ್ಲಿ ರೀಲ್ಸ್ ಗಾಗಿ ಗನ್ ಹಿಡ್ಕೊಂಡು ಶೋಕಿ ಮಾಡಿ ಜೈಲು ಪಾಲಾಗಿದ್ದ. ಈಗ ಮತ್ತೆ ಅದೇ ಚಾಳಿ ತೋರಿ ದ್ದಾನೆ. ಆತ ನೋಟುಗಳ ಕಂತೆ ಬಿಸಾಡಿರುವ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.