ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆತನ ಸ್ನೇಹಿತ ಅಲ್ಲೇ ಬಿಟ್ಟು ಪರಾರಿಯಾಗಿದ್ದು, ಸಾರ್ವಜನಿಕರು ಕೂಡ ನೆರವಿಗೆ ಧಾವಿಸದೆ ಬಿಟ್ಟ ಪರಿಣಾಮ ಆತ ರಾತ್ರಿಯಿಡೀ ಒದ್ದಾಡಿ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಘಟನೆಯೊಂದು ಮೈಕೋ ಲೇಔಟ್ ಸಂಚಾರಿ ಠಾಣೆ ವ್ಯಾಪ್ತಿಯ KMF ಕಚೇರಿ ಮುಂದೆ ನಡೆದಿದೆ.
ಈ 30-35 ವರ್ಷದೊಳಗಿನ ನತದೃಷ್ಟ ವ್ಯಕ್ತಿಯು ಗೂಡ್ಸ್ ವಾಹನದಲ್ಲಿ ಸ್ನೇಹಿತನ ಜೊತೆ ಬರುತ್ತಿದ್ದಾಗ ಅಪಘಾತವಾಗಿ ವಾಹನ ಸಂಪೂರ್ಣ ಪಲ್ಟಿಯಾಗಿದೆ. ಘಟನೆಯಲ್ಲಿ ವ್ಯಕ್ತಿ ತೀವ್ರ ಗಾಯಗೊಂಡಿದ್ದು, ಸ್ಥಳೀಯರು ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು KMF ನ ಫುಟ್ ಪಾತ್ ಮೇಲೆ ಕೂರಿಸಿ ಹೋಗಿದ್ದರು. ಗಾಯಗೊಂಡು ಒದ್ದಾಡುತ್ತಿದ್ದ ವ್ಯಕ್ತಿ ಕೆಲ ಹೊತ್ತಿನ ನಂತರ ಪ್ರಜ್ಞೆ ತಪ್ಪಿದ್ದ. ಅದನ್ನು ನೋಡಿ ಭಯಗೊಂಡು ಗೂಡ್ಸ್ ವಾಹನ ಚಾಲಕ ಪರಾರಿಯಾಗಿದ್ದ.
ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸುವ ಮನಸ್ಸು ಮಾಡಿದ್ದಿದ್ದರೆ ಆ ವ್ಯಕ್ತಿಯ ಜೀವ ಉಳಿಯುತ್ತಿತ್ತು. ಸದ್ಯ ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿರುವ ಮೈಕೋ ಲೇಔಟ್ ಸಂಚಾರಿ ಪೊಲೀರು ಗೂಡ್ಸ್ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕಬ್ಬಿಣದ ಗೇಟ್ ಬಿದ್ದು ಕೈಗಾದ ಸಿಐಎಸ್ಎಫ್ ಯೋಧ ಸಾವು
ಕಾರವಾರ ಕೈಗಾ ಅಣು ವಿದ್ಯುತ್ ಸ್ಥಾವರದ ಅಣು ತ್ಯಾಜ್ಯ ಘಟಕದ ಕಾವಲು ಸಿಬ್ಬಂದಿಯಾಗಿರುವ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆಯ ಹೆಡ್ಕಾನ್ಸ್ಟೇಬಲ್ ಮೈಮೇಲೆ ಕಬ್ಬಿಣದ ಗೇಟ್ ಬಿದ್ದು ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ಶೇಖರ್ ಭೀಮರಾವ್ ಜಗದಾಲೆ (48) ಮೃತಪಟ್ಟವರು. ಕಾವಲು ಕಾಯುತ್ತಿದ್ದಾಗ ಗೇಟ್ ತುಂಡಾಗಿ ಮೈಮೇಲೆ ಬಿದ್ದು, ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಎಸ್ಟಿಎಫ್ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಕೈಗಾದ ಕೆಜಿಎಸ್ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದಾರೆ. ಈ ಸಂಬಂಧ ಮಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


