ಬೆಂಗಳೂರಿನ ಕ್ಲಾರೆನ್ಸ್ ಪ್ರೌಢಶಾಲೆಯ 12ನೇ ತರಗತಿಯ ವಿದ್ಯಾರ್ಥಿ, ರಾಜ್ಯ ಮಟ್ಟದಲ್ಲಿ ಡೈವಿಂಗ್ ಚಾಂಪಿಯನ್ ಶಾಲೆಯ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ರಿಚರ್ಡ್ಸ್ ಟೌನ್‌ನ ಪಾಟರಿ ರಸ್ತೆಯಲ್ಲಿರುವ ಶಾಲೆಗೆ ವಿದ್ಯಾರ್ಥಿಯನ್ನು ಬಿಟ್ಟು ತಂದೆ ಕೆಲಸಕ್ಕೆ ಹೋದ 10 ನಿಮಿಷಗಳಲ್ಲಿ ಬೆಳಗ್ಗೆ 8.20ಕ್ಕೆ ಈ ದುರಂತ ಸಂಭವಿಸಿದೆ. ವಿದ್ಯಾರ್ಥಿ ಆರ್ಯನ್ ಮೋಸೆಸ್ ವ್ಯಾಸ್ ನನ್ನು ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಪಡೆಯುತ್ತಿದ್ದಾಗ ಆರ್ಯನ್ ಮೃತಪಟ್ಟಿದ್ದಾನೆ.
ಶಾಲಾ ಆವರಣದಲ್ಲಿರುವ ಸಿಸಿಟಿವಿ ಪರಿಶೀಲನೆ ನಡೆಸಿದಾಗ, ಆರ್ಯನ್ ಶಾಲಾ ಕಟ್ಟಡದ ಕ್ಯಾರಿ ಬ್ಲಾಕ್‌ನ ಎರಡನೇ ಮಹಡಿಯಿಂದ ಜಿಗಿದಿರುವುದು ಕಂಡುಬಂದಿದೆ. ಇದು ಆತ್ಮಹತ್ಯೆ ಎಂದು ಭಾವಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪುಲಿಕೇಶಿ ನಗರ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ,
ಬಾರ್ಕೂರಿನಲ್ಲಿ ಕಾಂಗ್ರೆಸ್ನ ಮಾಜಿ ಶಾಸಕನ ಪುತ್ರ ಆತ್ಮಹತ್ಯೆ
ಬ್ರಹ್ಮಾವರ ತಾಲೂಕಿನ ಬಾರ್ಕೂರಿನಲ್ಲಿ ಕಾಂಗ್ರೆಸ್ನ ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ರ ಸುದೀಪ್ ಭಂಡಾರಿ ರೈಲಿಗೆ ತಲೆಕೊಟ್ಟು ಪ್ರಾಣ ಕಳೆದುಕೊಂಡಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಸುದೀಪ್ ಭಂಡಾರಿ ಹೆಬ್ರಿಯಲ್ಲಿ ವೈನ್ ಶಾಪ್ ನಡೆಸುತ್ತಿದ್ದರು. ಮೃತರಿಗೆ ತಾಯಿ, ಒಬ್ಬ ಸಹೋದರ ಮತ್ತು ಒಬ್ಬ ಸಹೋದರಿ, ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ, ಬ್ರಹ್ಮಾವರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.