ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದಾದ್ಯಂತ ಪಿಯು ಉಪನ್ಯಾಸಕರು ನ. 7ರಂದು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಪಿಯು ಪರೀಕ್ಷಾ ವಿಭಾಗವನ್ನು ಪ್ರತ್ಯೇಕಗೊಳಿಸಬೇಕು, ಪಿಯು ಇಲಾಖೆಯಲ್ಲಿ ಪರೀಕ್ಷೆ ಮತ್ತು ಶೈಕ್ಷಣಿಕ ಸುಧಾರಣೆಗೆ ಅಕಾಡೆಮಿ ಕೌನ್ಸಿಲ್ ಸಮಿತಿ ರಚಿಸಬೇಕು ಎಂಬುದು ಅವರ ಬೇಡಿಕೆಯಾಗಿದೆ.
ಪಿಯು ಉಪನ್ಯಾಸಕರು 9 ಮತ್ತು 10ನೇ ತರಗತಿಗೂ ಪಾಠ ಮಾಡಲು ಅವಕಾಶವಾಗುವಂತೆ ಇಲಾಖೆ ತಿದ್ದುಪಡಿ ಮಾಡಿರುವ ನಿಯಮಾವಳಿ ಕಡತವನ್ನು ಶಿಕ್ಷಣ ಸಚಿವರು ತಿರಸ್ಕರಿಸಬೇಕು, ಕೆಪಿಎಸ್ ಶಾಲೆಗಳ ಆಡಳಿತ, ಆರ್ಥಿಕ ಅಧಿಕಾರವನ್ನು ಆಯಾ ಶಾಲೆಯ ಪಿಯು ಪ್ರಾಂಶುಪಾಲರಿಗೆ ನೀಡಬೇಕು, 2024-25ನೇ ಸಾಲಿಗೆ ಬಾಕಿ ಇರುವ 13.5 ಕೋಟಿ ರು. ಮೌಲ್ಯ ಮಾಪನ ಭತ್ಯೆ ಮತ್ತು ಸಂಭಾವನೆ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಸರ್ಕಾರಿ, ಅನುದಾನಿತ ಪಿಯು ಕಾಲೇ ಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಬೇಕು, ವಿದ್ಯಾರ್ಥಿ, ಉಪನ್ಯಾಸಕರ ಅನುಪಾತ ವನ್ನು 180:1ಕ್ಕೆ ಇಳಿಸಿ ಪ್ರತಿ ತರಗತಿಗೆ 45:1ರ ಅನುಪಾತಕ್ಕೆ ಮಾರ್ಪಡಿಸಬೇಕು, ಅನುದಾನಿತ ಉಪನ್ಯಾಸಕರಿಗೆ ಮತ್ತು ಬೋಧಕೇತರ ಕುಟುಂಬಕ್ಕೂ ನಗದು ರಹಿತ ಚಿಕಿತ್ಸಾ ಸೌಲಭ್ಯ ವಿಸ್ತರಿಸಬೇಕು, 2005ರ ಏ.1ರ ನಂತರ ಆಯ್ಕೆಯಾದ ಉಪನ್ಯಾಸಕರಿಗೆ ನಿಶ್ಚಿತ ಪಿಂಚಣಿ ಜಾರಿಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.


