ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಶಾಸಕ ಜನಾರ್ದನ ರೆಡ್ಡಿಯವರಿಗೆ ಸಮರ್ಪಕ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಆಗ್ರಹಿಸಿದ್ದಾರೆ. ಕರ್ನಾಟಕದಲ್ಲಿ ಕಾನೂನು- ಸುವ್ಯವಸ್ಥೆ ಕಾಪಾಡುವಲ್ಲಿ ಈ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಜನಾರ್ದನ ರೆಡ್ಡಿಯವರ ಮೇಲೆ ನಡೆದ ಹಲ್ಲೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ಕರ್ನಾಟಕದಲ್ಲಿ ಮಾದಕವಸ್ತು (ಡ್ರಗ್) ಮಾಫಿಯ ಹೆಚ್ಚಾಗಿದೆ. ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಕರ್ನಾಟಕದಲ್ಲಿ ಗೂಂಡಾರಾಜ್ಯ ತಾಂಡವವಾಡುತ್ತಿದೆ. ಕಾಂಗ್ರೆಸ್ ಪ್ರೇರಿತ ಗೂಂಡಾ ವ್ಯವಸ್ಥೆಯಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಶಾಸಕರೇ ಪೊಲೀಸ್ ಠಾಣೆಗೆ ತೆರಳಿ ಬೆದರಿಸಿ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಜನಾರ್ದನ ರೆಡ್ಡಿಯವರ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸುವುದಾಗಿ ಅವರು ತಿಳಿಸಿದ್ದಾರೆ. ಹಲ್ಲೆ ಆರೋಪಿಗಳನ್ನು ಮತ್ತು ಇದರ ಹಿಂದಿರುವ ದುಷ್ಟ ಶಕ್ತಿಗಳನ್ನು ತಕ್ಷಣವೇ ಬಂಧಿಸುವಂತೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಪರಮೇಶ್ವರ್ ಅವರನ್ನು ಆಗ್ರಹಿಸಿದ್ದಾರೆ.ಈ ಸಮಸ್ಯೆಯನ್ನು ಸಿದ್ದರಾಮಯ್ಯನವರು ತಕ್ಷಣವೇ ಬಗೆಹರಿಸಬೇಕು. ಇದಕ್ಕಾಗಿ ಜನಾರ್ದನ ರೆಡ್ಡಿಯವರಿಗೆ ಭದ್ರತಾ ವ್ಯವಸ್ಥೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಇಲ್ಲವಾದರೆ ಮುಂದೆ ಆಗುವ ಸಮಸ್ಯೆಗಳಿಗೆ ಸಿದ್ದರಾಮಯ್ಯರ ನೇತೃತ್ವದ ಸರಕಾರವೇ ಹೊಣೆ ಹೊರಬೇಕು ಎಂದು ಎಚ್ಚರಿಸಿದ್ದಾರೆ


