Menu

ಜೈಲಿನಲ್ಲಿ ಸೌಕರ್ಯ ನೀಡಿ: ಮಾನವ ಹಕ್ಕು ಆಯೋಗಕ್ಕೆ ದರ್ಶನ್‌ ಮನವಿ?

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಕಾರಾಗೃಹದಲ್ಲಿ ತನಗೆ ಸೌಲಭ್ಯಗಳನ್ನು ನೀಡುವಂತೆ ಕೋರಿ ಮಾನವಹಕ್ಕು ಆಯೋಗಕ್ಕೆ ಮನವಿ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಕರಣ ಸಂಬಂಧ ಈ ಹಿಂದೆ ಜೈಲು ಸೇರಿದ್ದ ದರ್ಶನ್‌, ಸಿಗರೇಟು ಸೇರಿದಂತೆ ಕೆಲವು ಸೌಲಭ್ಯಗಳನ್ನು ಅಕ್ರಮವಾಗಿ ಪಡೆದಿರುವುದು ವಿವಾದಕ್ಕೆ ಗ್ರಾಸವಾಗಿರುವ ಹಿನ್ನೆಲೆ ಈ ಬಾರಿ ಅಧಿಕಾರಿಗಳು ಕಟ್ಟುನಿಟ್ಟಾಗಿ ಜೈಲು ನಿಯಮ ಪಾಲನೆ ಮಾಡುತ್ತಿದ್ದಾರೆ.

ಜೈಲಿನಲ್ಲಿ ಸಾಮಾನ್ಯ ಸೌಕರ್ಯಗಳು ಸಿಗುತ್ತಿಲ್ಲವೆಂದು ದೂರಿರುವ ದರ್ಶನ್‌, ಜೈಲಧಿಕಾರಿಗಳು ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆಂದು ಆರೋಪಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ ತಮ್ಮ ‘ಹಕ್ಕು’ಗಳನ್ನು ದಕ್ಕಿಸಿಕೊಳ್ಳಲು ಮಾನವ ಹಕ್ಕು ಆಯೋಗದ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಬಿಸಿಲು ಚೆನ್ನಾಗಿ ಬರುವ ಬ್ಯಾರಕ್​​ಗೆ ವರ್ಗಾಯಿಸಿ ಹೆಚ್ಚುವರಿ ಹಾಸಿಗೆ, ದಿಂಬು ಮತ್ತು ಬೆಡ್​​ಶೀಟ್​​ಗಳು ಬೇಕೆಂದು ದರ್ಶನ ಈಗಾಗಲೇ ಅಧಿಕಾರಿಗಳು ಮತ್ತು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಆದರೆ ಜೈಲು ಅಧೀಕ್ಷಕರು ಅನುಮತಿ ನೀಡಿಲ್ಲ. ನ್ಯಾಯಾಲಯವು ಅಕ್ಟೋಬರ್ 9ಕ್ಕೆ ಆದೇಶವನ್ನು ಕಾಯ್ದಿರಿಸಿದೆ.

ಹೀಗಾಗಿ ದರ್ಶನ್ ಮಾನವ ಹಕ್ಕು ಆಯೋಗದ ಮೊರೆ ಹೋಗಲು ನಿರ್ಧಾರ ಮಾಡಿದ್ದಾರೆ. ಆಯೋಗಕ್ಕೆ ಪತ್ರ ಬರೆದು ತಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ದೂರು ನೀಡಲಿದ್ದಾರೆ. ಈ ವಿಚಾರದಲ್ಲಿ ದರ್ಶನ್ ತಮ್ಮ ವಕೀಲ ಸುನಿಲ್ ಅವರೊಟ್ಟಿಗೆ ಈಗಾಗಲೇ ಚರ್ಚೆ ಮಾಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ದರ್ಶನ್ ಸೇರಿದಂತೆ ಒಟ್ಟು ಏಳು ಮಂದಿಯ ಜಾಮೀನು ರದ್ದು ಮಾಡಿ ಆದೇಶ ನೀಡಿದೆ. ಪೊಲೀಸರು ಇನ್ನೂ ಐದು ಆರೋಪಿಗಳ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆರೋಪಿಗಳು ನೋಟಿಸ್‌ ಪಡೆಯುತ್ತಿಲ್ಲ, ನೋಟಿಸ್ ಪಡೆದು ವಿಚಾರಣೆ ನಡೆದು ಜಾಮೀನು ರದ್ದಾದರೆ ಮತ್ತೆ ಜೈಲು ಸೇರುವ ಭಯ ಅವರನ್ನು ಕಾಡುತ್ತಿದೆ ಎನ್ನಲಾಗಿದೆ.

Related Posts

Leave a Reply

Your email address will not be published. Required fields are marked *