ನೇಪಾಳದಲ್ಲಿ ಸೋಷಿಯಲ್ ಮೀಡಿಯಾಗಳ ಬ್ಯಾನ್ ಹಿಂಪಡೆಯಲಾಗಿದ್ದರೂ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಂಡಿವೆ. ರಾಜಕೀಯ ಭ್ರಷ್ಟಾಚಾರ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಕೊರತೆ ಖಂಡಿಸಿ ನೇಪಾಳದ ನಾಗರಿಕರು ದಂಗೆ ಎದ್ದು ಪ್ರಧಾನಮಂತ್ರಿ ಕೆಪಿ ಶರ್ಮಾ ಒಲಿ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.
ಕಠ್ಮಂಡುವಿನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರಿದಿದ್ದು, ಪ್ರತಿಭಟನಾಕಾರರು ಪ್ರಧಾನಿ ಕೆಪಿ ಶರ್ಮಾ ಒಲಿ ಅವರ ಮನೆ ಮೇಲೆ ಕಲ್ಲು ತೂರಿದ್ದಾರೆ. ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಾಕಾ ರರು ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ನಾಗರಿಕರು ಪೊಲೀಸರೊಂದಿಗೆ ಘರ್ಷಣೆಯಲ್ಲಿ ನಿರತರಾಗಿದ್ದಾರೆ.
ನೇಪಾಳದ ಮಾಜಿ ಪ್ರಧಾನಿಗಳಾದ ಪುಷ್ಪ ಕಮಲ್ ದಹಾಲ್ ಅಲಿಯಾಸ್ ಪ್ರಚಂಡ, ಶೇರ್ ಬಹದ್ದೂರ್ ದೇವುಬಾ ಮತ್ತು ಇಂಧನ ಸಚಿವ ದೀಪಕ್ ಖಡ್ಕಾ ಅವರ ನಿವಾಸಗಳಿಗೂ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಕಠ್ಮಂಡು ಮತ್ತು ದೇಶದ ಇತರ ಭಾಗಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಪೊಲೀಸರು ಸಾವಿರಾರು ಜನರನ್ನು ಬಂಧಿಸಿದ್ದಾರೆ.
ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ ನೀಡಬೇಕಾದ ಒತ್ತಡದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಈಗಾಗಲೇ ಹಲವು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಒಲಿ ಆತಂಕವನ್ನು ಹೆಚ್ಚಿಸಿದೆ. ನೇಪಾಳದಲ್ಲಿ ಫೇಸ್‌ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಎಕ್ಸ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿ, ಪ್ರಧಾನಿ ಕೆಪಿ ಶರ್ಮಾ ಒಲಿ ಅವರ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಖಂಡಿಸಿ ಸಾವಿರಾರು ಯುವಕರು ಸೋಮವಾರ ಕಠ್ಮಂಡುವಿನಲ್ಲಿ ಪ್ರತಿಭಟನೆ ನಡೆಸಿದ್ದರು.
ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಮತ್ತು ಪ್ರತಿಭಟನಕಾರರ ನಡುವಿನ ಘರ್ಷಣೆಯಲ್ಲಿ 19 ಜನ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಒಲಿ ಸರ್ಕಾರ ಸಾಮಾಜಿಕ ಜಾಲತಾಣಗಳ ಮೇಲಿನ ನಿರ್ಬಂಧ ತೆರವು ಮಾಡಿದೆ. ಕೆಪಿ ಶರ್ಮಾ ಒಲಿ ರಾಜೀನಾಮೆಗೆ ಒತ್ತಡ ಹೆಚ್ಚಾಗಿದೆ.