ಇರಾನ್ ಸರ್ಕಾರದ ವಿರುದ್ಧ ಅಲ್ಲಿನ ನಾಗರಿಕರ ರಾಷ್ಟ್ರವ್ಯಾಪಿ ಪ್ರತಿಭಟನೆ ಆರಂಭವಾಗಿ 15 ದಿನಗಳಾಗಿದ್ದು, ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 116ಕ್ಕೆ ಏರಿಕೆಯಾಗಿದೆ. ಇಂಟರ್ನೆಟ್ ಸ್ಥಗಿತಗೊಂಡಿದ್ದು, ಫೋನ್ ಸಂಪರ್ಕಗಳು ಕಡಿತಗೊಂಡಿವೆ. 2,600 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆ ಹೇಳಿದೆ.
ಪ್ರತಿಭಟನೆಗಳಲ್ಲಿ ಭಾಗವಹಿಸುವವರನ್ನು ದೇವರ ಶತ್ರು ಎಂದು ಪರಿಗಣಿಸಲಾಗುತ್ತದೆ, ಇದು ಮರಣದಂಡನೆ ವಿಧಿಸಬಹುದಾದ ಕೃತ್ಯ, ಗಲಭೆಕೋರರಿಗೆ ಸಹಾಯ ಮಾಡಿದವರು ಕೂಡ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಇರಾನ್‌ನ ಅಟಾರ್ನಿ ಜನರಲ್ ಮೊಹಮ್ಮದ್ ಮೊವಾಹೆದಿ ಆಜಾದ್ ಎಚ್ಚರಿಕೆ ನೀಡಿದ್ದಾರೆ.
ಮತ್ತೊಂದೆಡೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ್ದಾರೆ. ಇರಾನ್ ಸ್ವಾತಂತ್ರ್ಯವನ್ನು ಎದುರು ನೋಡುತ್ತಿದೆ, ಹಿಂದೆಂದೂ ಕಾಣದ ರೀತಿ ಯುಎಸ್ಎ ಸಹಾಯ ಮಾಡಲು ಸಿದ್ಧವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
‘ನಿಮ್ಮದೇ ದೇಶದ ಜನರನ್ನು ಕೊಲ್ಲಬೇಡಿ’ ಎಂದು ಟೆಹ್ರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದಾರೆ. ಆದರೆ, ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರು ಟ್ರಂಪ್ ಎಚ್ಚರಿಕೆಯನ್ನು ಲೆಕ್ಕಿಸದೆ, ನಾವು ಹಿಂದೆ ಸರಿಯುವ ಮಾತೇ ಇಲ್ಲ, ಪ್ರತಿಭಟನಾಕಾರರು ಟ್ರಂಪ್ ಅವರನ್ನು ಮೆಚ್ಚಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇರಾನ್ ಸೇನೆಯು ಸಾರ್ವಜನಿಕ ಆಸ್ತಿ ರಕ್ಷಣೆ ಹೆಸರಲ್ಲಿ ಬೀದಿಗಿಳಿಯಲು ಸಜ್ಜಾಗಿದೆ. ಡಿಸೆಂಬರ್ 2025ರ ಅಂತ್ಯದಲ್ಲಿ ಇರಾನ್ ಕರೆನ್ಸಿ ಡಾಲರ್ ಎದುರು 1.4 ಮಿಲಿಯನ್‌ನಷ್ಟು ಕುಸಿತ ಕಂಡಿದ್ದೇ ಈ ಬಿಕ್ಕಟ್ಟಿಗೆ ಮೂಲ ಕಾರಣ. ಇರಾನ್‌ನ ಪದಚ್ಯುತ ಷಾ ಅವರ ಪುತ್ರ ರೆಜಾ ಪಹ್ಲವಿ ಅವರು ಅಮೆರಿಕದಲ್ಲಿದ್ದು, ಬರಿ ಬೀದಿಗಿಳಿದು ಕೂಗಾಡುವುದಲ್ಲ, ಬದಲಾಗಿ ಇರಾನ್‌ನ ಪ್ರಮುಖ ನಗರಗಳ ಕೇಂದ್ರಗಳನ್ನು ಮತ್ತು ಸರ್ಕಾರಿ ಕಚೇರಿಗಳನ್ನು ಪ್ರತಿಭಟನಾಕಾರರು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.


