Menu

ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ ವಿರೋಧಿಸಿ ಫೆ.12ರಂದು ಪ್ರತಿಭಟನೆ

ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಸಂಯುಕ್ತ ಕಿಸಾನ್‌ ಮೋರ್ಚಾ ಸೇರಿ ಹಲವು ಸಂಘಟನೆಗಳು ಫೆ.12ರಂದು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿವೆ.

ಭಾರತ ಸರ್ಕಾರವು ರೈತರ ಹಿತರಕ್ಷಣೆ ಮಾಡಲಿದ್ದೇವೆ ಎಂದು ಭರವಸೆ ಕೊಟ್ಟಿದ್ದು, ಈ ಒಪ್ಪಂದವು ಅಮೆರಿಕದ ಕೃಷಿ ಕ್ಷೇತ್ರಕ್ಕೆ ನಮ್ಮ ಮಾರುಕಟ್ಟೆಯನ್ನು ಮುಕ್ತ ಮಾಡಿದೆ. ಅಮೆರಿಕದ ಒತ್ತಡಕ್ಕೆ ಸರ್ಕಾರ ಮಣಿದಿದೆ. ಹೀಗಾಗಿ ಫೆ.12ರಂದು ಪ್ರತಿಭಟನೆ ನಡೆಸುವುದಾಗಿ ಸಂಘಟನೆಗಳು ಹೇಳಿವೆ.

ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ತಲೆಬಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದಿಂದ ತೈಲ ಖರೀದಿಯನ್ನು ಕೈಬಿಟ್ಟು ಅಮೆರಿಕ ಮತ್ತು ವೆನಿಜುವೆಲಾ ದೇಶಗಳಿಂದ ತೈಲ ಖರೀದಿಸಲು ಒಪ್ಪಿಕೊಂಡಿರುವುದು ಈ ಒಪ್ಪಂದದ ಮುಖ್ಯಾಂಶ ವಾಗಿದೆ. ಈಗ ಈ ಆಮದು ಸುಂಕವನ್ನು ರದ್ದುಗೊಳಿಸಿದರೆ ದೇಶದ ಮಾರುಕಟ್ಟೆಗಳಲ್ಲಿ ಅಮೆರಿಕದ ಅಗ್ಗದ ದರದ ಆಹಾರಧಾನ್ಯ, ಹಣ್ಣು, ತರಕಾರಿ ಮತ್ತು ಡೇರಿ ಉತ್ಪನ್ನಗಳು ಲಗ್ಗೆ ಇಡಲಿದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಮುಂದಿನ ದಿನಗಳಲ್ಲಿ ಈ ಒಪ್ಪಂದ 140 ಕೋಟಿ ಭಾರತೀಯರಿಗೆ, ಅದರಲ್ಲಿಯೂ ಮುಖ್ಯವಾಗಿ ದೇಶದ 72 ಕೋಟಿ ರೈತರ ಪಾಲಿಗೆ ಮರಣಶಾಸನ ಆಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಭಾರತ ಮತ್ತು ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ಪ್ರಕಾರ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ವಿಧಿಸಲಾಗುತ್ತಿರುವ ಶೇ.50 ತೆರಿಗೆಯನ್ನು ಅಮೆರಿಕವು ಶೇ.18ಕ್ಕಿಳಿಸಿದರೆ, ಅಮೆರಿಕದ ಆಹಾರ, ಯಂತ್ರೋಪಕರಣಗಳು, ಕೃಷಿ ಉತ್ಪನ್ನಗಳು ಸೇರಿ ಹಲವು ಉತ್ಪನ್ನಗಳ ಆಮದಿನ ಮೇಲಿನ ತೆರಿಗೆಯನ್ನು ಭಾರತವು ಸಂಪೂರ್ಣ ಕಡಿತ ಅಥವಾ ಕಡಿಮೆ ಮಾಡಲಿದೆ.

ರಷ್ಯಾದಿಂದ ನೇರವಾಗಿ ಅಥವಾ ಪರೋಕ್ಷವಾಗಿ ತೈಲ ಖರೀದಿ ಮಾಡುವುದನ್ನ ನಿಲ್ಲಿಸಲು ಭಾರತ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಶೇ. 25 ದಂಡದ ರೂಪದ ಸುಂಕನ್ನ ತೆಗೆದುಹಾಕಲಾಗಿದೆ ಎಂದು ಡೊನಾಲ್ಡ್‌ ಟ್ರಂಪ್‌ ಸಹಿ ಮಾಡಿದ ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತವು ಅಮೆರಿಕದ ಇಂಧನ ಉತ್ಪನ್ನಗಳನ್ನ ಖರೀದಿಸುವುದಾಗಿಯೂ ಹೇಳಿದೆ. ಮುಂದಿನ 10 ವರ್ಷಗಳಲ್ಲಿ ರಕ್ಷಣಾ ಸಹಕಾರವನ್ನ ವಿಸ್ತರಿಸಲು  ಅಮೆರಿಕದೊಂದಿಗೆ ಒಂದು ಚೌಕಟ್ಟಿಗೆ ಬದ್ಧವಾಗಿದೆ ಎಂದು ಇದೇ ಆದೇಶದಲ್ಲಿ ತಿಳಿಸಲಾಗಿದೆ.  ಭಾರತ ರಷ್ಯಾದಿಂದ ಕಚ್ಚಾತೈಲ ಖರೀದಿ ಮಾಡುವ ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಫಂಡಿಂಗ್‌ ಮಾಡುತ್ತಿದೆ ಎಂದು ಟ್ರಂಪ್‌ ಈ ಹಿಂದೆ ಆರೋಪಿಸಿ ಸುಂಕ 50%ಕ್ಕೆ ಏರಿಸಿದ್ದರು. ಇದೀಗ ಮೂಲ ಸುಂಕವನ್ನು 18%ಗೆ ಇಳಿಸಿದ್ದು, ಹೆಚ್ಚುವರಿ 25% ಸುಂಕ ತೆಗೆದುಹಾಕಿದ್ದಾರೆ.

Related Posts

Leave a Reply

Your email address will not be published. Required fields are marked *