Menu

ಡ್ರಗ್ಸ್ ಜಾಲ ಖಂಡಿಸಿ ಮೈಸೂರಿನಲ್ಲಿ ಹೋರಾಟ: ವಿಜಯೇಂದ್ರ

vijayenrda

ಬೆಂಗಳೂರು: ಮಾದಕವಸ್ತು ಜಾಲದ ಕುರಿತು ಗಮನ ಸೆಳೆಯಲು ಮೈಸೂರಿನಲ್ಲಿ ಹೋರಾಟ ರೂಪಿಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ಕೊಟ್ಟರು. ಮೈಸೂರು ಮುಖ್ಯಮಂತ್ರಿಗಳ ತವರು ಜಿಲ್ಲೆ. ಅಲ್ಲಿದ್ದ ಮಾದಕವಸ್ತು ಕಾರ್ಖಾನೆಯನ್ನು ಮಹಾರಾಷ್ಟ್ರದ ಪೊಲೀಸರು ಬಂದು ಮುಚ್ಚಿಸಬೇಕಾಯಿತು. ಮೈಸೂರು ಒಳಗೊಂಡಂತೆ ರಾಜ್ಯಾದ್ಯಂತ ಡ್ರಗ್ ಮಾಫಿಯ ಹರಡಿದೆ. ಇವನ್ನು ಪರಿಗಣಿಸಿ ಮೈಸೂರಿನಲ್ಲಿ ಹೋರಾಟ ಮಾಡಲು ತೀರ್ಮಾನ ಆಗಿದೆ ಎಂದು ತಿಳಿಸಿದರು. ಬಳ್ಳಾರಿ ಪಾದಯಾತ್ರೆ ಕುರಿತು ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ನಿನ್ನೆ ನಮ್ಮ ಹಿರಿಯ ಶಾಸಕ ವಿಶ್ವನಾಥ್ ಅವರ ತಂಡವು ಕೋಗಿಲು ಸತ್ಯಶೋಧನೆ ಕುರಿತು ಪತ್ರಿಕಾಗೋಷ್ಠಿ ಮಾಡಿದೆ ಎಂದರು. ಧರ್ಮಸ್ಥಳದ ವಿಚಾರದಲ್ಲಿ ಮುಖ್ಯಮಂತ್ರಿಗಳೇ ಮುತುವರ್ಜಿ ವಹಿಸಿ ಕೆಲವು ನಗರ ನಕ್ಸಲರ ಮಾತು ಕೇಳಿ ಎಸ್‍ಐಟಿ ರಚಿಸಿದ್ದರು. ಧರ್ಮಸ್ಥಳದ ಶ್ರೀ ಕ್ಷೇತ್ರಕ್ಕೆ ಅಪಚಾರ ಎಸಗುವ ಕೆಲಸ ಮಾಡಿದ್ದರು ಎಂದು ಆಕ್ಷೇಪಿಸಿದರು. ಬಿಜೆಪಿ ಹೋರಾಟ ಮಾಡಿತ್ತು. ಗುಂಡಿ ಅಗೆದಾಗ ಏನೂ ಸಿಗದ ಸಂದರ್ಭದಲ್ಲಿ ಬುರುಡೆ ಗ್ಯಾಂಗ್ ಮೇಲೆ ಆರೋಪ ಮಾಡಿ ಹಿಂದೆ ಸರಿಯುವ ಕೆಲಸ ಸಿದ್ದರಾಮಯ್ಯನವರ ಸುತ್ತಲಿರುವವರು ಮಾಡಿದ್ದಾರೆ ಎಂದು ದೂರಿದರು. ನಾವು ಹೋರಾಟ ಮಾಡದೇ ಇದ್ದರೆ ಧರ್ಮಸ್ಥಳದ ಶ್ರೀ ಕ್ಷೇತ್ರಕ್ಕೆ ಅಪಚಾರ ಮಾಡುತ್ತಿದ್ದರು ಎಂದು ತಿಳಿಸಿದರು.

ಕೋಗಿಲು ವಿಚಾರದಲ್ಲಿ ಅಕ್ರಮ ವಲಸಿಗರ ಮನೆ ಕೆಡವಲಾಗಿತ್ತು. ಬಳಿಕ ಕೆ.ಸಿ.ವೇಣುಗೋಪಾಲ್ ಹೇಳಿದರು; ಬೆದರಿಕೆ ಹಾಕಿದರೆಂಬ ಕಾರಣ, ಕೇರಳ ವಿಧಾನಸಭಾ ಚುನಾವಣೆ ಬರುವ ನೆಪದಿಂದ ತೇಪೆ ಹಚ್ಚುವ ಕೆಲಸ ಮಾಡಲು ಸಿದ್ದರಾಮಯ್ಯರ ಸರಕಾರ ಹೊರಟಿತ್ತು ಎಂದು ಆರೋಪಿಸಿದರು. ಲಕ್ಷಾಂತರ ಬಡವರು ಮನೆಗೆ ಅರ್ಜಿ ಹಾಕಿದ್ದರೂ ಅವರಿಗೆ ಮನೆ ಕೊಟ್ಟಿಲ್ಲ ಎಂದು ಬಿಜೆಪಿ ಗಮನ ಸೆಳೆದಿದೆ. ಅಕ್ರಮ ವಲಸಿಗರಿಗೆ ಅವಕಾಶ ಕೊಡುವುದಿಲ್ಲ; ತೆರಿಗೆದಾರರ ಹಣ ಪೋಲಾಗಲು ಬಿಡುವುದಿಲ್ಲ ಎಂದು ಬಿಜೆಪಿ, ನಮ್ಮ ಸ್ಥಳೀಯ ನಾಯಕರು ಇದನ್ನು ಗಟ್ಟಿಯಾಗಿ ತೆಗೆದುಕೊಂಡ ಬಳಿಕ ಅಕ್ರಮ ವಲಸಿಗರನ್ನು ರಾತ್ರೋರಾತ್ರಿ ಕಾಂಗ್ರೆಸ್ ಮುಖಂಡರೇ ಎತ್ತಂಗಡಿ ಮಾಡಿದ್ದಾರೆಂಬ ಮಾಹಿತಿ ಬರುತ್ತಿದೆ ಎಂದರು.

ನಮ್ಮ ಮುಖಂಡರು ಹೋದಾಗ ಅಲ್ಲಿ ಬೇರೆ ಕ್ಷೇತ್ರದ ಬಾಡಿಗೆ ವ್ಯಕ್ತಿಗಳನ್ನು ಬಿಟ್ಟ ಮಾಹಿತಿ ಸಿಗುತ್ತಿದೆ ಎಂದು ವಿವರಿಸಿದರು. ಈ ರೀತಿಯ ಡ್ರಾಮವನ್ನು ನಾವು ಒಪ್ಪುವುದಿಲ್ಲ ಎಂದರು. ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Related Posts

Leave a Reply

Your email address will not be published. Required fields are marked *