“ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇ.ಡಿ. ಕಾಂಗ್ರೆಸ್ ಮುಖಂಡರ ಆಸ್ತಿಮುಟ್ಟುಗೋಲು ಹಾಕಿಕೊಂಡು ಆರೋಪಪಟ್ಟಿ ಸಲ್ಲಿಸಿರುವುದನ್ನು ನಾವು ಖಂಡಿಸುತ್ತೇವೆ, ಇದರ ವಿರುದ್ಧ ಪ್ರತಿಭಟನೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಶಿವಕುಮಾರ್ ಅವರು ಕುಮಾರಪಾರ್ಕ್ ನಲ್ಲಿರುವ ಸರ್ಕಾರಿ ನಿವಾಸದಲ್ಲಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. “ನ್ಯಾಷನಲ್ ಹೆರಾಲ್ಡ್ ಜವಾಹರ್ ಲಾಲ್ ನೆಹರು ಅವರು ಹುಟ್ಟುಹಾಕಿದ ಸಂಸ್ಥೆ. ಅವರ ಕುಟುಂಬ ಇದನ್ನು ಎಂದೂ ವೈಯಕ್ತಿಕವಾಗಿ ಬಳಸಿಕೊಂಡಿಲ್ಲ. ಅವರು ಈ ಸಂಸ್ಥೆಯಿಂದ ಆಸ್ತಿ ಮಾಡಿಕೊಂಡಿಲ್ಲ. ಅನೇಕರ ಸಹಕಾರದಿಂದ ಈ ಸಂಸ್ಥೆ ನಡೆಸಿಕೊಂಡು ಬರಲಾಗಿದೆ. ಅನಗತ್ಯವಾಗಿ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ. ನಾವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹಿರಂಗ ಪ್ರತಿಭಟನೆ ಮಾಡುತ್ತೇವೆ” ಎಂದು ತಿಳಿಸಿದರು.
ಕಾಂಗ್ರೆಸ್ ನಿಯಂತ್ರಿತ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ವಿರುದ್ಧದ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ಜಪ್ತಿ ಮಾಡಲಾಗಿರುವ 661 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ನೋಟಿಸ್ ಜಾರಿ ಮಾಡಿದೆ.
2014ರಲ್ಲಿ ಡಾ. ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಖಾಸಗಿ ದೂರಿನ ಮೇರೆಗೆ ಇಡಿ ತನಿಖೆ 2021ರಲ್ಲಿ ಔಪಚಾರಿಕವಾಗಿ ಪ್ರಾರಂಭಗೊಂಡಿತ್ತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಕ್ರಿಮಿನಲ್ ಪಿತೂರಿ ನಡೆಸಿ ಎಜೆಎಲ್‌ನ 2,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಯಂಗ್ ಇಂಡಿಯನ್ ಮೂಲಕ 50 ಲಕ್ಷ ರೂ.ಗೆ ಕಬಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಜಾರಿ ನಿರ್ದೇಶನಾಲಯ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
“ನಾಡಿದ್ದು, ಅಂದರೆ ಏ.17ರಂದು ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಚರ್ಚೆ ಮಾಡಿ ಆಸ್ತಿ ಮುಟ್ಟುಗೋಲು ವಿರುದ್ಧ ಪ್ರತಿಭಟನೆ ನಿಗದಿ ಮಾಡಲಾಗುವುದು” ಎಂದು ಹೇಳಿದರು.