ಬೆಳೆ ಹಾನಿ ಪರಿಹಾರ ವಿತರಣೆಯನ್ನು ಸರಳೀಕರಣಗೊಳಿಸಲು ಎನ್‌ಡಿಆರ್‌ಎಫ್ ಮಾರ್ಗಸೂಚಿಗಳಲ್ಲಿ ಬದಲಾವಣೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ರೈತರಿಗೆ ಭರವಸೆ ನೀಡಿದರು.
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ರೈತರ ಅಹವಾಲುಗಳನ್ನು ಆಲಿಸಿದ ಸಚಿವರು, ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಪರಿಹಾರ ವಿತರಣೆಗೆ ಹಣದ ಕೊರತೆ ಇಲ್ಲ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 38 ಕೋಟಿ ರೂ. ಇದೆ. ಜಂಟಿ ಸಮೀಕ್ಷೆ ಪ್ರಗತಿಯಲ್ಲಿದ್ದು, ತ್ವರಿತವಾಗಿ ಪೂರ್ಣಗೊಳಿಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೆಸಿಸಿ ಬ್ಯಾಂಕ್ ಇನ್ನೂ ವಿಭಜನೆ ಆಗಿಲ್ಲ. ಹೀಗಾಗಿ ರೈತರ ನಿರೀಕ್ಷೆ ಪ್ರಮಾಣದಲ್ಲಿ ಸಾಲ ಸಿಗುತ್ತಿಲ್ಲ. ಗದಗ, ಧಾರವಾಡ, ಹಾವೇರಿ ಜಿಲ್ಲೆಗಳ ರೈತರಿಗೆ ಬೆಳೆಸಾಲ ವಿತರಣೆಯಲ್ಲಿ ಸಮಾನ ನೀತಿ ಅನುಸರಿಸಬೇಕಾಗಿದೆ. ಆದರೂ ಸಹ ಜಿಲ್ಲೆ ಅರ್ಬನ್ ಬ್ಯಾಂಕುಗಳು, ಸೊಸೈಟಿಗಳು ಆರ್ಥಿಕವಾಗಿ ಸಧೃಡವಾಗಿರುವುದರಿಂದ ಹೀಗಾಗಿ ಕೃಷಿ ಸಾಲ ವಿತರಣೆಯಲ್ಲಿ ಜಿಲ್ಲೆಗೆ ಹೆಚ್ಚಿನ ಆದ್ಯನೆ ನೀಡಬೇಕು ಎಂದು ಕೆಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಮನವಿ ಮಾಡಲಾಗುವುದು ಎಂದರು.
ಕೆಸಿಸಿ ಬ್ಯಾಂಕ್ ಈಗ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿದೆ. ಬ್ಯಾಂಕ್ ವಿಭಜನೆ ಕಷ್ಟ ಎಂಬ ಅರಿವು ಇದೆ. ಆದರೂ ಸಹಜ ಇಂದಲ್ಲ ನಾಳೆ ಪ್ರತ್ಯೇಕ ಬ್ಯಾಂಕ್ ಸ್ಥಾಪನೆ ಆಗಲೇ ಬೇಕು. ಹೀಗಾಗಿ ಗದಗ ಮತ್ತು ಧಾರವಾಡ ಜಿಲ್ಲೆಗಳ ಮನವೊಲಿಸಿ ಬ್ಯಾಂಕ್ ವಿಭಜನೆಗೆ ಪ್ರಯತ್ನ ಮಾಡಲಾಗುವುದು. ದೇಶದಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವ ಏಕೈಕ ರಾಜ್ಯ ಕರ್ನಾಟಕ. ಎಲ್ಲ ಸರ್ಕಾರಗಳು ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆ ಮಾಡಿವೆ ಎಂದು ಮಾಹಿತಿ ನೀಡಿದರು.
ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗದಿರುವುದೇ ರೈತರ ಸಮಸ್ಯೆಗಳಿಗೆ ಕಾರಣ. ಯೋಗ್ಯ ಬೆಲೆ ಸಿಕ್ಕರೆ ರೈತರು ಯಾವುದೇ ನೆರವು ನಿರೀಕ್ಷೆ ಮಾಡುವುದಿಲ್ಲ. ಹೀಗಾಗಿ ಯೋಗ್ಯ ಬೆಲೆ ಸಿಗುವ ದಿನಗಳು ಬರಲಿ ಎಂದು ಆಶಿಸುತ್ತೇನೆ. ಬೆಂಬಲ ಬೆಲೆ ಯೋಜನೆಯಲ್ಲಿ ಎಲ್ಲ ಬೆಳೆಗಳನ್ನು ಸೇರ್ಪಡೆ ಮಾಡಿಲ್ಲ. ರಾಜ್ಯ ಸರ್ಕಾರ ಸತತ ಪ್ರಯತ್ನದ ಫಲವಾಗಿ ಇದೇ ಮೊದಲ ಬಾರಿಗೆ 17 ಬೆಳೆಗಳನ್ನು ಬೆಂಬಲ ಬೆಲೆ ಯೋಜನೆ ವ್ಯಾಪ್ತಿಯಲ್ಲಿ ತರಲಾಗಿದೆ ಎಂದು ಹೇಳಿದರು.
ಕೃಷಿ ಸಾಲ ವಿತರಣೆಗೆ ಯಾವುದೇ ಡಿಸಿಸಿ ಬ್ಯಾಂಕುಗಳು ಜಾಮೀನು ಕೇಳುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳು ಆರ್‌ಬಿಐ ಮಾನದಂಡದ ಪ್ರಕಾರ ಕಾರ್ಯನಿರ್ವಹಿಸಬೇಕಿರುವುದರಿಂದ ಜಾಮೀನು ಕೇಳಲಾಗುತ್ತಿದೆ. ಭೂಮಿಗೆ ಒಳ್ಳೆಯ ಬೆಲೆ ಇದೆ. ಉದ್ಯೋಗ ನೀಡುವುದರಲ್ಲಿ ರೈತರೇ ಅಗ್ರಸ್ಥಾನದಲ್ಲಿದ್ದು, ಪ್ರತಿಶತ 70ರಷ್ಟು ಜನರಿಗೆ ಉದ್ಯೋಗ ನೀಡುತ್ತಿದ್ದಾರೆ. ರೈತರು ಕೃಷಿ ಸಾಲ ಕೇಳುವ ಪರಿಸ್ಥಿತಿ ಬದಲಾಗಿ ಸಾಲ ಕೊಡುವ ಶಕ್ತಿಯನ್ನು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕೂಡ ಅಗತ್ಯ ನೆರವು ಸಹಕಾರ ನೀಡುತ್ತಿದೆ ಎಂದರು.
ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಎರಡು ಏತ ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಹಿಂದಿನ ಸರ್ಕಾರ 90 ಸಾವಿರ ಕೋಟಿ ರೂ. ಬಿಲ್ ಬಾಕಿ ಉಳಿಸಿ ಹೋಗಿದ್ದರಿಂದ ಯಾವುದೇ ಹೊಸ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ ಜಿಲ್ಲೆಯ ಎರಡು ಯೋಜನೆಗಳಿಗೆ ಒಪ್ಪಿಗೆ ದೊರೆತಿದೆ. ಬೇಡ್ತಿ ವರದಾ ನದಿ ಜೋಡಣೆಗೆ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಟೆಂಡರ್ ಪ್ರಕ್ರಿಯೆ ಹಂತದವರೆಗೆ ಸಾಗುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚಟುವಟಿಕೆಗಳು ನಡೆದಿವೆ. ರೈತರಿಗೆ ಈ ವಿಷಯದಲ್ಲಿ ಯಾವುದೇ ಸಂದೇಹ ಬೇಡ ಎಂದು ಹೇಳಿದರು.
ಬ್ಯಾಂಕುಗಳಲ್ಲಿನ ಕೃಷಿ ಸಾಲದ ಮೇಲಿನ ಬಡ್ಡಿ ದರದಲ್ಲಿ ಹೆಚ್ಚು ಕಡಿಮೆ ಇರಲು ಆ ಬ್ಯಾಂಕುಗಳಲ್ಲಿನ ಠೇವಣಿ ಮೇಲಿನ ಬಡ್ಡಿ ದರವೂ ಕಾರಣವಾಗಲಿದೆ. ಕೆಲವು ಬ್ಯಾಂಕುಗಳು ಹೆಚ್ಚು ಬಡ್ಡಿ ನೀಡುತ್ತವೆ. ಸಹಜವಾಗಿ ಅಂತಹ ಬ್ಯಾಂಕುಗಳಲ್ಲಿ ಕೃಷಿ ಸಾಲದ ಮೇಲಿನ ಬಡ್ಡಿ ದರ ಹೆಚ್ಚಿಗೆ ಇರಲಿದೆ. ರೈತರ ಸಮಸ್ಯೆಗಳಿಗೆ ವಿವರಣೆ ನೀಡಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ್, ಬೆಳೆ ಹಾನಿ ಪರಿಹಾರವನ್ನು ಶೀಘ್ರ ವಿತರಣೆ ಮಾಡಲಾಗುವುದು. ಜಮೀನುಗಳ ದಾರಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು. ರೈತರ ಆಥ್ಮಹತ್ಯೆ ಪ್ರಕರಣಗಳ ಪರಿಹಾರ ವಿತರಣೆಗೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಪ್ರಕಾಶ್ ಕೋಳಿವಾಡ, ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವ ನೀರಲಗಿ, ಜಿಪಂ ಸಿಇಒ ರುಚಿ ಬಿಂದಾಲ್, ಎಸ್ಪಿ ಯಶೋಧ ವಂಟಿಗೋಡಿ ಉಪಸ್ಥಿತರಿದ್ದರು.