Wednesday, February 26, 2025
Menu

11 ಸಾವಿರ ಕೋಟಿ ಮೊತ್ತದ ನೀರಾವರಿ ಯೋಜನೆಗಳಿಗೆ ಕೇಂದ್ರಕ್ಕೆ ಪ್ರಸ್ತಾವನೆ: ಡಿಕೆ ಶಿವಕುಮಾರ್

dk shivakumar

ಬೆಂಗಳೂರು: “ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ 11 ಸಾವಿರ ಕೋಟಿ ಮೊತ್ತದ ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಜತೆಗೆ ಮೇಕೆದಾಟು ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಜಲಶಕ್ತಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಶಿವಕುಮಾರ್ ಅವರು ಬುಧವಾರ ಮಾತನಾಡಿದರು. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ, ಬಿಎಂಆರ್ ಡಿಎ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಉಪಸ್ಥಿತರಿದ್ದರು.

“ರಾಜಸ್ಥಾನದ ಉದಯಪುರದಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯದಿಂದ ಆಯೋಜಿಸಲಾಗಿದ್ದ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳ 34 ಜಲಸಂಪನ್ಮೂಲ ಸಚಿವರು, 4-5 ಮುಖ್ಯಮಂತ್ರಿಗಳು, ಕೆಲವು ರಾಜ್ಯಗಳ ಉಪಮುಖ್ಯಮಂತ್ರಿಗಳು ಭಾಗವಹಿಸಿದ್ದರು. ನಮ್ಮ ರಾಜ್ಯದಿಂದ ನಾನು ಹಾಗೂ ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಭಾಗವಹಿಸಿದ್ದೆವು. ನಮ್ಮ ರಾಜ್ಯದ ನೀರಾವರಿ ಯೋಜನೆಗಳ ವಿಚಾರವನ್ನು ನಾನು ಪ್ರಸ್ತಾಪ ಮಾಡಿದ್ದೆ. ಈ ವಿಚಾರವಾಗಿ ಜಲಶಕ್ತಿ ಸಚಿವರ ಬಳಿಯೂ ವೈಯಕ್ತಿಕವಾಗಿ ಈ ವಿಚಾರ ಪ್ರಸ್ತಾಪಿಸಿದ್ದೆವು. ನಂತರ ಕೇಂದ್ರ ಜಲಶಕ್ತಿ ಸಚಿವರು ನಿನ್ನೆ ಸಭೆ ಮಾಡಲು ಸಮಯ ನೀಡಿದ್ದರು. ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ರಾಜ್ಯದ ಎಲ್ಲಾ ಅಧಿಕಾರಿಗಳ ಸಭೆ ಮಾಡಿದೆವು” ಎಂದು ತಿಳಿಸಿದರು.

ಮೇಕೆದಾಟು ಯೋಜನೆ ಬಗ್ಗೆ ನಿಲುವು ಕೇಳಿದ್ದೇವೆ

“ಈ ಯೋಜನೆ ವಿಚಾರವಾಗಿ ಕೇಂದ್ರ ಸರ್ಕಾರದ ನಿಲುವೇನು ಎಂದು ತಿಳಿಸುವಂತೆ ಕೇಳಿದ್ದೇವೆ. ಈ ವಿಚಾರದಲ್ಲಿ ಸಮಯವ್ಯರ್ಥ ಮಾಡುವುದು ಬೇಡ. ಈ ಯೋಜನೆ ಮಾಡಲು ನೀವು ಬದ್ಧರಾಗಿದ್ದೀರಾ ಅಥವಾ ಇಲ್ಲವೇ? ಕೇಂದ್ರ ಜಲಶಕ್ತಿ ಸಚಿವಾಲಯ ನ್ಯಾಯದ ಸ್ಥಾನದಲ್ಲಿ ಕೂತಿದ್ದು, ಈ ಯೋಜನೆ ಬಗ್ಗೆ ನಿಲುವೇನು ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಳಿದ್ದೇವೆ. ಈ ಯೋಜನೆಯಿಂದ ಎರಡೂ ರಾಜ್ಯಗಳಿಗೆ ಉಪಯೋಗವಾಗಬೇಕು. ಇನ್ನು ಪೆನ್ನಾರ್ ನದಿ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡು ನಡುವೆ ತಿಕ್ಕಾಟವಿದ್ದು, ಸಂಧಾನದ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳಬಹುದೇ ಎಂದು ಕೇಳಿದ್ದೇವೆ. ಕಳೆದ ವರ್ಷ 300 ಟಿಎಂಸಿ, ಅದಕ್ಕೂ ಹಿಂದಿನ ವರ್ಷ 400 ಟಿಎಂಸಿ ನೀರು ಸಮುದ್ರಕ್ಕೆ ಸೇರಿದೆ. ಇದನ್ನು ನಾವು ಬಳಸಿಕೊಳ್ಳಬೇಕು” ಎಂದು ತಿಳಿಸಿದರು.

ನವಲಿ ಅಣೆಕಟ್ಟು ವಿಚಾರವಾಗಿ ಮಾರ್ಚ್ ಮೊದಲವಾರ ಆಂಧ್ರ ಸಿಎಂ ಜತೆ ಚರ್ಚೆ

“ಈ ಮಧ್ಯೆ ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಸುಮಾರು 30 ಟಿಎಂಸಿ ನೀರು ನಷ್ಟವಾಗುತ್ತಿದೆ. ಹೀಗಾಗಿ ನವಲಿ ಬಳಿ ಸಮಾನಾಂತರ ಅಣೆಕಟ್ಟು ನಿರ್ಮಾಣ ಮಾಡುವ ಯೋಜನೆ ಇದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸಚಿವರು ಹಾಗೂ ಅಧಿಕಾರಿಗಳ ಜತೆ ಪ್ರತ್ಯೇಕ ಸಭೆ ಮಾಡಲಾಯಿತು. ಅದನ್ನು ಕೇಂದ್ರ ಸಚಿವರ ಗಮನಕ್ಕೂ ತರಲಾಯಿತು. ಈ ಬಗ್ಗೆ ನೀವೆ ಕೂತು ಚರ್ಚೆ ಮಾಡಿ. ನೀವು ಒಮ್ಮತಕ್ಕೆ ಬಂದರೆ ನಮಗೂ ಒಪ್ಪಿಗೆ ಇದೆ ಎಂದು ಕೇಂದ್ರ ಸಚಿವರು ತಿಳಿಸಿದರು. ಈ ವಿಚಾರವಾಗಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಪ್ರತ್ಯೇಕವಾಗಿ ಕರೆ ಮಾಡಿ ಮಾರ್ಚ್ ಮೊದಲ ವಾರದಲ್ಲಿ ಚರ್ಚೆ ಮಾಡಲು ಸಮಯಾವಕಾಶ ನೀಡಿ ಎಂದು ಕೇಳಿದ್ದೇವೆ. ಈ ಯೋಜನೆಗೆ ನಮ್ಮ ತಾಂತ್ರಿಕ ಸಲಹಾ ಸಮಿತಿಯು ಪರ್ಯಾಯ ಮಾರ್ಗವನ್ನು ಸೂಚಿಸಿದ್ದು, ಇದನ್ನು ಉಭಯ ರಾಜ್ಯಗಳ ಜತೆ ಚರ್ಚೆ ಮಾಡದೇ ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ” ಎಂದು ತಿಳಿಸಿದರು.

“ಈ ಹಿಂದೆ ಹೂಳೆತ್ತಲು ಅನೇಕ ಪ್ರಸ್ತಾವನೆಗಳು ಬಂದಿದ್ದವು. 24-30 ಟಿಎಂಸಿ ನೀರು ಸಂಗ್ರಹವಾಗುವಷ್ಟು ಹೂಳನ್ನು ಎತ್ತಿ ಎಲ್ಲಿ ಹಾಕಬೇಕು? ಇದಕ್ಕೆ ತಗಲುವ ವೆಚ್ಚ ಗಮನಿಸಿ ತಾಂತ್ರಿಕ ಸಮಿತಿ ಈ ಪ್ರಸ್ತಾವನೆ ನೀಡಿದೆ. ಆಂಧ್ರ ಪ್ರದೇಶ ಸಿಎಂ ಮಾರ್ಚ್ ಮೊದಲ ವಾರದಲ್ಲಿ ಸಭೆಗೆ ಕಾಲಾವಕಾಶ ನೀಡಲಿದ್ದು, ಅವರು ಸಮಯ ನಿಗದಿ ಮಾಡಿದ ಬಳಿಕ ನಾನು ಹಾಗೂ ಇಡೀ ತಂಡ ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದೇವೆ” ಎಂದರು.

ಮಾ.18ಕ್ಕೆ ಮತ್ತೊಮ್ಮೆ ಜಲಶಕ್ತಿ ಸಚಿವರೊಂದಿಗೆ ಸಭೆ

“ಉಳಿದಂತೆ ನದಿ ಜೋಡಣೆ ವಿಚಾರವಾಗಿ ಕೇಂದ್ರ ಸರ್ಕಾರದ ಮುಂದೆ ಅನೇಕ ಪ್ರಸ್ತಾಪಗಳಿದ್ದು, ನಾವು ನಮ್ಮ ಪಾಲಿನ ನೀರಿನ ಬಗ್ಗೆ ಪ್ರಸ್ತಾವನೆ ಮಾಡಿದ್ದೇವೆ. ಇದರ ಜತೆಗೆ ರಾಜ್ಯದ ಆಣೆಕಟ್ಟುಗಳ ಗೇಟ್ ಬದಲಾವಣೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ತಾಂತ್ರಿಕ ಸಮಿತಿ ನೇಮಿಸಲಾಗಿದೆ. ಇನ್ನು ಕಾಲುವೆಗಳ ನೀರು ಕೊನೆ ಭಾಗದವರೆಗೂ ತಲುಪಲು ಅಗತ್ಯ ಕ್ರಮ ಕೈಗೊಳ್ಳಲು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಯೋಜನೆ ರೂಪಿಸಲಾಗಿದೆ.

ಮಾರ್ಚ್ 18ರ ಒಳಗಾಗಿ ಮತ್ತೆ ಭೇಟಿ ಮಾಡಿ ಸಭೆ ನಡೆಸಲು ಕೇಂದ್ರ ಸಚಿವರ ಬಳಿ ಕಾಲಾವಕಾಶ ಪಡೆಯಲಾಗಿದೆ. ಜಲಶಕ್ತಿ ಇಲಾಖೆ ರಾಜ್ಯ ಸಚಿವರಾದ ಸೋಮಣ್ಣ ಅವರ ಅಭಿಪ್ರಾಯವನ್ನು ಪಡೆದು ನಾವು ಸಭೆ ಮಾಡಿದ್ದೇವೆ. ನಮ್ಮ ರಾಜ್ಯದ ಹಿತಕ್ಕೆ ಪರವಾಗಿ ಅವರು ಚರ್ಚೆ ಮಾಡಿದ್ದಾರೆ” ಎಂದರು.

ಕೃಷ್ಣಾ ಮೆಲ್ದಂಡೆ ಯೋಜನೆ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಮನವಿ:

ಕೃಷ್ಣಾ ಮೇಲ್ದಂಡೆ ಯೋಜನೆ, ಆಲಮಟ್ಟಿ ಅಣೆಕಟ್ಟಿನ ವಿಚಾರವಾಗಿ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸುವುದು ಬಾಕಿ ಇದ್ದು, ಆದಷ್ಟು ಬೇಗ ಅಧಿಸೂಚನೆ ಹೊರಡಿಸಬೇಕು. ನಮ್ಮ ಪಾಲಿನ ನೀರನ್ನು ನಾವು ಬಳಸಿಕೊಳ್ಳಬೇಕು. ಇದಕ್ಕಾಗಿ ಅಗತ್ಯ ಅನುಮತಿ ನೀಡಬೇಕು. ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ನಾವು ಕಾಲುವೆ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿ ಆರಂಭಿಸಿದ್ದೇವೆ. ಭೂಸ್ವಾಧೀನ ಪ್ರಕ್ರಿಯೆಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡಿದ್ದಾರೆ. ಯೋಜನೆ ವೆಚ್ಚ ದಿನೇ ದಿನೆ ಏರಿಕೆಯಾಗುತ್ತದೆ ಎಂಬ ಕಾರಣಕ್ಕೆ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ಮುಗಿಸಲು ತೀರ್ಮಾನಿಸಿದ್ದೇವೆ” ಎಂದರು.

“ಕಳಸಾ ಬಂಡೂರಿ ಯೋಜನೆಗೆ ಅಗತ್ಯವಿರುವ ಅರಣ್ಯ ಇಲಾಖೆ ಅನುಮತಿ ಬಾಕಿ ಇದೆ. ಈ ಹಿಂದೆ ನಾನು ಹಾಗೂ ಮುಖ್ಯಮಂತ್ರಿಗಳು ಈ ಮಂಡಳಿಯ ನೇತೃತ್ವ ವಹಿಸಿರುವ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದೆವು. ಆಗ ಪ್ರಧಾನ ಮಂತ್ರಿಗಳು ಈ ವಿಚಾರವಾಗಿ ತೀರ್ಮಾನ ಮಾಡಲು ಜಲಶಕ್ತಿ ಸಚಿವರಿಗೆ ತಿಳಿಸಿರುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾವು ಕೇಂದ್ರ ಸಚಿವರ ಮೇಲೆ ಒತ್ತಡ ಹಾಕುತ್ತಿದ್ದೇವೆ. ಈ ಮಧ್ಯೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಜತೆಗೂ ಚರ್ಚೆ ಮಾಡಿದ್ದು, ಅವರು ಕೂಡ ಅರಣ್ಯ ಇಲಾಖೆ ಸಚಿವಾಲಯದ ಜತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ” ಎಂದು ಮಾಹಿತಿ ನೀಡಿದರು.

“ಇನ್ನು ಸಣ್ಣ ನೀರಾವರಿ ಇಲಾಖೆಯ ಯೋಜನೆಗೆ ಸಂಬಂಧಿಸಿದಂತೆ ನಮ್ಮ ಸಚಿವರಾದ ಬೋಸರಾಜು ಅವರು ಚರ್ಚೆ ಮಾಡಿದ್ದು, 3 ಸಾವಿರ ಕೋಟಿಯಷ್ಟು ಅನುದಾನ ಕೋರಿದ್ದಾರೆ. ನೀರಾವರಿಗೆ ಹೆಚ್ಚು ಅವಕಾಶವಿರುವ ರಾಜ್ಯಗಳ ಪೈಕಿ ರಾಜಸ್ಥಾನದ ನಂತರ ಕರ್ನಾಟಕವಿದೆ. ನಮ್ಮಲ್ಲಿ ಒಣಭೂಮಿ ಹೆಚ್ಚಾಗಿದ್ದು, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅವಕಾಶವಿದೆ. ಕೇಂದ್ರ ಜಲಶಕ್ತಿ ಸಚಿವರು ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನಮ್ಮ ಯೋಜನೆಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ” ಎಂದರು.

ಸಂಸದರಿಗೆ ಪತ್ರ

“ಇನ್ನು ಇಲಾಖೆವತಿಯಿಂದ ಎಲ್ಲಾ ಸಂಸದರಿಗೆ ಪತ್ರ ಬರೆದು ಅವರ ಕ್ಷೇತ್ರಗಳಿಗೆ ಸಂಬಂಧಿಸಿದ ಹಾಗೂ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಅವರು ಕೂಡ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಈ ಯೋಜನೆಗಳಿಗೆ ಅನುಮತಿ ಪಡೆಯಬಹುದು. ಕೆಲವು ಸಂಸದರು ನಮಗೆ ಈ ವಿಚಾರ ಗೊತ್ತಿಲ್ಲ, ಮಾಹಿತಿ ನೀಡಿಲ್ಲ ಎಂದು ಹೇಳುತ್ತಿರುವ ಹಿನ್ನೆಲೆಯಲ್ಲಿ ಪತ್ರ ಬರೆದು ಮಾಹಿತಿ ನೀಡಲು ಮುಂದಾಗಿದ್ದೇನೆ. ಇನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ 5,300 ಕೋಟಿ ಅನುದಾನ ವಿಚಾರವಾಗಿ ಕೇಂದ್ರ ಸಚಿವರು ತಾಂತ್ರಿಕ ಕಾರಣ ನೀಡುತ್ತಿದ್ದರು. ನಾವು ಕೇಂದ್ರ ಸರ್ಕಾರಕ್ಕೆ ಒದಗಿಸಬೇಕಾದ ಎಲ್ಲಾ ದಾಖಲೆ ಒದಗಿಸಿದ್ದು, ಅವರು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಬೇಕಿದೆ” ಎಂದು ತಿಳಿಸಿದರು.

ಪ್ರಶ್ನೋತ್ತರ

ನಾರಾಯಣಪುರ ಅಣೆಕಟ್ಟಿನಿಂದ ತೆಲಂಗಾಣಕ್ಕೆ ರಾತ್ರೋರಾತ್ರಿ ನೀರು ಬಿಡಲಾಗಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ಇಲ್ಲಿ ಮುಚ್ಚುಮರೆ ಇಲ್ಲ. ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ನೆರೆ ರಾಜ್ಯಗಳ ಜತೆ ಪರಸ್ಪರ ಸಹಾಯ ಮಾಡಿಕೊಂಡು ಬರಲಾಗಿದೆ. ಅವರುಗಳು ಕೂಡ ಕೆಲವು ಸಂದರ್ಭದಲ್ಲಿ ನಮಗೆ ಸಹಾಯ ಮಾಡಿದ್ದು, 1 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿದೆ. ಇದು ಅನಧಿಕೃತವಾಗಿ ಬಿಟ್ಟಿರುವುದಲ್ಲ. ಆ ರಾಜ್ಯದ ಸಚಿವರು ಖುದ್ದಾಗಿ ಬಂದು ಮನವಿ ಮಾಡಿದ್ದರು, ನಾನು ಅನುಮತಿ ನೀಡಿ ನೀರು ಹರಿಸಲಾಗಿದೆ. ಅವರಿಗೆ ಸಹಾಯ ಮಾಡುವ ಪರಿಸ್ಥಿತಿ ಇದ್ದಾಗ, ನಮ್ಮ ಪರಿಸ್ಥಿತಿ ನೋಡಿಕೊಂಡು ಸಹಾಯ ಮಾಡಲಾಗಿದೆ, ನಮಗೆ ನೆರವಿನ ಅಗತ್ಯ ಇದ್ದಾಗ ಅವರು ಮಾಡಿದ್ದಾರೆ” ಎಂದು ಸ್ಪಷ್ಟಪಡಿಸಿದರು.

ಬೇಸಿಗೆ ಆರಂಭವಾಗುತ್ತಿದ್ದು ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಹೇಗಿದೆ ಎಂದು ಕೇಳಿದಾಗ, “ಕುಡಿಯುವ ನೀರಿಗೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ವ್ಯವಸಾಯಕ್ಕೆ ಸಂಬಂಧಿಸಿದಂತೆ ನಾವು ನಿಯಂತ್ರಣ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ನದಿ ಜೋಡಣೆಗೆ ವಿರೋಧ ಕೇಳಿಬರುತ್ತಿದ್ದು ಈ ವಿಚಾರವಾಗಿ ರಾಜ್ಯ ಸರ್ಕಾರದ ನಿಲುವೇನು ಎಂದು ಕೇಳಿದಾಗ, “ಯಾರೇ ವಿರೋಧ ಮಾಡಲಿ. ನಮಗೆ ರಾಜ್ಯ ಹಾಗೂ ರೈತರ ಹಿತ ಮುಖ್ಯ. ಸರ್ಕಾರದ ಯೋಜನೆಗಳನ್ನು ಜಾರಿ ಮಾಡುವಾಗ ಮರ ಕಡಿಯುವುದು ಸಹಜ. ಒಂದು ಮರ ಕಡಿದರೆ, ನಾಲ್ಕು ಮರ ಹೊಸದಾಗಿ ನೆಡುತ್ತೇವೆ” ಎಂದರು.

ನದಿ ಜೋಡಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಎಷ್ಟು ಟಿಎಂಸಿ ನೀರು ಕೇಳಿದೆ ಎಂದು ಪ್ರಶ್ನಿಸಿದಾಗ, “ಈ ವಿಚಾರವಾಗಿ ಇನ್ನು ಪ್ರಾಸ್ತಾವಿಕ ಸಭೆ ನಡೆಯುತ್ತಿದೆ. ಈ ವಿಚಾರವಾಗಿ ತಾಂತ್ರಿಕ ಸಮಿತಿ ವರದಿ ಬರಲಿ ನೋಡೋಣ” ಎಂದರು.

ಬೆಂಗಳೂರಿನಲ್ಲಿ ಕೊಳವೆ ಬಾವಿ ಕೊರೆಯುವುದು ಸ್ಥಗಿತಗೊಳಿಸಲಾಗಿದೆಯೇ ಎಂದು ಕೇಳಿದಾಗ, “ಈ ವಿಚಾರವಾಗಿ ಬಿಡಬ್ಲ್ಯೂಎಸ್ಎಸ್ ಬಿ ಹಾಗೂ ಪಾಲಿಕೆ ಜತೆ ನಾನು ಚರ್ಚೆ ಮಾಡಿದ್ದೆ. ಬೆಂಗಳೂರಿನಲ್ಲಿರುವ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಜಲಮಂಡಳಿ ಸುಪರ್ದಿಗೆ ನೀಡಲು ತೀರ್ಮಾನಿಸಿದ್ದೆವು. ಕೆಲವು ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಈ ತೀರ್ಮಾನ ಮಾಡಿದ್ದೇವೆ. ಜಲಮಂಡಳಿ ಈ ಎಲ್ಲಾ ಘಟಕಗಳನ್ನು ದುರಸ್ಥಿಗೊಳಿಸಲಿದೆ” ಎಂದು ತಿಳಿಸಿದರು.

ಕಳೆದ ಬೇಸಿಗೆಯಲ್ಲಿ ನೀರಿನ ಅಭಾವ ಹೆಚ್ಚಾದ ಪರಿಣಾಮ ಈ ಬಾರಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಕೇಳಿದಾಗ, “ನಾವು ಈಗಾಗಲೇ ಅಗತ್ಯ ಯೋಜನೆ ರೂಪಿಸಿದ್ದೇವೆ. ಜಲಮಂಡಳಿಯು ಪ್ರತಿ ವರ್ಷ 1 ಸಾವಿರ ಕೋಟಿ ನಷ್ಟ ಅನುಭವಿಸುತ್ತಿದೆ. ನೀರಿನ ದರ ಪರಿಷ್ಕರಣೆ ಮಾಡಿ ಎಂದು ನಮಗೆ ಒತ್ತಾಯ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *