ಚೆನ್ನೈ ಮೂಲದ ರಿಯಲ್ ಎಸ್ಟೇಟ್ ಕಂಪನಿ ಕಾಸಾಗ್ರಾಂಡ್ ತನ್ನ ಉದ್ಯೋಗಿಗಳಿಗೆ ನೀಡುವ ವಾರ್ಷಿಕ ಪ್ರಾಫಿಟ್ ಶೇರ್ ಬೋನಾಂಜಾ ಸ್ಕೀಮ್‌ನಡಿ 1,000 ಉದ್ಯೋಗಿಗಳನ್ನು ಲಂಡನ್‌ಗೆ ಒಂದು ವಾರದ ಪ್ರವಾಸಕ್ಕೆ ಕಳಿಸುತ್ತಿರುವುದಾಗಿ ಪ್ರಕಟಿಸಿದೆ.
ಹಲವು ಸಂಸ್ಥೆಗಳು , ಕಂಪೆನಿಗಳು ನಾನಾ ರೂಪಗಳಲ್ಲಿ ವಾರ್ಷಿಕ ಬೋನಸ್ ನೀಡುತ್ತವೆ. ಕೆಲವು ಸಂಸ್ಥೆಗಳು ಉದ್ಯೋಗಿಗಳಿಗೆ ಕಾರು, ಫ್ಲ್ಯಾಟ್, ಒಂದು ತಿಂಗಳ ಇಲ್ಲವೇ ಮೂರು ತಿಂಗಳ ಪೂರ್ಣ ವೇತನವಾಗಿ ಲಾಭಾಂಶ ವಿತರಣೆ ಘೋಷಿಸುತ್ತವೆ. ಆದರೆ ಕಾಸಾಗ್ರಾಂಡ್ ಉದ್ಯೋಗಿಗಳಿಗೆ ಲಾಭಾಂಶ ವಿತರಣೆಯಲ್ಲಿ ತನ್ನದೇ ಆದ ವೈಶಿಷ್ಟ್ಯತೆಯನ್ನು ದಾಖಲಿಸುತ್ತಿದೆ.
ಕೆಲವು ವರ್ಷಗಳಿಂದ ಕಂಪನಿ ಉದ್ಯೋಗಿಗಳಿಗೆ ಈ ರೀತಿಯ ಪ್ರವಾಸ ಆಯೋಜಿಸುತ್ತಿದೆ. 6 ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ಸಿಂಗಾಪುರ, ಥಾಯ್ಲೆಂಡ್, ಮಲೇಷ್ಯಾ, ದುಬೈ, ಸ್ಪೇನ್ ಮತ್ತು ಇತರ ದೇಶಗಳಿಗೆ ಕರೆದುಕೊಂಡು ಹೋಗಿದೆ ಎಂದು ಕಂಪನಿ ಹೇಳಿದೆ. ಈ ಕಾರ್ಯಕ್ರಮವು ಉದ್ಯೋಗಿಗಳಿಗೆ ಕಂಪೆನಿ ತಮ್ಮದೆಂಬ ಭಾವನೆ ಗಟ್ಟಿಗೊಳಿಸಿ ಅವರು ಹೊಂದಿದ್ದ ದೃಷ್ಟಿಕೋನವನ್ನು ಬದಲಾಯಿಸುವಲ್ಲಿ ನೆರವಾಗಿದೆ ಎಂಬುದನ್ನು ಕೆಲವು ಅನುಬವಗಳು ದೃಢಪಡಿಸಿರುವುದಾಗಿ ತಿಳಿಸಿದೆ.
ನಾವು ಸಂಪತ್ತನ್ನು ಹಂಚಿಕೊಳ್ಳುವುದರಲ್ಲಿ ನಂಬಿಕೆ ಇಡುತ್ತೇವೆ, ಅನೇಕ ಜನ ಜೀವನದಲ್ಲಿ ಮೊದಲ ಬಾರಿಗೆ ವಿದೇಶಕ್ಕೆ ಪ್ರಯಾಣಿಸುತ್ತಿದ್ದಾರೆ ಎಂಬುದು ನಮಗೆ ಅಪಾರ ಸಂತೋಷ ನೀಡುತ್ತದೆ, ನಾವೆಲ್ಲರೂ ಕನಸುಗಳನ್ನು ನನಸಾಗಿಸಿಕೊಳ್ಳುವುದನ್ನು, ನೆನಪುಗಳನ್ನು ದಾಖಲಿಸುವುದನ್ನು ಮತ್ತು ಹೊಸ ಹೆಮ್ಮೆಯೊಂದಿಗೆ ಮರಳುವುದನ್ನು ನೋಡುವುದು ಈ ಯೋಜನೆಯ ಪ್ರತಿಫಲ ಎಂದು ಪರಿಗಣಿಸುವುದಾಗಿ ಕಂಪೆನಿ ಶುಭ ಹಾರೈಸಿದೆ.
ಕಂಪನಿಯ ಸಾಧನೆಗಳು ಅದರ ಉದ್ಯೋಗಿಗಳಿಂದ ಸಾಕಾರವಾಗುತ್ತವೆ, ಆದ್ದರಿಂದ ಅವರೊಂದಿಗೆ ಸಾಧ್ಯವಾದಷ್ಟು ಉನ್ನತವಾದ ರೀತಿಯಲ್ಲಿ ಸಂಭ್ರಮವನ್ನು ಆಚರಿಸಬೇಕು ಎಂದು ಕಂಪೆನಿ ಅಭಿಪ್ರಾಯಪಟ್ಟಿದೆ.
2003 ರಲ್ಲಿ ಸ್ಥಾಪನೆಯಾದ ಕಾಸಾಗ್ರಾಂಡ್, ಎರಡು ದಶಕಗಳಿಗೂ ಹೆಚ್ಚಿನ ಅನುಭವದೊಂದಿಗೆ 53 ಮಿಲಿಯನ್ ಚದರ ಅಡಿಗಳಿಗಿಂತ ಹೆಚ್ಚು ವಸತಿ ಜಾಗವನ್ನು ಒಳಗೊಂಡ 160 ಕ್ಕೂ ಹೆಚ್ಚು ಕಟ್ಟಡಗಳನ್ನು ಪೂರ್ಣಗೊಳಿಸಿದೆ.


