ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಪ್ರಕಟಿಸಿದ್ದು, ಸೀಟು ಹಂಚಿಕೆಯಾದವರು ಸೆ.3ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೂಚನೆ ನೀಡಿದೆ.
ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳ ಎರಡನೇ ಸುತ್ತಿನ ಅಂತಿಮ ಫಲಿತಾಂಶವನ್ನು ಎಂಸಿಸಿ ಫಲಿತಾಂಶ ಹೊರಬಿದ್ದ ನಂತರ ಪ್ರಕಟಿಸಲಾಗುವುದು. ಅಲ್ಲಿಯವರೆಗೂ ಈ ಕೋರ್ಸ್‌ಗಳಿಗೆ ಸೀಟು ಹಂಚಿಕೆಯಾದವರಿಗೆ ಯಾವುದೇ ಛಾಯ್ಸ್ ಆಯ್ಕೆಗೆ ಅವಕಾಶ ಇರುವುದಿಲ್ಲ ಎಂದು ಪ್ರಾಧಿಕಾರ ತಿಳಿಸಿದೆ.
ವೈದ್ಯಕೀಯ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಅಖಿಲ ಭಾರತ ಮಟ್ಟದ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬವಾಗುತ್ತಿರುವ ಕಾರಣ ಯುಜಿಸಿಇಟಿ ಅಭ್ಯರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳನ್ನು ಹೊರತುಪಡಿಸಿ, ಇತರ ಎಲ್ಲ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.
ಆಯ್ಕೆಗೂ ಚಾಲನೆ ನೀಡಲಾಗಿದೆ. ಆಯ್ಕೆ-1 ಮತ್ತು ಆಯ್ಕೆ- 2 ಅನ್ನು ಆಯ್ಕೆ ಮಾಡಿದವರಿಗೆ ಶುಲ್ಕ ಪಾವತಿಸಲು ಸೆ.2ರವರೆಗೆ ಅವಕಾಶ ನೀಡಲಾಗಿದೆ. ಸೆ.3ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು. ಪ್ರವೇಶ ಪ್ರಕ್ರಿಯೆಗೆ ಹೆಚ್ಚಿನ ಸಮಯ ಇಲ್ಲದ ಕಾರಣ ವೃತ್ತಿಪರ ಕಾಲೇಜುಗಳು ಭಾನುವಾರ ಸೇರಿದಂತೆ ಎಲ್ಲ ಸಾರ್ವತ್ರಿಕ ರಜಾ ದಿನಗಳಂದು ಕಾರ್ಯನಿರ್ವಹಿಸಬೇಕೆಂದು ಸೂಚಿಸಲಾಗಿದೆ.
ಛಾಯ್ಸ್-1 ಆಯ್ಕೆ ಮಾಡಿದವರು ಶುಲ್ಕ ಪಾವತಿಸಿ ಕಾಲೇಜಿಗೆ ಹೋಗಬೇಕು. ಛಾಯ್ಸ್-2 ಆಯ್ಕೆ ಮಾಡಿಕೊಂಡವರು ಶುಲ್ಕ ಪಾವತಿಸಿ, ಅಪ್ ಗ್ರೇಡೇಷನ್‌ಗೆ ಕಾಯಬಹುದು. ಛಾಯ್ಸ್-3 ಆಯ್ಕೆ ಮಾಡಿದವರು 10 ಸಾವಿರ ರೂಪಾಯಿ ಕಾಷನ್ ಡೆಪಾಸಿಟ್ ಕಟ್ಟಬೇಕು. ಛಾಯ್ಸ್-4 ಆಯ್ಕೆ ಮಾಡಿದವರು ಸಿಇಟಿ ಪ್ರಕ್ರಿಯೆಯಿಂದ ಹೊರಹೋಗಬೇಕಾಗುತ್ತದೆ ಎಂದು ತಿಳಿಸಿದೆ. ಸೀಟು ಹಂಚಿಕೆ ನಂತರ ಯಾವುದೇ ಛಾಯ್ಸ್ ಆಯ್ಕೆ ಮಾಡದವರನ್ನು ಈ ಸುತ್ತಿನಲ್ಲಿ ಇಡೀ ಪ್ರಕ್ರಿಯೆಯಿಂದ ಹೊರ ಹಾಕಲಾಗುತ್ತದೆ. ಅಂತಹವರನ್ನು ಪುನಃ ಒಳ ಬರುವುದಕ್ಕೂ ಬಿಡುವುದಿಲ್ಲ. ಸೀಟು ಬೇಕೋ-ಬೇಡವೋ ಎನ್ನುವುದನ್ನು ತಮ ಛಾಯ್ಸ್ ಆಯ್ಕೆ ಮೂಲಕ ಖಾತರಿಪಡಿಸಬೇಕು ಎಂದು ಹೇಳಿದೆ.