ಗಂಡನನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಹಲ್ಲೆ ನಡೆಸಿದ ಆರೋಪ ಮೇಲೆ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ಹಾಗೂ ಪ್ರಾಧ್ಯಾಪಕ ಪ್ರೊ. ಬಿ.ಸಿ.ಮೈಲಾರಪ್ಪ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಬಸವೇಶ್ವರ ನಗರ ಠಾಣೆ ಪೊಲೀಸರು 37 ವರ್ಷದ ಮಹಿಳೆ ನೀಡಿದ ದೂರಿನನ್ವಯ ಮೈಲಾರಪ್ಪ ಅವರನ್ನು ಶುಕ್ರವಾರ ಬಂಧಿಸಿದೆ.
ದೂರುದಾರ ಮಹಿಳೆ 2022ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಅಂದಿನ ನಿರ್ದೇಶಕರಾಗಿದ್ದ ಪ್ರೊ ಬಿ.ಸಿ ಮೈಲಾರಪ್ಪ ನಡೆಸುತ್ತಿದ್ದ ಕರ್ನಾಟಕ ರಾಜ್ಯ ಹರಿಜನ ಸೇವಕ ಸಂಘದಲ್ಲಿ ಕೆಲಸಕ್ಕೆ ಸೇರಿದ್ದರು.
2 ವರ್ಷ ಕೆಲಸ ಮಾಡಿ 2024ರ ಮೇ ತಿಂಗಳಿನಲ್ಲಿ ಕೆಲಸ ಬಿಟ್ಟಿದ್ದರು. ಆದರೆ 2024ರ ಅಂತ್ಯದಲ್ಲಿ ಮಹಿಳೆಯ ಪತಿ ಅಸಹಜವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಮಗನ ಸಾವಿಗೆ ನೀನೇ ಕಾರಣವೆಂದು ಆರೋಪಿಸಿ ಮಹಿಳೆಯ ಅತ್ತೆ, ಮಾವ ಪೊಲೀಸ್ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರು ನೀಡಿದ್ದರು.
ಈ ಸಂಕಷ್ಟ ಸಮಯದಲ್ಲಿ ನೆರವಿಗೆ ಬಂದ ಮೈಲಾರಪ್ಪ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದಾಖಲಾದ ಪ್ರಕರಣ ಮತ್ತು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆಕೆಯ ಪರ ವಾದಿಸಿ, ಸಾಕಷ್ಟು ಓಡಾಟ ನಡೆಸಿದ್ದರು.
ಈ ನಡುವೆ ಮಹಿಳೆಯ ತಂದೆಯ ಆಸ್ತಿ ಹಂಚಿಕೆ ವಿಚಾರವಾಗಿ ಆಕೆಯ ಚಿಕ್ಕಪ್ಪನೊಂದಿಗೆ ಮನಸ್ತಾಪವುಂಟಾಗಿ ಸಹೋದರನ ಸಹಾಯದಿಂದ ವಕೀಲರ ಮೂಲಕ ನ್ಯಾಯಾಲಯದಲ್ಲಿ ಮಹಿಳೆ ಪ್ರಕರಣ ದಾಖಲಿಸಿದ್ದರು. ಇದೇ ವಿಚಾರವಾಗಿ ಆಗಾಗ ತಮ್ಮ ವಕೀಲರನ್ನು ಮಹಿಳೆ ಭೇಟಿ ಮಾಡುತ್ತಿದ್ದರು. ಆದರೆ ಈ ವಿಷಯ ತಿಳಿದ ಮೈಲಾರಪ್ಪ ಅವರು ‘ಮಾತನಾಡಬೇಕು ಬಾ’ ಎಂದು ರಾಜಾಜಿನಗರದ ಹೋಟೆಲ್ ಬಳಿ ಕರೆಸಿ ನಡುರಸ್ತೆಯಲ್ಲಿಯೇ ನಿಂದಿಸಿ, ಜುಟ್ಟು ಹಿಡಿದು ಹಲ್ಲೆ ನಡೆಸಿದ್ದಾರೆ.
ಮನೆಯ ಬಳಿ ಬಂದು ಬಾಗಿಲು ತೆರೆಯುವಂತೆ ಒತ್ತಾಯಿಸುವುದು, ಕರೆ ಮಾಡಿ ಅಸಭ್ಯವಾಗಿ ಮಾತನಾಡುವುದು ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಸವೇಶ್ವರನಗರ ಠಾಣೆಗೆ ಮಹಿಳೆ ದೂರು ನೀಡಿದ್ದರು.
ಮಹಿಳೆಯ ದೂರಿನ ಆಧಾರ ಮೇಲೆ ಬಸವೇಶ್ವರ ನಗರ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಹಾಗೂ ಮಹಿಳೆಯ ಪರ ವಕೀಲರ ಸಂಬಂಧಿಕರ ಮನೆ ಬಳಿ ತೆರಳಿ ಗಲಾಟೆ ಮಾಡಿರುವ ಆರೋಪದಡಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿಯೂ ಒಂದು ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಯನ್ನ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

 


